ಕೆ.ಆರ್.ಪೇಟೆ-ಗ್ರಾಮ ಆಡಳಿತಾಧಿಕಾರಿಗಳ-ಪ್ರತಿಭಟನೆಗೆ-ರಾಜ್ಯ -ಆರ್.ಟಿ.ಓ-ಅಧಿಕಾರಿಗಳು-ಸಂಘದ-ಅಧ್ಯಕ್ಷ-ಮಲ್ಲಿಕಾರ್ಜುನ್- ಬೆಂಬಲ-6ನೇ-ದಿನಕ್ಕೆ-ಕಾಲಿಟ್ಟ-ಗ್ರಾಮ-ಆಡಳಿತಾಧಿಕಾರಿಗಳ-ಮುಷ್ಕರ

ಕೆ.ಆರ್.ಪೇಟೆ- ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ತಾಲ್ಲೂಕು ಗ್ರಾಮ ಆಡಳಿತ ಅಧಿಕಾರಿಗಳು ಕೆ.ಆರ್.ಪೇಟೆ ಪಟ್ಟಣದ ತಾಲೂಕು ಕಚೇರಿಯ ಆವರಣದಲ್ಲಿ ನಡೆಸುತ್ತಿರುವ ಅನಿರ್ಧಿಷ್ಠಾವಧಿ ಮುಷ್ಕರವು 6ನೇ ದಿನಕ್ಕೆ ಕಾಲಿಟ್ಟಿದ್ದು, ಪ್ರತಿಭಟನಾ ಸ್ಥಳಕ್ಕೆ ರಾಜ್ಯ ಆರ್.ಟಿ.ಓ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷರು ಹಾಗೂ ಸಮಾಜ ಸೇವಕ ಮಲ್ಲಿಕಾರ್ಜುನ್ ಅವರು ಭೇಟಿ ನೀಡಿ ತಮ್ಮ ಬೆಂಬಲ ವ್ಯಕ್ತ ಪಡಿಸಿದರು.


ಈ ವೇಳೆ ಮಾತನಾಡಿದ ಆರ್.ಟಿ.ಓ ಮಲ್ಲಿಕಾರ್ಜುನ್ ಅವರು ಗ್ರಾಮ ಆಡಳಿತಾಧಿಕಾರಿಗಳು ನಮ್ಮ ಗ್ರಾಮೀಣ ಭಾಗದ ರೈತರಿಗೆ ಬೇಕಾದ ಎಲ್ಲಾ ಪ್ರಮಾಣಪತ್ರಗಳು ಸೇರಿದಂತೆ ಭೂಮಿಗೆ ಸಂಬಂಧಪಟ್ಟ ಎಲ್ಲಾ ಸೇವೆಗಳನ್ನು ರೈತರ ಮನೆ ಬಾಗಿಲಿಗೆ ಹೋಗಿ ಸಲ್ಲಿಸುತ್ತಿದ್ದಾರೆ. ಇವರು ಸಮರ್ಪಕವಾಗಿ ಕರ್ತವ್ಯ ನಿರ್ವಹಿಸಬೇಕಾದರೆ ಅವರಿಗೆ ಗುಣಮಟ್ಟದ ಮೊಬೈಲ್, ಲ್ಯಾಪ್‌ಟಾಪ್, ಇಂಟರ್‌ನೆಟ್ ವ್ಯವಸ್ಥೆ, ಕಚೇರಿಗೆ ಪೀಠೋಪಕರಣಗಳ ವ್ಯವಸ್ಥೆ ಸೇರಿದಂತೆ ಹಲವು ಸೌಲಭ್ಯಗಳು ಅಗತ್ಯವಾಗಿದೆ. ಈ ಸೌಲಭ್ಯಗಳನ್ನು ನೀಡಬೇಕು.

ಜೊತೆಗೆ ಕೌಟುಂಬಿಕ ಸಮಸ್ಯೆ ಇರುವ ಗ್ರಾಮ ಆಡಳಿತಾಧಿಕಾರಿಗಳಿಗೆ 5ವರ್ಷ ಸೇವೆ ಸಲ್ಲಿಸಿದವರಿಗೆ ಅಂತರ್ ಜಿಲ್ಲಾ ವರ್ಗಾವಣೆ ಅವಕಾಶವನ್ನು ನೀಡಲಾಗಿತ್ತು. ಇದನ್ನು ಮರು ಜಾರಿಗೊಳಿಸುವಂತೆ ಹೋರಾಟ ಮಾಡುತ್ತಿದ್ದೀರಿ, ತಮ್ಮ ಈ ಎಲ್ಲಾ ಬೇಡಿಕೆಗಳು ಆದಷ್ಟು ಬೇಗ ಈಡೇರಲಿ ಎಂಬ ಆಶಯವನ್ನು ಮಲ್ಲಿಕಾರ್ಜುನ್ ವ್ಯಕ್ತಪಡಿಸಿದರು.


ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ರಾಜ್ಯ ಉಪಾಧ್ಯಕ್ಷ ಡಿ.ಪಿ.ಹರೀಶ್ ಮಾತನಾಡಿ ಸರ್ಕಾರವು ಮಾನವೀಯ ನೆಲೆಗಟ್ಟಿನ ಮೇಲೆ ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಲು ಕ್ರಮ ವಹಿಸಬೇಕು. ಈ ಹಿಂದೆ 2025ರ ಸೆಪ್ಟೆಂಬರ್ 26ರಿಂದ ಅಕ್ಟೋಬರ್ ೩ವರೆಗೆ ಗ್ರಾಮ ಆಡಳಿತ ಅಧಿಕಾರಿಗಳು ರಾಜ್ಯಾಧ್ಯಂತ ಪ್ರತಿಭಟನೆ ನಡೆಸಿದ್ದೆವು.

ಅಂದು ರಾಜ್ಯ ಸರ್ಕಾರದ ಪರವಾಗಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ದಿನಾಂಕ:03-10-2024 ರಂದು ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ರಾಜ್ಯ ಪದಾಧಿಕಾರಿಗಳ ಸಭೆ ನಡೆಸಿ, ತಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಲಿದೆ ಕೂಡಲೇ ತಮ್ಮ ಪ್ರತಿಭಟನೆನ್ನು ವಾಪಸ್ ಪಡೆಯುವಂತೆ ನೀಡಿದ ಭರವಸೆಯ ಮೇರೆಗೆ ಪ್ರತಿಭಟನೆಯನ್ನು ವಾಪಸ್ ಪಡೆದು ಕರ್ತವ್ಯ ನಿರ್ವಹಿಸಿದ್ದೆವು.

ಈಗ ಸರ್ಕಾರ 3 ತಿಂಗಳಾದರೂ ನಮ್ಮ ಕೊಟ್ಟ ಮಾತು ಮರೆತು ನಮ್ಮ ಬೇಡಿಕೆಗಳಿಗೆ ಸ್ಪಂಧಿಸದೇ ಇರುವ ಹಿನ್ನೆಲೆಯಲ್ಲಿ ಫೆ.10ರಿಂದ ಅನಿವಾರ್ಯವಾಗಿ 2ನೇ ಹಂತದ ಪ್ರತಿಭಟನೆಯನ್ನು ನಡೆಸುತ್ತಿದ್ದೇವೆ. ಇಂದಿಗೆ 6 ದಿನಗಳಾದರೂ ಸರ್ಕಾರದ ಯಾವುದೇ ಅಧಿಕಾರಿಗಳು ಅಥವಾ ಸಂಬಂಧಪಟ್ಟ ಸಚಿವರು ನಮ್ಮ ಬೇಡಿಕೆಗಳನ್ನು ಈಡೇರಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ. ಕೂಡಲೇ ನಮ್ಮ ಮನವಿಗೆ ಸ್ಪಂಧಿಸಬೇಕು ಎಂದು ಸರ್ಕಾರವನ್ನು ಹರೀಶ್ ಒತ್ತಾಯ ಮಾಡಿದರು.


ಧರಣಿ ಪ್ರತಿಭಟನೆಯಲ್ಲಿ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪೂರ್ಣಚಂದ್ರತೇಜಸ್ವಿ, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಪದ್ಮೇಶ್, ಮಂಡ್ಯ ಜಿಲ್ಲಾ ಗ್ರಾಮ ಆಡಳಿತಾಧಿಕಾರಿಗಳ ಸಂಘದ ಅಧ್ಯಕ್ಷ ಹರೀಶ್, ತಾಲ್ಲೂಕು ಘಟಕದ ಅಧ್ಯಕ್ಷ ದಶರಥ ಪೂಜಾರಿ, ತಾಲ್ಲೂಕು ಉಪಾಧ್ಯಕ್ಷ ರಾಘವೇಂದ್ರ, ತಾಲ್ಲೂಕು ಘಟಕದ ಗೌರವ ಸಲಹೆಗಾರ ಸುಧಾಕರ್, ಜಿಲ್ಲಾ ಉಪಾಧ್ಯಕ್ಷ ಕೆ.ಎಸ್.ಸೋಮಾಚಾರಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುನಿಲ್ ಗಾಣೀಗೇರ್, ತಾಲ್ಲೂಕು ಮಹಿಳಾ ಘಟಕದ ಉಪಾಧ್ಯಕ್ಷೆ ಕೆ.ಸಾವಿತ್ರಿ, ಕಾರ್ಯದರ್ಶಿ ಬಿ.ಹೊನ್ನೇಶ್, ಖಜಾಂಚಿ ಕಾವ್ಯಗೌಡ, ನಿರ್ದೇಶಕರಾದ ಮಧು, ಶ್ವೇತ, ಪೂಜಾ, ಕಾಂತೇಶ್, ಅಗ್ರಹಾರಬಾಚಹಳ್ಳಿ ವೃತ್ತದ ಅಧಿಕಾರಿ ಸುನಿಲ್, ಆರ್.ಟಿ.ಸಿ ವಿಭಾಗದ ಆಪರೇಟರ್ ಮಮತಾಜಯರಾಮೇಗೌಡ ಸೇರಿದಂತೆ ತಾಲೂಕಿನ ಎಲ್ಲಾ ವೃತ್ತಗಳ ಗ್ರಾಮ ಆಡಳಿತ ಅಧಿಕಾರಿಗಳು ಉಪಸ್ಥಿತರಿದ್ದರು.

  • ಶ್ರೀನಿವಾಸ

Leave a Reply

Your email address will not be published. Required fields are marked *

× How can I help you?