ಕನಕಪುರ-ದೇಗುಲ-ಮಠದ-ಶ್ರೀ-ಚನ್ನಬಸವ-ಸ್ವಾಮಿಗಳಿಗೆ- ರಾಣಿಚನ್ನಮ್ಮ-ವಿವಿ-ಪಿಎಚ್‌ಡಿ-ಪ್ರಧಾನ

ಕನಕಪುರ : ಬೆಳಗಾವಿಯ ರಾಣಿಚನ್ನಮ್ಮ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವದಲ್ಲಿ ಕನಕಪುರ ದೇಗುಲ ಮಠದ ಶ್ರೀ ಚನ್ನಬಸವ ಸ್ವಾಮಿಗಳಿಗೆ ಪಿಎಚ್‌ಡಿ ಪದವಿಯನ್ನು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಪ್ರದಾನ ಮಾಡಿದರು.

ಪೂಜ್ಯರು ಬಾಲ್ಯದಿಂದಲೂ ವಿದ್ಯಾಭ್ಯಾಸದಲ್ಲಿ ಉನ್ನತ ಶ್ರೇಣಿಯನ್ನು ಗಳಿಸಿಕೊಂಡವರಾಗಿದ್ದು, ಸ್ನಾತಕೋತ್ತರ ಪದವಿಯಲ್ಲಿ ಆರು ಚಿನ್ನದ ಪದಕ ಮತ್ತು ಎರಡು ಪಾರಿತೋಷಕದೊಂದಿಗೆ ವಿಶ್ವವಿದ್ಯಾಲಯಕ್ಕೆ ಮೊದಲಿಗರಾಗಿದ್ದರು.

ಶ್ರೀಗಳು ಬೆಳಗಾವಿಯ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪ್ರೊ. ಎಸ್.ಎಂ.ಗಂಗಾಧರಯ್ಯ ಅವರ ಮಾರ್ಗದರ್ಶನದಲ್ಲಿ ಸಲ್ಲಿಸಿದ್ದ ‘ಏಕೋತ್ತರ ಶತಸ್ಥಲಗಳ ಪರಾಮರ್ಶೆ’ ಎಂಬ ಮಹಾಪ್ರಬಂಧಕ್ಕೆ ಪಿಎಚ್‌ಡಿ ಪದವಿಗೆ ಭಾಜನರಾಗಿದ್ದಾರೆ.

ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ. ಸಿ. ಸುಧಾಕರ್, ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ, ಕುಲಸಚಿವ ಸಂತೋಷ ಕಾಮಗೌಡ ಮತ್ತಿತರರಿದ್ದರು.

ವಚನ ಸಾಹಿತ್ಯದ ನೂತನ ಸಂಶೋಧನೆ:-

ವಚನ ತತ್ತ್ವಶಾಸ್ತ್ರದ ಪ್ರಧಾನ ಭೂಮಿಕೆಯಂತಿರುವ ಏಕೋತ್ತರ ಶತಸ್ಥಲಗಳ ಕುರಿತು ಆಮೂಲಾಗ್ರವಾಗಿ ಪರಾಮರ್ಶಿಸಿ, ಬಹುಮುಖಿ ನೆಲೆಯಲ್ಲಿ ಶ್ರೀಗಳು ಸಂಶೋಧನೆಯನ್ನು ಪೂರೈಸಿದ್ದಾರೆ. ಈ ಮಹಾಪ್ರಬಂಧವು ಸಂಶೋಧನಾಕ್ಷೇತ್ರಕ್ಕೆ ಒಂದು ಮೌಲಿಕ ಕೊಡುಗೆಯಾಗಿದೆ.

ವೈಜ್ಞಾನಿಕ ಹಾಗೂ ವಿದ್ವತ್ ಪೂರ್ಣವಾದ ಒಳನೋಟಗಳಿರುವ ತಮ್ಮ ಅಧ್ಯಯನದಲ್ಲಿ ಶ್ರೀಗಳ ಹೊಸ ಬಗೆಯ ಸಂಶೋಧನಾ ಮಾದರಿ ಹೊರಹೊಮ್ಮಿದೆ. ಭಾರತೀಯ ಮತ್ತು ಪಾಶ್ಚಾತ್ಯ ತತ್ತ್ವಶಾಸ್ತ್ರದ ಹಿನ್ನೆಲೆಯಲ್ಲಿ ವಚನಕಾರರ ತತ್ವಜ್ಞಾನವನ್ನು ಪರಾಮರ್ಶಿಸುವಲ್ಲಿ ಪ್ರಬಂಧವು ಮಹತ್ವ ಪಡೆದುಕೊಂಡಿದೆ. ಬಸವಾದಿ ಶರಣರ ಚಿಂತನೆಗಳಿಗೆ ಶಾಸ್ತ್ರೀಯವಾದ ವ್ಯಾಖ್ಯಾನಗಳನ್ನು ನೀಡುವಲ್ಲಿ ಬಹುತೇಕ ಇದು ಮೊದಲನೇ ಪ್ರಯತ್ನ ಎಂದು ಮಾರ್ಗದರ್ಶಕರಾದ ಪ್ರೊ. ಎಸ್‌. ಎಂ. ಗಂಗಾಧರಯ್ಯ ಶ್ರೀಗಳನ್ನು ಅಭಿನಂದಿಸಿದ್ದಾರೆ. ಶ್ರೀಗಳ ಶೈಕ್ಷಣಿಕ ಸಾಧನೆಗೆ ದೇಗುಲಮಠದ ಹಿರಿಯ ಶ್ರೀ ಡಾ. ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳವರು ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

× How can I help you?