ಕೊರಟಗೆರೆ :- ಕೊರಟಗೆರೆ ತಾಲೂಕಿನ ಎಲೆರಾಂಪುರದ ಶ್ರೀ ನರಸಿಂಹಗಿರಿ ಕ್ಷೇತ್ರದ ಕುಂಚಿಟಿಗರ ಮಹಾಸಂಸ್ಥಾನ ಮಠದಲ್ಲಿ 4 ನೇ ವರ್ಷದ ಸಂಸ್ಕಾರ ಶಿಬಿರವು ಏಪ್ರಿಲ್ 16ರಿಂದ ಪ್ರಾರಂಭವಾಗಲಿದೆ ಎಂದು ಕ್ಷೇತ್ರದ ಪೀಠಾದ್ಯಕ್ಷ ಶ್ರೀ ಡಾ. ಹನುಮಂತನಾಥ ಸ್ವಾಮೀಜಿ ತಿಳಿಸಿದ್ದಾರೆ.
ಅವರು ಪತ್ರಿಕಾ ಹೇಳಿಕೆ ನೀಡಿ ಶಾಲಾ ಮಕ್ಕಳಿಗೆ ಬೇಸಿಗೆ ರಜಾ ನಿಮಿತ್ತ ನರಸಿಂಹಗಿರಿ ಕ್ಷೇತ್ರದಲ್ಲಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಸಂಸ್ಕಾರವನ್ನು ಕಲಿಸುವ ಉದ್ದೇಶದಿಂದ 1೦ ದಿನಗಳ ಕಾಲ ಶ್ರೀ ಮಠದಲ್ಲಿ ಸಂಸ್ಕಾರ ಶಿಬಿರವನ್ನು ನಡೆಸಲಾಗುವುದು, ಈ ಶಿಬಿರದಲ್ಲಿ ಮಕ್ಕಳಿಗೆ ಯೋಗ, ಧ್ಯಾನ, ಭಕ್ತಿಗೀತೆಗಳು, ಸಾಂಸ್ಕೃತಿಕ ಕಲೆಗಳು, ಸೇರಿದಂತೆ ಹಲವು ಚಟುವಟಿಕೆಗಳನ್ನು ಹೇಳಿಕೊಡಲಾಗುವುದು ಮತ್ತು ಮಕ್ಕಳಲ್ಲಿ ಗುಣಾತ್ಮಕ ಚಿಂತನೆಯನ್ನು ಮೂಡಿಸಲಾಗುವುದು.
ಈ ಶಿಬಿರದಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳು ಪಾಲ್ಗೊಳ್ಳಬಹುದಾಗಿದ್ದು, ಇಬ್ಬರಿಗೂ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗುವುದು, ಕಾರ್ಯಕ್ರಮದ ಉದ್ಘಾಟನೆೆಯು ಏಪ್ರಿಲ್ 16ರ ಬೆಳಗ್ಗೆ 1೦-೦೦ ಗಂಟೆಗೆ ನಡೆಯುವುದು.

ಈ ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಶ್ರೀ ಡಾ. ಹನುಮಂತನಾಥ ಸ್ವಾಮೀಜಿ ವಹಿಸುವರು ಉದ್ಘಾಟನೆ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾಡುವರು, ಅದ್ಯಕ್ಷತೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜ್ಯೋಶಿ ವಹಿಸುವರು, ಕಾರ್ಯಕ್ರಮದಲ್ಲಿ ತುಮಕೂರು ವಿಶ್ವವಿದ್ಯಾನಿಲಯ ಕುಲಸಚಿವೆ ನಾಹೀದಾ ಜಂ ಜಂ, ಶ್ರೀ ಮಠದ ಧಾನಿ ಡಾ. ನವೀನ್‌ದೇವರಾಜಯ್ಯ, ಕೊರಟಗೆರೆ ತಾಲೂಕು ತಹಶೀಲ್ದಾರ್ ಕೆ.ಮಂಜುನಾಥ್, ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದು ಈ ಸಂಸ್ಕಾರ ಶಿಬಿರಕ್ಕೆ ಸಾರ್ವಜನಿಕರು ತಮ್ಮ ಮಕ್ಕಳನ್ನು ಕರೆತರುವಂತೆ ಹಾಗೂ ಈ ಕಾರ್ಯಕ್ರಮಕ್ಕೆ ಎಲ್ಲರೂ ಆಗಮಿಸುವಂತೆ ಕೋರಿದ್ದಾರೆ.
– ಶ್ರೀನಿವಾಸ್ ಕೊರಟಗೆರೆ