ಕೊರಟಗೆರೆ-ಅಖಿಲ-ಭಾರತ-ವೀರಶೈವ-ಮಹಾಸಭಾ-ವತಿಯಿಂದ-ಶ್ರೀ-ಜಗದ್ಗುರು-ರೇಣುಕಾಚಾರ್ಯರ-ಜಯಂತಿ

ಕೊರಟಗೆರೆ- ಶ್ರೀಜಗದ್ಗುರು ರೇಣುಕಾಚಾರ್ಯರು ಮಾಡಿದ ಪವಾಡ ತೋರಿದ ಲೀಲೆಗಳು ಅನಂತ. ಭೂಮಂಡಲದಲ್ಲಿ ಶಿವನಾಗಿ ಸಂಚರಿಸಿ ಕೆಲವು ಕಾಲ ಗುಪ್ತವಾಗಿಯೂ ಕೆಲವು ಕಾಲ ಪ್ರಕಟವಾಗಿಯೂ ಶಿವನ ಅಣತಿಯಂತೆ ಸರ್ವಕಾರ್ಯಗಳನ್ನು ಪೂರ್ಣಗೊಳಿಸಿ ಪುನಃ ಕೊಲನುಪಾಕಿಯ ಸುಕ್ಷೇತ್ರಕ್ಕೆ ದಯಮಾಡಿಸಿ, ಶ್ರೀಸೋಮೇಶ್ವರ ಮಹಾಲಿಂಗದಲ್ಲೇ ಲೀನವಾಗಿದ್ದು, ಅವಿಸ್ಮರಣೀಯ ಎಂದು ವೀರಶೈವ ಮಹಾಸಭಾ ಅಧ್ಯಕ್ಷ ಭದ್ರಯ್ಯ ತಿಳಿಸಿದರು.

ಪಟ್ಟಣದ ಬಸವೇಶ್ವರ ದೇವಾಲಯದಲ್ಲಿ ಅಖಿಲಾ ಭಾರತ ವೀರಶೈವ ಮಹಾಸಭಾ ವತಿಯಿಂದ ಆಯೋಜಿಸಲಾದ ಜಗದ್ಗುರು ರೇಣುಕಾಚಾರ್ಯರ ಜಯಂತಿಯ ವೇಳೆ ಪೂಜೆ ಸಲ್ಲಿಸಿ ಮಾತನಾಡಿದ ಅವರು ಭಾರತದ ಪುಣ್ಶಭೂಮಿಯಲ್ಲಿ ಹಲವಾರು ಧರ್ಮಗಳು ಜನ್ಮ ಪಡೆದು ಮಾನವರ ಐಕ್ಯ ಉದ್ಧಾರಕ್ಕೆ ಮತ್ತು ಅಲೌಕಿಕ ಪ್ರಾಪ್ತಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿವೆ. ಧರ್ಮಗಳ ಸಂಗಮವಾಗಿರುವ ಯೋಗ ತ್ಶಾಗದ ನಾಡು. ಈ ನಮ್ಮ ದೇಶದಲ್ಲಿ ವೀರಶೈವ ಧರ್ಮವು ತನ್ನ ವಿಶಿಷ್ಠ ವಿಚಾರಧಾರೆ ಅರ್ಥಪೂರ್ಣ ಶಿಷ್ಠ ಆಚಾರ ಸಂಹಿತೆಯಿಂದಾಗಿ ಬುದ್ಧಿಜೀವಿಗಳ ಹಾಗೂ ಭಾವನಾ ಜೀವಿಗಳ ಗಮನವನ್ನು ವಿಶ್ವಮಟ್ಟದಲ್ಲಿ ಸೆಳೆದಿದೆ. ಆಚಾರ ವಿಚಾರಗಳ ಸಮನ್ವಯ ಸಂಗಮದಂತಿರುವ ವೀರಶೈವ ಧರ್ಮ ಸಂಸ್ಥಾಪನೆಯ ಕೀರ್ತಿ ಆದಿಜಗದ್ಗುರು ಶ್ರೀರೇಣುಕಾದಿ ಪಂಚಾಚಾರ್ಯರಿಗೆ ಸಲ್ಲುತ್ತದೆ ಎಂದು ಹೇಳಿದರು.

ವೀರಶೈವ ಮಹಿಳಾ ಘಟಕ ಅಧ್ಯಕ್ಷೆ ದ್ರಾಕ್ಷಾಯಿಣಿ ಮಾತನಾಡಿ, ಶ್ರೀಜಗದ್ಗುರು ರೇಣುಕಾಚಾರ್ಯರು ತಮ್ಮ ಉಗಮಕ್ಕೆ ಅಂಗವನ್ನು ಮುಖ್ಯವಾಗಿಸಿಕೊಳ್ಳಲಿಲ್ಲ. ಲಿಂಗವನ್ನು ಮುಖ್ಯವಾಗಿಸಿಕೊಂಡರು. ಆದ್ದರಿಂದಲೇ ಅವರು ಅಂಗೋದ್ಭವರಲ್ಲ ಲಿಂಗೋದ್ಭವರಾಗಿದ್ದಾರೆ. ಅವರದು ದೇಹ ಸೃಷ್ಠಿಯಲ್ಲ, ದೇವ ಸೃಷ್ಠಿಯಾಗಿ ರುವುದರಿಂದ ಲೌಕಿಕರನ್ನು ಆಶೀರ್ವದಿಸುವ ಧರ್ಮಗುರುಗಳಾಗಿದ್ದಾರೆ. ಧರ್ಮಧ್ವಜವನ್ನು ಹಿಡಿದು ದಂಡ ಕಮಂಡಲಧಾರಿಗಳಾಗಿ ಕೊಲನುಪಾಕಿಯಲ್ಲಿಯೇ ನೆಲೆ ನಿಂತುಕೊಳ್ಳದೇ ನಾಡಿನ ತುಂಬೆಲ್ಲಾ ಸಂಚರಿಸಿ ಪತಿತರನ್ನು ಪಾವನಿಸುತ್ತಾ ಪಾಮರರನ್ನು ಪರಮಾರ್ಶಿಸುತ್ತಾ ಪಾಪಾತ್ಮರನ್ನು ಪುಣ್ಶಾತ್ಮರನ್ನಾಗಿಸುತ್ತಾ ಮಾನವೀಯತೆಯ ಕಲ್ಯಾಣದ ಕಹಳೆಯನ್ನು ಊದಿ ಶಿವದುಂಧುಭಿಯನ್ನು ಮೊಳಗಿಸಿ ಧಾರ್ಮಿಕ ಕ್ಷಿತಿಜವನ್ನು ವಿಸ್ತಾರಗೊಳಿಸಿದ ಮಹಾತ್ಮರಾಗಿದ್ದಾರೆ.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಶಿವಕುಮಾರ್, ಆರಾಧ್ಯ, ವಿನಯ್, ಚೆನ್ನಬಸವಯ್ಯ, ಕಿರಣ್, ಪವನ್ ಸೇರಿದಂತೆ ಸಮಾಜದ ಬಾಂಧವರು ಹಾಜರಿದ್ದರು.

  • ನರಸಿಂಹಯ್ಯ ಕೋಳಾಲ

Leave a Reply

Your email address will not be published. Required fields are marked *

× How can I help you?