ಕಾಸರಗೋಡು-ಮತ್ತೀಕೆರೆ ಜಯರಾಮ್ ರಿಗೆ ಕೆ.ಕೆ.ಶೆಟ್ಟಿ ಕುತ್ತಿಕಾರ್ ದತ್ತಿನಿಧಿ ಪ್ರಶಸ್ತಿ

ಕಾಸರಗೋಡು(ಕೇರಳ) : ಇಲ್ಲಿನ ಕಾಸರಗೋಡು ಜಿಲ್ಲಾ ಕನ್ನಡ ಪ್ರತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಕರ್ನಾಟಕ ಗಡಿಪ್ರದೇಶಾಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಕೊಡಮಾಡುವ ವಿವಿಧ ದತ್ತಿನಿಧಿ ಪ್ರಶಸ್ತಿಗಳ ಪೈಕಿ ಕೆ.ಕೆ.ಶೆಟ್ಟಿ ಕುತ್ತಿಕಾರ್ ದತ್ತಿನಿಧಿ ಪ್ರಶಸ್ತಿಯು ಹಿರಿಯ ಪತ್ರಕರ್ತ ಮತ್ತೀಕೆರೆ ಜಯರಾಮ್ ಅವರಿಗೆ ಲಭಿಸಿದೆ.

ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮಂಡ್ಯ ಮತ್ತು ರಾಮನಗರ ಜಿಲ್ಲೆಗಳಲ್ಲಿ ಸುದೀರ್ಘ ಮೂರು ದಶಕ ಸೇವೆ ಸಲ್ಲಿಸಿರುವ ಮತ್ತೀಕೆರೆ ಜಯರಾಮ್ ಅವರನ್ನು ದತ್ತಿನಿಧಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಿರುವ ಸಂಗತಿಯನ್ನು ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು ಪ್ರಕಟಿಸಿದ್ದಾರೆ.

ವಿಜಯ ಕರ್ನಾಟಕ, ಕನ್ನಡಪ್ರಭ, ವಿಶ್ವವಾಣಿ ಪತ್ರಿಕೆಗಳಲ್ಲಿ ಎರಡೂವರೆ ದಶಕಕ್ಕೂ ಹೆಚ್ಚು ಕಾಲ ಪ್ರಧಾನ ವರದಿಗಾರರಾಗಿ ಸೇವೆ ಸಲ್ಲಿಸಿರುವ ಮತ್ತೀಕೆರೆ ಜಯರಾಮ್ ಅವರು ಪ್ರಸ್ತುತ ಆರಂಭ ದಿನಪತ್ರಿಕೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2015ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕೆಯುಡಬ್ಲ್ಯುಜೆ ರಾಜ್ಯ ಸಂಘದಲ್ಲಿ ಎರಡು ಬಾರಿ ಕಾರ್ಯಕಾರಿ ಸದಸ್ಯ, ಎರಡು ಬಾರಿ ಉಪಾಧ್ಯಕ್ಷರಾಗಿದ್ದು, ಪ್ರಸ್ತುತ ಕಾರ್ಯದರ್ಶಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಡ್ಯ ಜಿಲ್ಲಾ ಸಂಘದಲ್ಲಿ ಒಮ್ಮೆ ಪ್ರಧಾನ ಕಾರ್ಯದರ್ಶಿ, ಎರಡು ಬಾರಿ ಅಧ್ಯಕ್ಷರಾಗಿದ್ದಾರೆ. 26 ವರ್ಷದಿಂದ ನಿರಂತರವಾಗಿ ಜವಬ್ದಾರಿಗಳನ್ನು ನಿರ್ವಹಿಸುತ್ತಾ ಸಂಘದ ಅಭ್ಯುದಯಕ್ಕೆ ಶ್ರಮಿಸಿದ್ದಾರೆ.

ಸುಮಾರು 2 ದಶಕಗಳ ಸೇವೆಯಲ್ಲಿ ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘವು ಕೇರಳದಲ್ಲಿ ಜನಮನ್ನಣೆಗೆ ಪಾತ್ರವಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘವು ಇಲ್ಲಿನ ಕನ್ನಡ ಭಾಷೆ, ಸಂಸ್ಕೃತಿ, ಕಲೆಗಳ ಉಳಿವಿಗಾಗಿ ಇತರ ಕನ್ನಡಪರ ಸಂಘ ಸಂಸ್ಥೆಗಳೊಂದಿಗೆ ಸೇರಿ ಶ್ರಮಿಸುತ್ತಿದೆ. ಕನ್ನಡ ಮತ್ತು ಮಲೆಯಾಳ ಪತ್ರಕರ್ತರ ಸ್ನೇಹಸೇತುವಾಗಿ ಈ ಸಂಘವು ಕಾರ್ಯಾಚರಿಸುತ್ತಿದೆ.

ದತ್ತಿನಿಧಿ ಪ್ರಶಸ್ತಿಯು ನಗದು, ಪ್ರಶಸ್ತಿ ಪತ್ರ ಸ್ಮರಣಿಕೆ ಹೊಂದಿರುತ್ತದೆ. 2025 ನೇ ಮೇ 3ರಂದು ಕೇರಳದ ಕಾಸರಗೋಡು ಜಿಲ್ಲೆಯ, ಸೀತಾಂಗೋಳಿ ಎಲೈನ್ಸ್ ಸಭಾಂಗಣದಲ್ಲಿ ಸ್ವಾಗತ ಸಮಿತಿಯ ಅಧ್ಯಕ್ಷ ಕೆ.ಕೆ.ಶೆಟ್ಟಿ ಕುತ್ತಿಕಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ್ ಹೊರಟ್ಟಿ, ಕರ್ನಾಟಕದ ಕೃಷಿ ಸಚಿವ ಚೆಲುವರಾಯ ಸ್ವಾಮಿ, ಅರಣ್ಯ ಸಚಿವ ಈಶ್ವರ ಖಂಡ್ರೆ ಹಾಗೂ ಕರ್ನಾಟಕ ಗಡಿಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೋಮಣ್ಣ ಬೇವಿನಮರದ. ಕರ್ನಾಟಕದ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ. ವಿ ಪ್ರಭಾಕರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಮುಂತಾದ ಗಣ್ಯರು ಸೇರಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.

Leave a Reply

Your email address will not be published. Required fields are marked *

× How can I help you?