ಕನಕಪುರ:ವಿಜಯದಶಮಿಯ ದಿವಸ ದಂದು ವಿಶೇಷವಾಗಿ ಎಲ್ಲರೂ ಶಮೀವೃಕ್ಷ ಪೂಜೆಯನ್ನು ನೆರವೇರಿಸುತ್ತೇವೆ ಆದರೆ ಪ್ರತಿದಿನವೂ ಶಮೀವೃಕ್ಷ ಪ್ರದಕ್ಷಿಣೆಯನ್ನು ಮಾಡುವುದು, ನೋಡುವುದು ಅಥವಾ ಸ್ಪರ್ಶಿಸುವುದು ಮಾಡಿದರೆ ಅದರಿಂದ ಸಕಲ ಒಳಿತಾಗುವುದು ಎಂಬುವುದು ಒಂದು ದೃಢವಾದ, ಅಚಲವಾದ ನಂಬಿಕೆಯಾಗಿರುತ್ತದೆ ಎಂದು ಶ್ರೀ ಮಠದ ಹಿರಿಯ ಪರಮಪೂಜ್ಯ ಡಾ. ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು ತಿಳಿಸಿದರು.
ಶ್ರೀ ದೇಗುಲಮಠದಲ್ಲಿ ವಿಜಯ ದಶಮಿ ಪ್ರಯುಕ್ತ ರಾಜೋಪಚಾರ, ಭಜನೆ, ಗುರು ಶ್ರೀರಕ್ಷೆ, ಶಮೀ ವೃಕ್ಷ ಪೂಜೆ, ಪರಮಪೂಜ್ಯ ರಿಂದ ಭಕ್ತರಿಗೆ ಬನ್ನಿ ಬಂಗಾರ ಪತ್ತೆ ವಿತರಣೆ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದ ತರುವಾಯ ಭಕ್ತರಿಗೆ ಆಶೀರ್ವಚನ ನೀಡುತ್ತಾ ವಿಜಯದ ಸಂಕೇತವಾಗಿರುವ ಶರನ್ನವರಾತ್ರಿ ವಿಜಯದಶಮಿಯ ದಸರಾ ಉತ್ಸವದ ಆಚರಣೆಯ ಸಮಯದಲ್ಲಿ ಅನೇಕ ವಿವಿಧ ರೂಪಗಳ ದೇವಿಗೆ ಅರ್ಚನೆಯು ಆಯಾ ದಿನಗಳಲ್ಲಿ ನಡೆಯುತ್ತದೆ.ಇದರ ಜೊತೆಯಲ್ಲಿಯೇ ಅಂತಿಮ ದಿನದಂದು ಶಮೀ ವೃಕ್ಷದ ಪೂಜೆಯೂ ಕೂಡ ನಡೆಯುತ್ತದೆ.ಸಾಧಾರಣವಾಗಿ ಧರ್ಮ ಪರಂಪರೆಯಲ್ಲಿ ಅಶ್ವಥವೃಕ್ಷ ಅರಳಿ ಮರಕ್ಕೆ ವಿಶೇಷವಾದ ಗೌರವವು ಇರುತ್ತದೆ ಬಹುತೇಕ ಎಲ್ಲಾ ಸಾಂಪ್ರದಾಯಿಕ ದೇವಾಲಯ ಗಳಲ್ಲಿಯೂ ಅಶ್ವಥವೃಕ್ಷ ಅರಳಿ ಮರ ಇರುತ್ತದೆ ಎಂದು ಹೇಳಿದರು.
ಆದಾಗ್ಯೂ, ಶರನ್ನವರಾತ್ರಿಯ ಆಚರಣೆಯಲ್ಲಿ ಬನ್ನಿವೃಕ್ಷಕ್ಕೆ ವಿಶೇಷ ಪೂಜೆಯನ್ನು ಏತಕ್ಕಾಗಿ ಸಲ್ಲಿಸಲಾಗುತ್ತದೆ ಎಂಬ ವಿಚಾರವು ಪುರಾಣಗಳಿಂದ ತಿಳಿದು ಬರುತ್ತದೆ, ವಿಜಯದಶಮಿಯ ದಿವಸದಂದು ಶಮೀವೃಕ್ಷವನ್ನು ಪೂಜಿಸುವುದು ಪರಂಪರಾಗತವಾಗಿ ಅನಾದಿ ಕಾಲದಿಂದಲೂ ಬೆಳೆದು ಬಂದಿದ್ದು ರಾಮಾಯಣ ಮಹಾಭಾರತಗಳಲ್ಲಿ ಕೂಡ ಇದರ ವಿವರಣೆಯ ಉಲ್ಲೇಖಗಳು ಇರುತ್ತವೆ,ನಾವು ಈ ಪರಂಪರೆಯನ್ನು ಉಳಿಸಿ ಶ್ರೀ ಚಾಮುಂಡೇಶ್ವರಿ ದೇವಿಯ ಕೃಪೆಯಿಂದ ಎಲ್ಲರ ದುಷ್ಟಗುಣ ನಾಶಮಾಡಿ, ಸದ್ಗುಣ, ಸಹಬಾಳ್ವೆ ಮೂಡಿಸಿ ಲೋಕದಲ್ಲಿ ಶಾಂತಿ ನೆಮ್ಮದಿಯಿಂದ ಆರೋಗ್ಯವಂತರಾಗಿರಲಿ ಎಂದು ಶ್ರೀಗಳು ಹಾರೈಸಿದರು.
ಹಿರಿಯ ಪೂಜ್ಯರಿಗೆ ಪಾದ ಪೂಜೆ ಹಾಗು ಬನ್ನಿ ಪತ್ರೆ ಅರ್ಚನೆ ನೆರವೇರಿಸಿ ಮಾತನಾಡಿದ ಕಿರಿಯ ಪರಮಪೂಜ್ಯ ಶ್ರೀ ಚನ್ನಬಸವ ಮಹಾಸ್ವಾಮಿಗಳು, ನಮ್ಮ ದೇಶದ ಹಬ್ಬಗಳು ನಮ್ಮ ಪ್ರಕೃತಿ ಪಂಚಭೂತ ಗಳನ್ನು ಒಳಗೊಂಡಂತೆ ಮನುಷ್ಯನ ದೇಹದ ಮನಸ್ಸು, ಪ್ರಾಣಿ,ಪಕ್ಷಿ, ಗಿಡ-ಮರಗಳನ್ನು ಒಳಗೊಂಡಿದೆ ಆಗಾಗಿ ನಾವು ಈ ದಿನ ಬಂಗಾರವೆಂದು ಕರೆಯುವ ಶಮೀ ವೃಕ್ಷ ಪೂಜೆ ಮಾಡಿಲಾಗಿದೆ.
ಸಮಾಜದಲ್ಲಿ ಒಳ್ಳೆಯತನಕ್ಕೆ ಸದಾ ಗೆಲುವು ದೊರೆಯುತ್ತದೆ ಎನ್ನುವುದನ್ನು ಸಂಕೇತಿಸುವ ವಿಜಯದಶಮಿ ನಾಡಿಗೆ ಹಾಗೂ ಜನರಿಗೆ ಸದಾ ಒಳಿತಾಗುವಂತೆ ಹರಸಲಿ,ಎಲ್ಲರ ನೋವು, ದುಃಖ, ಸಂಕಷ್ಟಗಳನ್ನು ಪರಿಹರಿಸಿ ಜಗನ್ಮಾತೆ ಎಲ್ಲರಿಗೂ ಸನ್ಮಂಗಳವನ್ನು ಕರುಣಿಸಲಿ, ವಿಜಯವನ್ನು ಅನುಗ್ರಹಿಸಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಅತ್ತಹಳ್ಳಿ, ಶ್ರೀಗಳು ಸಾತನೂರು ಶ್ರೀಗಳು ಕಗಲ್ಲಿಪು ಮಠದ ಶ್ರೀಗಳು ಹಾಗು ಹರಗುರು ಚರರ್ಮೂತಿಗಳು ಸೇರಿದಂತೆ ನೂರಾರು ಭಕ್ತರು ಉಪಸ್ಥಿತರಿದ್ದರು .