ಕೊಪ್ಪ:ನಮ್ಮ ಭೂಮಿಯನ್ನು ಕಿತ್ತುಕೊಳ್ಳುವ ಹಕ್ಕು ಯಾರಿಗೂ ಇಲ್ಲ.ತಲೆ-ತಲೆಮಾರುಗಳಿಂದ ನಾವು ಇಲ್ಲಿಯೇ ಜೀವಿಸುತ್ತಾ ಬಂದಿದ್ದೇವೆ.ನಮ್ಮ ಭೂಮಿಯನ್ನು ಉಳಿಸಿಕೊಳ್ಳಲು ಎಂತಹದ್ದೇ ರೂಪದ ಹೋರಾಟಕ್ಕೂ ನಾವುಗಳು ಸಿದ್ದರಿದ್ದೇವೆ ಎಂದು ಗ್ರಾಮಸ್ಥರೆಲ್ಲರೂ ಒಕ್ಕೊರಲಿನ ತೀರ್ಮಾನ ತೆಗೆದುಕೊಂಡ ಘಟನೆಗೆ ನರಸೀಪುರ ಗ್ರಾಮಪಂಚಾಯತಿ ಸಾಕ್ಷಿಯಾಯಿತು.
ಬಹಳ ಅಪರೂಪದ ಗ್ರಾಮಸಭೆಯೊಂದು ಇಂದು ನಡೆದಿದ್ದು,ಮಲೆನಾಡಿಗರ ತಲೆಯ ಮೇಲಿನ ತೂಗುಗತ್ತಿ ಕಸ್ತೂರಿ ರಂಗನ್ ವರದಿ ಜಾರಿಯ ವಿರುದ್ಧವಾಗಿ ಗ್ರಾ.ಪಂ ವ್ಯಾಪ್ತಿಯ ಗ್ರಾಮಸ್ಥರೆಲ್ಲರೂ ಒಗ್ಗಟ್ಟಾಗಿ ನಿಂತು ಒಮ್ಮತದ ನಿರ್ಣಯ ತೆಗೆದುಕೊಂಡರು.
ಗ್ರಾಮ ಸಭೆ ಆರಂಭವಾಗುತ್ತಿದ್ದಂತೆ ಗ್ರಾಮಸ್ಥರುಗಳು,ತಮ್ಮ ಗ್ರಾಮಗಳನ್ನ ಕಸ್ತೂರಿ ರಂಗನ್ ವರದಿ ಆಧರಿಸಿ ಪರಿಸರ ಸೂಕ್ಷ್ಮ ವಲಯಕ್ಕೆ ಸೇರಿಸಿರುವ 6ನೇ ಅಧಿಸೂಚನೆ ವಿರುದ್ಧ ಆಕ್ಷೇಪಣೆ ಸಲ್ಲಿಸಿದರು.ನಮ್ಮ ಭೂಮಿ ನಮ್ಮ ಹಕ್ಕು ಯಾವ ಕಾನೂನುಗಳಿಗೂ ನಾವು ಹೆದರಿ ಕೂರುವುದಿಲ್ಲ.ನಮ್ಮ ಭೂಮಿಗೆ ಕೈಹಾಕಲು ಬಂದವರ ವಿರುದ್ಧ ಕ್ರಾಂತಿ ಮೊಳಗಿಸುವ ಎಚ್ಚರಿಕೆಯನ್ನು ಸಭೆಯಲ್ಲಿ ಸರ್ವರೂ ವ್ಯಕ್ತಪಡಿಸಿದರು.
ಗ್ರಾಮಸಭೆಯನ್ನು ಉದ್ದೇಶಿಸಿ ಮಾತನಾಡಿದ ಗ್ರಾ ಪಂ ಸದಸ್ಯ ಅನಿಲ್ ಕುಮಾರ್,ನಮ್ಮ ಜಮೀನನ್ನು ವರದಿಯೊಂದನ್ನು ಆದರಿಸಿ ಬಿಟ್ಟುಕೊಡುವ ಪ್ರಮೇಯವೇ ಉದ್ಭವವಾಗುವುದಿಲ್ಲ.ಆಡಳಿತ ವ್ಯವಸ್ಥೆ ಏನಾದರು ಅಂತಹ ಕ್ರಮಕ್ಕೆ ಮುಂದಾದರೆ ಆಗುವ ಅನಾಹುತಗಳಿಗೆ ಅವರೇ ಕಾರಣೀಕರ್ತರಾಗುತ್ತಾರೆ.ಲಾಠಿ-ಭೂಟು-ಬಂದೂಕುಗಳಿಗೆ ಹೆದರುವ ಪ್ರಶ್ನೆಯೇ ಇಲ್ಲ.ಸರ್ವತಾ ಎಲ್ಲವನ್ನು ಎದುರಿಸಲು ನಾವು ಸಿದ್ಧರಾಗೋಣ ಎಂದು ಅವರು ಕರೆ ನೀಡಿದರು.
ತಾಲ್ಲೂಕು ಕೆ.ಡಿ.ಪಿ ಸದಸ್ಯ ಚಿಂತನ್ ಬೆಳಗೂಳ ಮಾತನಾಡಿ ನಾವು ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಿದ್ದು ರೈತರ ಪರ ನಿಲ್ಲುತ್ತೇವೆ.ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ಜಂಟಿ ಸರ್ವೆ ನಡೆಸಬೇಕೆಂದು ಆಗ್ರಹಿಸಿದರು.
ಆನಂದ್ ಬೆಳಗೂಳ ಮಾತನಾಡಿ ನಾವು ಇಲ್ಲಿನ ಮೂಲ ನಿವಾಸಿಗಳು.ಮಲೆನಾಡಿಗರಿಗೆ ಕಸ್ತೂರಿ ರಂಗನ್ ವರದಿ ಮರಣ ಶಾಸನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಗ್ರಾಮಸ್ಥರೆಲ್ಲರು ಸೇರಿ ಕೇಂದ್ರ ಅರಣ್ಯ ಪರಿಸರ ಮತ್ತು ಜೀವಿ ಶಾಸ್ತ್ರ ಇಲಾಖೆಯ ಸಚಿವರಿಗೆ ಆಕ್ಷೇಪಣೆ ಪತ್ರವನ್ನು ಕಳುಹಿಸುವುದು ಎಂಬ ಒಮ್ಮತದ ತೀರ್ಮಾನ ಕೈಗೊಂಡರು.
ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀಕಾಂತ್ ಆರ್ಡಿಕೊಪ್ಪ ಅಧ್ಯಕ್ಷತೆ ವಹಿಸಿದ್ದ ಗ್ರಾಮಸಭೆಯಲ್ಲಿ ತಾಲ್ಲೂಕು ಕೆ.ಡಿ.ಪಿ ಸದಸ್ಯರುಗಳಾದ ಅಶೋಕ್ ನಾರ್ವೆ ಮತ್ತು ಮಹಮ್ಮದ್ ಸಾದಿಕ್,ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಆಶಾಸುರೇಶ್,ಸದಸ್ಯರುಗಳಾದ ಪ್ರದೀಪ್ ಕುಂಚೂರ್,ಸುಜಾತ ಸುರೇಶ್,ಪವಿತ್ರ ಕಾಡಪ್ಪ ಸುಮಿತ್ರ ಪ್ರಶಾಂತ್ ಹಾಗೂ ಗ್ರಾಮಸ್ಥರಾದ ವಾಸಪ್ಪ ಕುಂಚೂರ್ ,ಶ್ರೀಧರ್ ಬೆಳಗೂಳ ಹಾಗೆ ನೂರಾರು ಗ್ರಾಮಸ್ಥರು ಉಪಸ್ಥಿತರಿದ್ದರು.
———————--ಹರೀಶ್ ನಾರ್ವೆ