ಚಿಕ್ಕಮಗಳೂರು-ವ್ಯಕ್ತಿಯ ಹುಟ್ಟಿನಿಂದ ಸಾವಿನವರೆಗೆ ಕಾನೂನು ಅವಶ್ಯ-ಸಮಾಜದ ಸುಸ್ಥಿರ ಆಡಳಿತದಲ್ಲಿ ಕಾನೂನಿನ ಪಾತ್ರ ಮಹತ್ವದ್ದು-ನ್ಯಾ ಹನುಮಂತಪ್ಪ ವಿ

ಚಿಕ್ಕಮಗಳೂರು;ವ್ಯಕ್ತಿಯ ಹುಟ್ಟಿನಿಂದ ಸಾವಿನವರೆಗೆ ಕಾನೂನು ಅವಶ್ಯವಾಗಿದೆ.ಸಮಾಜದ ಸುಸ್ಥಿರ ಆಡಳಿತದಲ್ಲಿ ಕಾನೂನಿನ ಪಾತ್ರ ಮಹತ್ವದ್ದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಹನುಮಂತಪ್ಪ ವಿ. ಹೇಳಿದರು.

ತಾಲ್ಲೂಕು ಆಡಳಿತ,ತಾಲ್ಲೂಕು ಪಂಚಾಯಿತಿ,ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಶಿಶು ಅಭಿವೃದ್ಧಿ ಯೋಜನೆ ಚಿಕ್ಕಮಗಳೂರು ಹಾಗೂ ಅಂಬಳೆ ಗ್ರಾಮ ಪಂಚಾಯಿತಿ ಇವರ ವತಿಯಿಂದ ಇಂದು ಅಂಬಳೆ ಗ್ರಾಮದ ಎ.ಆರ್.ಕೃ ಶಾಸ್ತ್ರೀ ಸಭಾ ಭವನದಲ್ಲಿ ಆಯೋಜಿಸಿದ್ದ ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ಮಗು ತಾಯಿಯ ಗರ್ಭವಸ್ಥೆಯಿಂದಲೇ ಅನೇಕ ಸವಲತ್ತುಗಳನ್ನು ಪಡೆಯುತ್ತ ಹೋಗುತ್ತದೆ.ಕಾನೂನು ಎಂಬುದು ವ್ಯಕ್ತಿಯ ಹುಟ್ಟಿನಿಂದ ಸಾವಿನವರೆಗೆ ಅವಶ್ಯವಾದದ್ದು. ಸಮಾಜದಲ್ಲಿ ಗಂಡು ಹೆಣ್ಣು ಎಂಬುವ ತಾರತಮ್ಯ ಹೆಚ್ಚಿದ್ದು ಅದನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಜನರು ಜಾಗೃತರಾಗಬೇಕು.ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಬೇಕು ಹಾಗೂ ಸಾಮಾಜಿಕ ಪಿಡುಗುಗಳಿಂದ ಹೆಣ್ಣು ಮಕ್ಕಳನ್ನು ರಕ್ಷಿಸಬೇಕು ಪೋಷಣ್ ಮಾಸಾಚರಣೆ ಅಂಗವಾಗಿ ಪೌಷ್ಠಿಕ ಶಿಬಿರಗಳನ್ನು ಏರ್ಪಡಿಸಿ ಅಪೌಷ್ಠಿಕತೆ ನಿವಾರಣೆ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ.ಮಕ್ಕಳು ಪ್ರತಿ ನಿತ್ಯ ಉತ್ತಮ ಆಹಾರ ಸೇವನೆ ಮಾಡುವುದರಿಂದ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿವಹಿಸಬಹುದಾಗಿರುತ್ತದೆ ಎಂದ ಅವರು ಸಾರ್ವಜನಿಕರು ಸರ್ಕಾರದಿಂದ ನೀಡುವಂತ ಯೋಜನೆಗಳ ಫಲವನ್ನು ಪಡೆದುಕೊಳ್ಳಿ ಎಂದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಲಲಿತ ವೈ.ಜೆ ಮಾತನಾಡಿ ಅಪೌಷ್ಠಿಕತೆಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಸಮುದಾಯದ ಪಾತ್ರ ಮಹತ್ವದ್ದಾಗಿದೆ.ಹದಿಹರೆಯದ ಹೆಣ್ಣು ಮಕ್ಕಳು,ಗರ್ಭಿಣಿ ಬಾಣಂತಿಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಪೋಷಣ್ ಮಾಸಾಚರಣೆಯಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮಗಳನ್ನು ಏರ್ಪಡಿಸಿ ಅವರಿಗೆ ಪೌಷ್ಠಿಕಾಂಶದ ಮಹತ್ವವನ್ನು ಸಾರಲಾಗುತ್ತದೆ. ಅಲ್ಲದೇ 6 ತಿಂಗಳು ತುಂಬಿದ ಮಕ್ಕಳಿಗೆ ಅನ್ನ ಪ್ರಾಶನ್ನ ನೀಡಲಾಗುತ್ತದೆ ಎಂದ ಅವರು ಪ್ರತಿಯೊಬ್ಬರು ಯೋಜನೆಯ ಫಲ ಪಡೆದುಕೊಳ್ಳುವಂತೆ ತಿಳಿಸಿದರು.

ಅಂಬಳೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದೊಡ್ಡೇಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಂಗನಾಥ್ ಸಿ., ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಹಂತೇಶ್ ಭಜಂತ್ರಿ, ಜಿಲ್ಲಾ ಆಯುಷ್ ಅಧಿಕಾರಿ ಗೀತಾ, ಅಂಬಳೆ ಆಯುಷ್ ಅಧಿಕಾರಿ ಡಾ. ಶೋಭ ಸೇರಿದಂತೆ ತಾಲ್ಲೂಕು ಸ್ತ್ರೀ ಶಕ್ತಿ ಒಕ್ಕೂಟದ ಅಧ್ಯಕ್ಷರು, ಗ್ರಾಮ ಪಂಚಾಯಿತಿ ಅಧಿಕಾರಿ, ಸಿಬ್ಬಂದಿಗಳು ಮತ್ತು ಜಿಲ್ಲಾ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

————————ಪ್ರಕಾಶ್ ಕೆ ಕೋಟಿಗನಹಳ್ಳಿ

Leave a Reply

Your email address will not be published. Required fields are marked *

× How can I help you?