ಕೊರಟಗೆರೆ:-ಬಹುತೇಕ ಸಂಘಟನೆಗಳು ಪುರುಷ ಪ್ರಧಾನವಾಗಿದೆ,ಮಹಿಳೆಯರು ಕೇವಲ ಅಡುಗೆ ಮನೆಗೆ ಸೀಮಿತವಾಗದೆ ಸಂಘಟಿತರಾಗಬೇಕಿದೆ ಎಂದು ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಹನುಮಂತನಾಥ ಸ್ವಾಮೀಜಿ ಕರೆ ನೀಡಿದರು.
ಕುಂಚ ಶ್ರೀ ಮಹಿಳಾ ಬಳಗದ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ ಮಾತನಾಡಿದರು.
ಹೆಣ್ಣು ಮಕ್ಕಳು ಸಂಘಟನೆಯಾಗಬೇಕಿದ್ದು,ಸಮಾಜದ ಮುಖ್ಯ ವಾಹಿನಿಗೆ ಬರಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ರಾಜ್ಯದಾದ್ಯಂತ 27 ಲಕ್ಷ ಕುಂಚಿಟಿಗ ಸಮುದಾಯ ಇದೆ,ಜಿಲ್ಲೆಯ ತಿಪಟೂರು ತಾಲೂಕನ್ನು ಹೊರತುಪಡಿಸಿ ಎಲ್ಲಾ 9 ತಾಲೂಕಿನಲ್ಲೂ ಸಮುದಾಯದ ಜನರಿದ್ದು ಸಂಘಟನೆಯಾಗಬೇಕಾಗಿದ್ದು,ಸಮುದಾಯದ ಶಕ್ತಿಯನ್ನು ತಿಳಿಸುವಂತಹ ಅನಿವಾರ್ಯತೆ ಇದೆ ಎಂದರು.
ಯಾವುದೋ ಸ್ವಾರ್ಥಕ್ಕಾಗಿ ಸಂಘಟನೆ ಮಾಡಬೇಡಿ ಸಮುದಾಯದ ಅಭ್ಯುದಯಕ್ಕಾಗಿ ಕಾರ್ಯಪ್ರವೃತ್ತರಾಗಿ ಮತ್ತು ಸಮುದಾಯದ ಮಕ್ಕಳ ಶಿಕ್ಷಣದ ಆದ್ಯತೆಗೆ ಪೂರಕವಾದಂತಹ ಕಾರ್ಯಕ್ರಮಗಳನ್ನು ರೂಪಿಸುವುದರ ಮೂಲಕ ಕೆಲಸ ಮಾಡಬೇಕು,ಶಿಕ್ಷಣವಿಲ್ಲದೆ ಇಂದು ಏನು ಮಾಡಲು ಸಾಧ್ಯವಿಲ್ಲ,ಶಿಕ್ಷಣವೇ ನಮ್ಮ ಶಕ್ತಿ ಆಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕುಂಚಶ್ರೀ ಮಹಿಳಾ ಬಳಗದ ತಾಲೂಕು ಅಧ್ಯಕ್ಷೆ ಕವಿತಾ ಮಂಜುನಾಥ್,ಗ್ರಾಮ ಪಂಚಾಯಿತಿ ಸದಸ್ಯೆ ಪುಟ್ಟಮ್ಮ,ಪ್ರೇಮ, ಸುಜಾತ,ಮುಖಂಡರಾದ ನಾಗೇಶ್, ಸೇರಿದಂತೆ ಇತರರು ಇದ್ದರು.