ಅರಸೀಕೆರೆ: ತಮ್ಮ ಗ್ರಾಮಕ್ಕೆ ಮಂಜೂರಾಗಿದ್ದ ಅಂಬೇಡ್ಕರ್ ಭವನವನ್ನು ರಾಜಕೀಯ ದುರುದ್ದೇಶದಿಂದ ಅಧಿಕಾರಿಗಳನ್ನು ಬಳಸಿಕೊಂಡು ಶಾಸಕ ಎಚ್.ಕೆ ಸುರೇಶ್ ಬೇರೆ ಗ್ರಾಮಕ್ಕೆ ವರ್ಗಾವಣೆ ಮಾಡಿದ್ದಾರೆ ಎಂದು ಆರೋಪಿಸಿ ಬೇಲೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಅರಸೀಕೆರೆ ತಾಲೂಕಿನ ಕರಗುಂದ ಗ್ರಾಮದ ಗ್ರಾಮಸ್ಥರು ಭವನದ ಸ್ಥಳದಲ್ಲೇ ಶುಕ್ರವಾರ ಸಂಜೆ ಪ್ರತಿಭಟನೆ ನಡೆಸಿದರು.
ಈ ವೇಳೆ ಗ್ರಾಮದ ಉಮೇಶ್ ಮಾತನಾಡಿ, ಸುಮಾರು 500 ಕುಟುಂಬಳನ್ನು ಹೊಂದಿರುವ ನಮ್ಮ ಗ್ರಾಮದಲ್ಲಿ 300 ದಲಿತ ಕುಟುಂಬಗಳಿವೆ, ನಮ್ಮ ಶುಭ ಸಮಾರಂಭಗಳನ್ನು ನಡೆಸಲು ಸ್ಥಳಾವಕಾಶದ ಕೊರತೆ ಇದ್ದ ಹಿನ್ನೆಲೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಕಳೆದ ಹಲವು ವರ್ಷಗಳಿಂದ ನಡೆದ ಹೋರಾಟದ ಫಲವಾಗಿ ಭವನ ಮಂಜೂರಾಗಿತ್ತು ಆದರೆ ಇದೀಗ ರಾಜಕೀಯ ಕುತಂತ್ರಕ್ಕೆ ಕಟ್ಟಡವನ್ನು ಬೇರೆ ಗ್ರಾಮಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದರು.
ಸ್ಥಳೀಯ ಬಿಜೆಪಿ ಮುಖಂಡರ ಮಾತು ಕೇಳಿಕೊಂಡು ಕರಗುಂದ ಗ್ರಾಮದ ದಲಿತ ಕಾಲೋನಿಯಿಂದ ಮತಗಳು ಬರುವುದಿಲ್ಲ ಎಂಬ ದುರುದ್ದೇಶದಿಂದ ಹಾಗೂ ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆಗೆ ಆಹ್ವಾನ ನೀಡಿಲ್ಲ ಎಂಬ ಕಾರಣಕ್ಕೆ ಶಾಸಕರು ಈ ರೀತಿಯ ದುರ್ವರ್ತನೆ ತೋರುತ್ತಿದ್ದು, ಭವನವನ್ನು ನಮ್ಮ ಗ್ರಾಮಕ್ಕೆ ಮರು ವರ್ಗಾವಣೆ ಮಾಡದೆ ಇದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಶರತ್ ಮಾತನಾಡಿ, ಇದೇ ವಿಚಾರವಾಗಿ ಈ ಹಿಂದೆ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದ್ದ ವೇಳೆ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳು ಒಪ್ಪಿಗೆ ಸೂಚಿಸಿದ್ದರು ಆದರೆ ಕರಗುಂದ ಗ್ರಾಮ ಪಂಚಾಯಿತಿ ಪಿಡಿಓ ಬಾಬು ಅವರು ಅಧಿಕಾರಿಗಳ ದಿಕ್ಕು ತಪ್ಪಿಸುವ ಕೆಲಸ ಮಾಡಿದ್ದಾರೆ. ಈ ಕಾರಣದಿಂದಲೇ ಇದೀಗ ನಮ್ಮ ಗ್ರಾಮಕ್ಕೆ ಮಂಜೂರಾಗಿದ್ದ ಅಂಬೇಡ್ಕರ್ ಭವನ ಬೇರೆ ಗ್ರಾಮಕ್ಕೆ ವರ್ಗಾವಣೆಯಾಗಿದೆ ಎಂದು ದೂರಿದರು.

ಗ್ರಾಮದ ನಾಗರತ್ನ ಮಾತನಾಡಿ, ಶಾಸಕ ಸುರೇಶ್ ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ಸರಿಯಲ್ಲ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಒಳ್ಳೆಯ ಕಾರ್ಯಕ್ಕೆ ಬೆಂಬಲ ನೀಡಬೇಕು ಹಾಗೂ ಜನಪರ ಕಾರ್ಯಕ್ರಮಗಳಿಗೆ ಸಹಕಾರ ನೀಡಬೇಕು ಅದನ್ನು ಬಿಟ್ಟು ರಾಜಕೀಯ ಮಾಡಿಕೊಂಡು ಜನರಿಗೆ ಅನುಕೂಲ ಆಗುವ ಕೆಲಸಗಳಿಗೆ ಅಡ್ಡಿ ಮಾಡುವ ಕೆಲಸ ಮಾಡಬಾರದು, ನೂರಾರು ಜನರಿಗೆ ಅನುಕೂಲ ಆಗುವ ಭವನಕ್ಕೆ ಅಡ್ಡಿ ಮಾಡುತ್ತಿರುವುದು ಸರಿಯಲ್ಲ, ಅಂಬೇಡ್ಕರ್ ಭವನ ಕರಗುಂದ ಗ್ರಾಮದಲ್ಲೇ ನಿರ್ಮಾಣ ಆಗಬೇಕು ಇಲ್ಲವಾದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಮೇಲಾಧಿಕಾರಿಗಳು ಭವನ ನಿರ್ಮಾಣಕ್ಕೆ ಆದೇಶ ನೀಡಿದರು ಪಿಡಿಓ ಬಾಬು ಅವರ ನಿರ್ಲಕ್ಷ್ಯ ದಿಂದಲೇ ವಿವಾದ ನಡೆಯುತ್ತಿದೆ ಕೂಡಲೇ ಪಿಡಿಓ ಅವರನ್ನು ಅಮಾನತು ಮಾಡಬೇಕು, ಅಲ್ಲದೆ ಇದೇ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡದಿದ್ದರೆ ಡಿಸಿ ಕಚೇರಿ ಎದುರು ಅರೆಬೆತ್ತಲೆ ಪ್ರತಿಭಟನೆ ಮಾಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಗ್ರಾಮದ ಮುಖಂಡರಾದ ಚಂದ್ರಮ್ಮ, ರವಿಕುಮಾರ್, ಶಶಿ ಕುಮಾರ್, ಶೇಖರ್, ರೇಣುಕಮ್ಮ, ಯಶೋಧಮ್ಮ, ಶಿವಕುಮಾರ್, ಸೇರಿದಂತೆ ಗ್ರಾಮಸ್ಥರು ಇದ್ದರು