ಕೆ.ಆರ್.ಪೇಟೆ-ಡಾ.ರಾಜ್‌ಕುಮಾರ್ ಅವರು ನಿತ್ಯ ಯೋಗ ಮಾಡುವ ಮೂಲಕ ಆರೋಗ್ಯ ಮತ್ತು ಸುಂದರ ದೇಹ ಸೌಂದರ್ಯವನ್ನು ಹೊಂದಿದ್ದರು. ಹಣ- ಅಂತಸ್ತು ಇದ್ದವರು ಶ್ರೀಮಂತರಲ್ಲ, ದೈಹಿಕ ಮತ್ತು ಮಾನಸಿಕ ಆರೋಗ್ಯ ಇದ್ದವರು ನಿಜವಾದ ಶ್ರೀಮಂತರು ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಹೇಳಿದರು.
ಕೆ.ಆರ್.ಪೇಟೆ ಪಟ್ಟಣದ ಜಯನಗರ ಬಡಾವಣೆಯಲ್ಲಿರುವ ಆರ್ ಟಿ ಓ ಮಲ್ಲಿಕಾರ್ಜುನ್ ಕಚೇರಿಯಲ್ಲಿ ಹಾಗೂ ಅವರ ಅಭಿಮಾನಿ ಬಳಗದ ಸಹಕಾರದಿಂದ ಬುದ್ಧ ಬಸವ ಅಂಬೇಡ್ಕರ್ ಯೋಗ ಕೇಂದ್ರದ ಯೋಗ ಗುರು ಹಾಗೂ ಅಂತಾರಾಷ್ಟ್ರೀಯ ಚಿನ್ನದ ಪದಕ ವಿಜೇತರಾದ ಯೋಗಪಟು ಎಂ.ಎಸ್.ಅಲ್ಲಮಪ್ರಭು ನೇತೃತ್ವದಲ್ಲಿ ಒಂದು ತಿಂಗಳು ಉಚಿತ ಯೋಗ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ಮನುಷ್ಯನ ಜೀವನದಲ್ಲಿ ಎಲ್ಲಾ ಭಾಗ್ಯಕ್ಕಿಂತ ಆರೋಗ್ಯ ಭಾಗ್ಯ ಸರ್ವ ಶ್ರೇಷ್ಠವಾದುದು. ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ನಿರಂತರ ಯೋಗಾಭ್ಯಾಸ ಮಾಡಬೇಕು.
ಎಲ್ಲರು ಉತ್ತಮ ಆರೋಗ್ಯ ಬೇಕು ಎನ್ನುತ್ತಾರೆ. ಆದರೆ ಯಾರೂ ಕೂಡ ಆರೋಗ್ಯದ ಸೂತ್ರಗಳನ್ನು ಪಾಲನೆ ಮಾಡುತ್ತಿಲ್ಲ. ಶಿಸ್ತು ಬದ್ಧ ಜೀವನದಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ.ಯೋಗವು ಎಲ್ಲ ಒತ್ತಡಗಳನ್ನು ಹೋಗಲಾಡಿಸಿ ವ್ಯಕ್ತಿಯನ್ನು ಆರೋಗ್ಯದಿಂದ ಇರಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಯೋಗದ ಎಂಟು ಅಂಗಗಳಾದ ಯಮ, ನಿಯಮ, ಆಸನ, ಪ್ರಾಣಾಯಾಮ, ಪತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ ಇವು ನಮ್ಮ ಜೀವನ ಕ್ರಮದ ಮೇಲೆ ಮಹತ್ತರವಾದ ಪರಿಣಾಮ ಬೀರುತ್ತವೆ. ಹಾಗಾಗಿ ಯೋಗ ಬಹಳ ಮಹತ್ವದ್ದಾಗಿದೆ. ದೈಹಿಕ, ಮಾನಸಿಕ, ಭಾವನಾತ್ಮಕ, ಸಾಮಾಜಿಕ ಮತ್ತು ಅಧ್ಯಾತ್ಮ ಸಮತೋಲನ ಸ್ಥಿತಿ ಉಂಟು ಮಾಡುವ ಯೋಗವನ್ನು ವಿಶ್ವದ ಜನರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವುದರಿoದ ವಿಶ್ವಮಾನ್ಯತೆ ಪಡೆದುಕೊಂಡಿದೆ. ನಮ್ಮ ತಾಲ್ಲೂಕಿನ ಅಪರೂಪದ ಯೋಗಪ್ರತಿಭೆ ಅಲ್ಲಮಪ್ರಭು ನೇತೃತ್ವದಲ್ಲಿ ನಡೆಯುತ್ತಿರುವ ಬುದ್ದ, ಬಸವ, ಅಂಬೇಡ್ಕರ್ ಯೋಗ ಕೇಂದ್ರದಿಂದ ತಾಲ್ಲೂಕಿನಾದ್ಯಂತ ಉಚಿತ ಯೋಗ ಶಿಬಿರಗಳನ್ನು ಹಮ್ಮಿಕೊಳ್ಳಬೇಕು. ಈ ಮೂಲಕ ನಮ್ಮ ತಾಲ್ಲೂಕನ್ನು ಯೋಗ ತಾಲ್ಲೂಕನ್ನಾಗಿಸಬೇಕು. ಇದಕ್ಕೆ ನಮ್ಮ ಪೂರ್ಣ ಸಹಕಾರ ನೀಡುವುದಾಗಿ ಆರ್.ಟಿ.ಓ ಮಲ್ಲಿಕಾರ್ಜುನ್ ಅಲ್ಲಮಪ್ರಭು ಅವರಿಗೆ ಭರವಸೆ ನೀಡಿದರು.
ಸಾಹಿತಿ ಬಲ್ಲೇನಹಳ್ಳಿ ಮಂಜುನಾಥ್ ಮಾತನಾಡಿ, ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್ ಸಮಾಜ ಸೇವೆಯ ಜೊತೆಗೆ ಆರೋಗ್ಯವಂತ ಸಮಾಜಕ್ಕೆ ಪ್ರಮುಖ ಪಾತ್ರ ವಹಿಸುವ ಉಚಿತ ಯೋಗ ಶಿಬಿರಕ್ಕೂ ಸಹಕಾರ ನೀಡಿ ಪ್ರೋತ್ಸಾಹಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ನಮ್ಮ ಭಾರತ ದೇಶ ವಿಶ್ವಕ್ಕೆ ನೀಡಿದ ಕೊಡುಗೆಗಳಲ್ಲಿ ಯೋಗವೂ ಸಹ ಒಂದು. ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ರವರ ಕಚೇರಿ ಯಂತಹ ವಾತಾವರಣದಲ್ಲಿ ಒಂದು ಗಂಟೆ ಯೋಗಾಭ್ಯಾಸ ಮಾಡಿದರೆ ಯಾವುದೇ ಕಾಯಿಲೆಗಳು ಬರಲಿಕ್ಕೆ ಸಾಧ್ಯವಿಲ್ಲ ಎಂದು ಹೇಳಿದರು.
ಬಳಿಕ ಯೋಗ ಗುರು ಎಂ.ಎಸ್ ಅಲ್ಲಮಪ್ರಭು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನು ನುಡಿದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಹರಿಚರಣ ತಿಲಕ್, ಶಿಕ್ಷಣ ಸಂಯೋಜಕ ವೀರಭದ್ರಯ್ಯ, ಗ್ರಾ.ಪಂ.ಸದಸ್ಯ ಅಗ್ರಹಾರಬಾಚಹಳ್ಳಿ ಶ್ರೀನಿವಾಸ್, ಶಿಕ್ಷಕರುಗಳಾದ ಕಾಡುಮೆಣಸ ಚಂದ್ರು, ಲಕ್ಷ್ಮಿಪುರ ಮಹೇಶ್, ಅಣ್ಣಯ್ಯ, ಕುಮಾರಿ, ಚೆಸ್ಕಾಂ ಇಂಜಿನಿಯರ್ ಟಿ.ಜಿ.ತಿಮ್ಮಪ್ಪ, ರಘು ಹೊಸಹೊಳಲು, ಮಂಜುನಾಥ್ ಕಾಮನಹಳ್ಳಿ, ಮುಖಂಡರುಗಳಾದ ಬಸವರಾಜ್, ವಿಜಿ ಕುಮಾರ್, ಆರ್.ಟಿ.ಓ ಅಭಿಮಾನಿ ಬಳಗ ಅಧ್ಯಕ್ಷ ಗಂಜಿಗೆರೆ ಮಹೇಶ್, ಸೇರಿದಂತೆ ನೂರಾರು ಯೋಗಪಟುಗಳು ಉಪಸ್ಥಿತರಿದ್ದರು.
—————————-ಶ್ರೀನಿವಾಸ್ ಕೆ.ಆರ್ ಪೇಟೆ