ಕನಕಪುರ-ಶ್ರೀ-ಬಿಲ್ವಪತ್ರೆಗವಿ-ಮಠದ-ಚರಪಟ್ಟಾಧಿಕಾರ- ಮಹೋತ್ಸವದ-ಪೂರ್ವಭಾವಿ-ಸಭೆ

ಕನಕಪುರ: ಶ್ರೀ ಬಿಲ್ವಪತ್ರೆ ಮಠದ ಚರ ಪಟ್ಟಾಧಿಕಾರ ಮಹೋತ್ಸವದ ಪೂರ್ವಭಾವಿ ಸಭೆಯ ದಿವ್ಯ ಸಾನಿಧ್ಯವನ್ನು ಶ್ರೀ ದೇಗುಲಮಠದ ಹಿರಿಯ ಪರಮಪೂಜ್ಯ ಶ್ರೀ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು, ನೂತನ ವಟುವಿಗೆ ಆಶೀರ್ವದಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ದೇಗುಲಮಠದ ಕಿರಿಯ ಪರಮಪೂಜ್ಯ ಶ್ರೀ ಚನ್ನಬಸವ ಮಹಾಸ್ವಾಮಿಗಳವರು, ಶ್ರೀ ಬಿಲ್ವಪತ್ರೆ ಮಠವು ವೀರಶೈವ ಲಿಂಗಾಯತ ವಿರಕ್ತ ಪರಂಪರೆಗೆ ಸೇರಿದೆ. ಪ್ರಸ್ತುತ ಶ್ರೀಮಠದ ಪೀಠಾಧ್ಯಕ್ಷರಾದ ಪೂಜ್ಯ ಶ್ರೀ ಶ್ರೀ ಶಿವಲಿಂಗಸ್ವಾಮಿಗಳವರು ತಮ್ಮ 15ನೇ ವಯಸ್ಸಿನಲ್ಲಿಯೇ ತಮ್ಮ ಗುರು ವರ್ಯರಾದ ಶ್ರೀ ಶ್ರೀ ಅಲಕ್ ನಿರಂಜನ ಸ್ವಾಮಿಗಳು ಹಾಗು ಇಮ್ಮಡಿ ನಿರ್ವಾಣ ಮಹಾಸ್ವಾಮಿಗಳವರ ಆಶೀರ್ವಾದದೊಂದಿಗೆ ದೀಕ್ಷೆಯನ್ನು ಸ್ವೀಕರಿಸಿ, ಶ್ರೀಮಠದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಾ ಶಿವಾನುಭವ ಗೋಷ್ಠಿ, ಚಿಂತನ-ಮಂಥನ, ಭಜನೆ ಹಾಗೂ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಅನೂಚಾನವಾಗಿ ನಡೆಸಿಕೊಂಡು ಬರುತ್ತಿರುವುದರ ಜೊತೆಗೆ ಭಕ್ತಾದಿಗಳಿಗೆ ದಾಸೋಹ ವ್ಯವಸ್ಥೆಯನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿರುವುದು ಹೆಮ್ಮೆಯ ವಿಷಯ.

ಪರಮ ಪೂಜ್ಯರು ಕೃಷಿಯಲ್ಲೂ ತೊಡಗಿಸಿಕೊಂಡು ಅನೇಕ ಪ್ರಯೋಗಗಳನ್ನು ಮಾಡುವುದರ ಮೂಲಕ ಭಕ್ತರಿಗೆ ಪ್ರೇರಣೆಯಾಗಿದ್ದಾರೆ. ಪ್ರಸ್ತುತ ಶ್ರೀಮಠದಲ್ಲಿ ಎಲ್ಲ ವರ್ಗದ ಜನಾಂಗದವರಿಗೂ ವಿವಾಹಗಳನ್ನು ನೆರೆವೇರಿಸಿಕೊಳ್ಳಲು ಉಚಿತ ಅವಕಾಶ ಮಾಡಿಕೊಟ್ಟಿರುವುದು ಸ್ತುತ್ಯಾರ್ಹ. ಪೂಜ್ಯರು ಶ್ರೀಮಠದ ತಮ್ಮೆಲ್ಲಾ ಪ್ರಗತಿಪರ ಯೋಜನೆಗಳಿಗೆ ಕನಕಪುರದ ಶ್ರೀ ದೇಗುಲಮಠದ ಶ್ರೀಗಳ ಆಶೀರ್ವಾದವೇ ತಮಗೆ ಶ್ರೀರಕ್ಷೆ ಎಂದು ನಂಬಿ ಮುನ್ನಡೆಯುತ್ತಿರುವುದು ವಿಶೇಷ.

ಪ್ರಸ್ತುತ ಶ್ರೀಮಠದ ತ್ರಿವಿಧ ದಾಸೋಹ ಹಾಗೂ ಪ್ರಗತಿಪರ ಕೈಂಕಯ್ಯಗಳನ್ನು ಹಿರಿಯ ಶ್ರೀಗಳವರೊಡಗೂಡಿ ಅಭಿವೃದ್ಧಿ ಪಡಿಸಲು ನೂತನ ಉತ್ತರಾಧಿಕಾರಿಯವರ ಆಯ್ಕೆ ಅತ್ಯಗತ್ಯವಾಗಿದೆ. ತತ್ಸಂಬಂಧವಾಗಿ ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಶ್ರೀ ಬಿಲ್ವಪತ್ರೆ ಗವಿಮಠದ ಬಳಿ ವಾಸವಿರುವ ಸುಸಂಸ್ಕೃತ ಶರಣ ದಂಪತಿಗಳಾದ ಶ್ರೀಮತಿ ಸಿದ್ದಗಂಗಮ್ಮ ಮತ್ತು ಶ್ರೀ ರಾಜಣ್ಣರವರ ದ್ವಿತೀಯ ಪುತ್ರರಾದ ವೇದಾಗಮ ಹಾಗೂ ಸಂಸ್ಕೃತದಲ್ಲಿ ಪದವಿ ಪಡೆದಿರುವ ಶ್ರೀ ಷಡಕ್ಷರಿ ಬಿ. ಆರ್ ರವರನ್ನು ಪೂಜ್ಯ ನಿ. ಪ್ರ. ಸ್ವ. ಶ್ರೀ ಶ್ರೀ ಶಿವಲಿಂಗಸ್ವಾಮಿಗಳ ಹಾಗೂ ಸಮಾಜದ ಗುರು-ಹಿರಿಯರ ಮಾರ್ಗದರ್ಶನದಂತೆ ಉತ್ತರಾಧಿಕಾರಿಯನ್ನಾಗಿ ಸ್ವೀಕರಿಸಿರುತ್ತಾರೆ.

ಧಾರ್ಮಿಕ ಸಂಪ್ರದಾಯದಂತೆ ನಿರಂಜನ ಚರ ಪಟ್ಟಾಧಿಕಾರ ಮಹೋತ್ಸವವನ್ನು ಇದೇ ವರ್ಷದ ಮೇ-22ನೇ ತಾರೀಖಿನಂದು ನಡೆಸಲು ನಿರ್ಧರಿಸಲಾಗಿದೆ ನಮ್ಮ ಪೂಜ್ಯ ಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳವರ ಅಪೇಕ್ಷೆಯಂತೆ ಎಲ್ಲರೂ ಸಹಕಾರ ನೀಡಬೇಕೆಂದು ತಿಳಿಸಿದರು.

ಈ ಪ್ರಮುಖ ಕಾರ್ಯಕ್ರಮಕ್ಕೆ ನಾಡಿನ ಹರಗುರು ಚರಮೂರ್ತಿಗಳು, ಗಣ್ಯಾತಿಗಣ್ಯರು, ಶ್ರೀ ಮಠದ ಸದ್ಭಕ್ತರು, ಚುನಾಯಿತ ಪ್ರತಿನಿಧಿಗಳು, ಸಂಘ-ಸಂ ಸ್ಥೆಗಳ ಮುಖ್ಯಸ್ಥರು ಹಾಗೂ ಮುಖಂಡರುಗಳು ಅಪಾರ ಸಂಖ್ಯೆಯಲ್ಲಿ ಭಾಗವಹಿಸಲಿದ್ದು, ಎಲ್ಲಾ ಭಕ್ತರು ಕೂಡ ತಪ್ಪದೇ ಆಗಮಿಸಿ ತಮ್ಮ ತನು-ಮನ-ಧನ ಸಮರ್ಪಿಸುವ ಮೂಲಕ ಪಟ್ಟಾಧಿಕಾರ ಕಾರ್ಯಕ್ರಮ ವನ್ನು ಯಶಸ್ವಿಗೊಳಿಸಿ ಗುರು ಕೃಪೆಗೆ ಪಾತ್ರರಾಗಬೇಕೆಂದು ಕೋರಿದರು.

ಈ ಸಂದರ್ಭದಲ್ಲಿ ನೂತನವಾಗಿ ನಿಯತ್ತಿಕೊಂಡಿರುವ ಶ್ರೀ ಷಡಕ್ಷರಿ ರವರು ಹಾಗೂ ಮರಳವಾಡಿ ಮಠದ ಕಿರಿಯ ಪೂಜ್ಯರು ತೋಟಳ್ಳಿ ಮಠದ ಪೂಜ್ಯರು ಹೆಬ್ಬನಿ ಮಠದ ಪೂಜ್ಯರು ರಾಮೇಗೌಡನಪುರ ಮಠ ಪೂಜ್ಯರು ಚನ್ನಪಟ್ಟಣದ ಕುಡಿ ನೀರು ಕಟ್ಟೆ ಮಠದ ಪೂಜ್ಯರು ಹಾಗೂ ಹರಗುರು ಚರಮೂರ್ತಿಗಳು ಅನೇಕ ಸಮಾಜ ಮುಖಂಡರು ಹಾಗೂ ರಾಜಕೀಯ ಮುಖಂಡರು ಭಕ್ತರ ಉಪಸ್ಥಿತಿಯಲ್ಲಿ ನೆರವೇರಿತು

Leave a Reply

Your email address will not be published. Required fields are marked *

× How can I help you?