ಕೆ.ಆರ್.ಪೇಟೆ: ತಾಲ್ಲೂಕಿನ ಸಾರಂಗಿ ಗ್ರಾಮದಲ್ಲಿ ಗ್ರಾಮ ದೇವತೆ ಶ್ರೀ ಕೋಡಿಯಮ್ಮ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ರಾಜ್ಯ ಮಟ್ಟದ ರಂಗ ಕುಣಿತ ಸ್ಪರ್ಧೆ ನಡೆಯಿತು.
ಗ್ರಾಮೀಣ ಸೊಗಡಿನ ಜಾನಪದ ಕಲೆಯಾಗಿರುವ ರಂಗಕುಣಿತ ಸ್ಪರ್ಧೆಯಲ್ಲಿ 14ತಂಡಗಳು ರಾಜ್ಯ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದವು. ಸ್ಪರ್ಧೆಯನ್ನು ನೋಡಲು ಸಾವಿರಾರು ಮಂದಿ ಸಾರಂಗಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸೇರಿದ್ದರು. ತುಂತುರು ಮಳೆಯ ನಡುವೆಯೂ ರಂಗಕುಣಿಯುವ ಸ್ಪರ್ಧಿಗಳು ಕಾಲಿಗೆ ಗೆಜ್ಜೆ ಕಟ್ಟಿಕೊಂಡು ತಮಟೆಯ ಸದ್ದಿಗೆ ಲಯಬದ್ಧವಾಗಿ ಕುಣಿದು ಪ್ರೇಕ್ಷಕರ ಮನಸ್ಸನ್ನು ಸಂತೋಷ ಪಡಿಸಿದರು. ರಂಗಕುಣಿಯುವ ಸ್ಪರ್ಧಿಗಳಿಗೆ ಚಪ್ಪಾಳೆ ತಟ್ಟಿ, ಹರ್ಷೋದ್ಘಾರ ಮಾಡಿ ಪ್ರೋತ್ಸಾಹ ನೀಡಿದರು. ಪ್ರೇಕ್ಷಕರ ಪ್ರೋತ್ಸಾಹಕ್ಕೆ ಸ್ಪರ್ಧಿಗಳು ತಮಟೆಯ ವಾದನಕ್ಕೆ ಹೆಜ್ಜೆ ಹಾಕುವ ಮೂಲಕ ಸಂಭ್ರಮಿಸಿದರು.

ಹಬ್ಬದ ಅಂಗವಾಗಿ ಬಾಯಿಬೀಗ, ಕನ್ನಂಕಾಡಿ, ಹಸಿರು ಬಂಡಿ, ಮಡೆ ಸಿಡಿಮದ್ದು, ಹಾಗೂ ಹುಣಸೂರಿನ ದೇವರ ಗುಡ್ಡಗಳ ಕುಣಿತದೊಂದಿಗೆ ನಡೆದ ಶ್ರೀ ಕೋಡಿಯಮ್ಮನವರ ಉತ್ಸವಕ್ಕೆ ಮೆರುಗು ನೀಡುವಂತೆ ಗ್ರಾಮೀಣ ಕಲೆಗಳಿಗೆ ಪ್ರೋತ್ಸಾಹ ನೀಡುವ ರಂಗ ಕುಣಿತ ಸ್ಪರ್ಧೆಗಳು ಎಲ್ಲರ ಗಮನ ಸೆಳೆಯಿತು. ನಾಡಿನ ವಿವಿಧ ಭಾಗಗಳಿಂದ ಆಗಮಿಸಿದ್ದ 14ಕ್ಕೂ ಹೆಚ್ಚಿನ ರಂಗ ಕುಣಿತದ ತಂಡಗಳು ಅದ್ದೂರಿಯಾಗಿ ರಂಗಕುಣಿತದ ನೃತ್ಯ ಪ್ರದರ್ಶನ ನೀಡಿದವು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಮಾಜ ಸೇವಕ ಮಲ್ಲಿಕಾರ್ಜುನ್ ರಂಗಕುಣಿತ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಪ್ರದೇಶದ ರೈತರ ಜೀವನಾಡಿಯಾಗಿರುವ ರಂಗ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಾರಂಗಿ ಗ್ರಾಮಸ್ಥರು ರಾಜ್ಯ ಮಟ್ಟದ ರಂಗ ಕುಣಿತದ ಸ್ಪರ್ಧೆಯನ್ನು ಆಯೋಜಿಸಿರುವುದು ಮಾದರಿಯಾಗಿದೆ. ಇಂದಿನ ಆಧುನಿಕ ಜೀವನ ಶೈಲಿಯಿಂದಾಗಿ ನಮ್ಮ ನೆಲದ ಗ್ರಾಮೀಣ ಸೊಗಡಿನ ಕಲೆಗಳನ್ನು ಉಳಿಸಿ ಬೆಳೆಸಲು ಇಂತಹ ಸ್ಪರ್ಧೆಗಳು ಸ್ಫೂರ್ತಿಧಾಯಕ ವಾಗಿದೆ ಎಂದು ಅಭಿಮಾನದಿಂದ ಹೇಳಿದರು.

ಜಾತ್ರಾ ಮಹೋತ್ಸವ ಹಾಗೂ ರಂಗ ಕುಣಿತ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಮನ್‌ಮುಲ್ ನಿರ್ದೇಶಕ ಡಾಲು ರವಿ, ತೀರ್ಪುಗಾರ ಶಿಕ್ಷಕ ರಂಗಸ್ವಾಮಿ, ಗ್ರಾಮದ ಮುಖಂಡರಾದ ಈಶ, ರಮೇಶ್, ಜಯರಂಗ, ಗ್ರಾಮ ಪಂಚಾಯತ್ ಸದಸ್ಯ ರಮೇಶ್, ಮನ್‌ಮುಲ್ ಮಾಜಿ ನಿರ್ದೇಶಕ ನಂಜು0ಡೇಗೌಡ, ರೇವಣ್ಣ, ಜಯರಾಮು, ಸಾರಂಗಿ ನಾಗಣ್ಣ, ಬೆಟ್ಟೇಗೌಡ, ದೇವೇಗೌಡ, ಮರಿಸ್ವಾಮಿಗೌಡ, ಸತೀಶ್, ಬಸವೇಗೌಡ, ಲಿಂಗರಾಜು, ಮಂಜೇಗೌಡ, ಗಿರೀಶ್, ಸಚಿನ್, ದೇವರಾಜು, ಅಣ್ಣೀಗೌಡ, ಯೋಗೇಗೌಡ, ವಿಶ್ವನಾಥ್, ನವೀನ್, ಯುವ ಮುಖಂಡ ಶರತ್‌ಗೌಡ ಸೇರಿದಂತೆ ಐದು ಸಾವಿರಕ್ಕೂ ಹೆಚ್ಚಿನ ಜನರು ತುಂತುರು ಮಳೆಯ ನಡುವೆಯೂ ರಂಗಕುಣಿತ ಸ್ಪರ್ಧೆಯನ್ನು ರಾತ್ರಿಯಿಡೀ ವೀಕ್ಷಿಸಿ ಗ್ರಾಮೀಣ ಜಾನಪದ ಕಲೆ ರಂಗಕುಣಿತ ಕಲಾವಿದರನ್ನು ಪ್ರೋತ್ಸಾಹಿಸಿದರು.

ಸ್ಪರ್ಧೆಯಲ್ಲಿ ವಿತೇತ ತಂಡಗಳ ವಿವರ : ರಾಜ್ಯಮಟ್ಟದ ರಂಗಕುಣಿತ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ 14 ತಂಡಗಳು ಭಾಗವಹಿಸಿ ತಮ್ಮ ಪ್ರತಿಭೆ ಅನಾವರಣ ಮಾಡಿ ಜಾನಪದ ಸಂಸ್ಕೃತಿಯನ್ನು ಉಳಿಸುವ ಸಾರಂಗಿ ಗ್ರಾಮಸ್ಥರ ಪ್ರಯತ್ನಕ್ಕೆ ಸಹಕಾರಿಯಾದರು.

ಪ್ರಥಮ ಬಹುಮಾನ 10,000 ರೂ ದಬ್ಬೆಘಟ್ಟ (ತುರುವೆಕೆರೆ.ತಾಲ್ಲೂಕು) ತಂಡ ಪಡೆಯಿತು. ದ್ವಿತೀಯ ಬಹುಮಾನವನ್ನು ನಾಗಮಂಗಲ ಲಾಳನಕೆರೆ ತಂಡ 6000 ರೂ, ತೃತೀಯ ಬಹುಮಾನ ಮೈಸೂರು ತಾಲ್ಲೂಕು ಇಲವಾಲ ತಂಡ 4000 ರೂ. ನಾಲ್ಕನೇ ಬಹುಮಾನವನ್ನು ಹಿರೀಸಾವೆ, ದೇವರಮಾವಿನಕೆರೆ, ನಗರ್ತಿ, ಗುಂಜೇವು ಗ್ರಾಮದ ತಂಡಗಳಿಗೆ ತಲಾ 3000 ರೂ ಬಹುಮಾನ ನೀಡಲಾಯಿತು.

ಹೆಗ್ಗಡಹಳ್ಳಿ, ಶ್ಯಾರಹಳ್ಳಿ, ಗುಡುಗನಹಳ್ಳಿ, ಸೊರೆಕಾಯಿಪುರ, ಲೋಕನಹಳ್ಳಿ, ಹೊನ್ನೆನಹಳ್ಳಿ, ಸಾರಂಗಿ ಗ್ರಾಮಗಳ 7 ತಂಡಗಳಿಗೆ ತಲಾ 2000 ರೂಪಾಯಿಗಳನ್ನು ಸಮಾದಾನಕರ ಬಹುಮಾನವಾಗಿ ನೀಡಲಾಯಿತು.
– ಶ್ರೀನಿವಾಸ್ ಆರ್.