ಕೊರಟಗೆರೆ : ಹನ್ನೆರಡನೇ ಶತಮಾನದಲ್ಲಿ ಶರಣರು ಸರ್ವರಿಗೂ ಸಮಪಾಲು ಸಮಬಾಳು ಒದಗಿಸಲು ಸಮಾಜಿಕ ಕ್ರಾಂತಿಯನ್ನೇ ಮಾಡಿದ ಸಂದರ್ಭದಲ್ಲಿ ಶರಣರ ಅಗ್ರಗಣ್ಯ ಬಳಗದಲ್ಲಿ ಮಡಿವಾಳ ಮಾಚಿದೇವ ಅತ್ಯಂತ ಪ್ರಕಾಶಮಾನವಾಗಿ ಇಡೀ ಶರಣ ಸಮುದಾಯದ ಪ್ರಶಂಸೆಗೆ ಒಳಗಾದವರು ಮಾಚಿದೇವರು ಎಂದು ಗ್ರೇಡ್2 ತಹಶೀಲ್ದಾರ್ ರಾಮಪ್ರಸಾದ್ ತಿಳಿಸಿದರು.
ಅವರು ಕೊರಟಗೆರೆ ಪಟ್ಟಣದ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಮಡಿವಾಳ ಸಂಘ ಏರ್ಪಡಿಸಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದ ಅದ್ಯಕ್ಷರೆ ವಹಿಸಿ ಮಾತನಾಡಿ, ಮಾಚಿದೇವರು ಬಹುಮುಖ ವ್ಯಕ್ತಿತ್ವ, ವೀರಶ್ರೀ, ಜ್ಞಾನಪ್ರತಿಬೆ, ಸತ್ಯನಿಷ್ಠೆ, ನ್ಯಾಯನಿಷ್ಠೂರ, ನಿರಹಂಕಾರ, ನಿರ್ವಂಚಕತ್ವ ಇತ್ಯಾದಿ ಸತ್ವಗಳ ಸಂಕಲನವೇ ಮಾಚಿದೇವರು ವ್ಯಕ್ತಿತ್ವ ಕಲ್ಯಾಣದ ಕ್ರಾಂತ್ರಿಯಲ್ಲಿ ಇವರ ಪಾತ್ರ ಮಹತ್ವದ್ದು. ಶರಣರಿಗೆ ಗಂಡಾಂತರ ಬಂದಾಗ ಅವರ ಬೆನ್ನೆಹಿಂದೆ ಬೀಮರಕ್ಷೆಯಾಗಿ ವೀರನಂತೆ ನಿಂತು ಹೋರಾಡಿದ ವ್ಯಕ್ತಿಯಾಗಿದ್ದು ಇದರೊಂದಿಗೆ ಅನುಭವ ಮಂಟಪ ಸ್ಥಾಪನೆಗೆ ಮಾಚಿದೇವರ ಪಾತ್ರ ಹಿರಿದು ಎಂದು ತಿಳಿಸಿದರು.
ತಾಲೂಕು ಮಡಿವಾಳ ಸಂಘದ ಕಾರ್ಯದರ್ಶಿ ಡಿ.ಎಸ್.ಆನಂದ್ ಮಾತನಾಡಿ ಮಾಚಿದೇವರ ವಂಶಸ್ಥರಾದ ಮಡಿವಾಳರು ಅನಾದಿಕಾಲದಿಂದಲೂ ಶ್ರೇಷ್ಠ ಪರಂಪರೆ ಹೊಂದಿದ ಶ್ರಮಜೀವಿಗಳು ಮತ್ತು ಪ್ರಾಮಾಣಿಕವಾಗಿ ಸಮಾಜದಲ್ಲಿ ಗುರುತಿಸಿಕೊಂಡು ಬಂದಿದ್ದಾರೆ, ಮಡಿವಾಳ ಸಮಾಜದ ನೈಜ ಬೇಡಿಕೆಗಳನ್ನು ಸರ್ಕಾರ ಈಡೇರಿಸದೆ ಇರುವುದರಿಂದ ಈ ಸಮಾಜ ಶೈಕ್ಷಣಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಮುಂದೆ ಬಂದು ನಾಗರಿಕ ಸಮಾಜದಲಿ ತಲೆ ಎತ್ತಿ ನಿಲ್ಲಲು ಸಾಧ್ಯವಾಗುತ್ತಿಲ್ಲ ಎಂದ ಅವರು ಬಹುವರ್ಷಗಳಿಂದ ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗಳ ಪಟ್ಟಿಗೆ ಸೇರ್ಪಡೆ ಮಾಡಲು ಅನೇಕ ಹೋರಾಟಗಳು ನಡೆದೆರೂ ಇಲ್ಲಿಯ ತನಕ ಯಾವುದೇ ಸರ್ಕಾರ ಬೇಡಿಕೆ ಈಡೇರಿಸಿಲ್ಲ ದೇಶದ 18 ರಾಜ್ಯ ಗಳಲ್ಲಿ ಮತ್ತು 3 ಕೇಂದ್ರಾಡಳಿತ ಪ್ರದೇಶಗಳ ಮಡಿವಾಳ ಜನಾಂಗವನ್ನು ಪರಿಶಿಷ್ಟ ಜಾತಿಗೆ ಸೇರಿಸಿವೆಯಾದರೂ ಕರ್ನಾಟಕದಲ್ಲಿ ಮಾತ್ರ ಇದು ಇನ್ನೂ ಬೇಡಿಕೆಯಾಗಿ ನೆನೆಗುಂದಿಗೆ ಬಿದ್ದು ಬೇಡಿಕೆಯಾಗಿಯೇ ಉಳಿದಿದೆ ಎಂದು ತಿಳಿಸಿದ ಅವರು ಮಾಚಿದೇವರ ಜಯಂತಿ ಕೇವಲ ತಾಲೂಕು ಕಛೇರಿಯಲ್ಲಿ ಮಾತ್ರ ಆಚರಣೆಯಾಗದೆ ಈ ಜಯಂತಿ ಸರ್ಕಾರಿ ಕಾರ್ಯಕ್ರಮ ವಾದ ಹಿನ್ನೆಲೆಯಲ್ಲಿ ಎಲ್ಲಾ ಇಲಾಖಾ ಕಛೇರಿಗಳಲ್ಲಿ ಹಾಗೂ ಶಾಲೆಗಳಲ್ಲಿ ಆಚರಿಸುವಂತೆ ಆಗ್ರಹಿಸಿದರು.
ಸಮುದಾಯದ ಮುಖಂಡ ಹಾಗೂ ನಿವೃತ್ತ ಶಿಕ್ಷಕ ನರಸಿಂಹಮೂರ್ತಿ ಮಾತನಾಡಿ ಮಡಿವಾಳ ಮಾಚಿದೇವ ಅವತಾರ ಪುರುಷ ವೀರಭದ್ರಸ್ವಾಮಿಯಾಗಿದ್ದು ಅವರ ಜೀವನ ಚರಿತ್ರೆ ಇಡೀ ಶರಣ ಸಮುದಾಯದಲ್ಲಿಯೇ ವೈಶಿಷ್ಠ್ಯತೆ ಪಡೆದುಕೊಂಡಿದೆ, ಶರಣರನ್ನು ಸಮಾಜದ ಜನರನ್ನು ತಿದ್ದುವ ಇವರ ಕಾರ್ಯ ಶ್ಲಾಘನೀಯ, ಅವರ ವಿಚಾರಶೀಲತೆ, ಭಕ್ತಿ, ಜ್ಞಾನ, ಅನುಭವ, ಪರಸ್ಪರಗೌರವ, ವ್ಯಕ್ತಿಗೌರವ, ಸಮಾನತೆ ಮುಂತಾದ ತತ್ವಗಳಿಗೆ ಅವರ ವಚನಗಳು ಮಹತ್ವ ನೀಡಿದೆ, ಅಗಸ ಮುನಿಯುವುದು ಮಲಿನಕ್ಕೆ, ವಸ್ತಕ್ಕಲ್ಲ, ಶರಣ ಮುನಿಯುವುದು ಅವಗುಣಕ್ಕೆ ಶಿವಭಕ್ತಗಲ್ಲ, ನಾನೆಂಬುದನ್ನು ಮರೆತುಬಿಡಿ ಅರಸುತನ ಮೇಲಲ್ಲ ಅಗಸತನ ಕೀಳಲ್ಲ ಎಂದು ತಿಳಿದರೆ ಆಗ ಪುಟವಿಟ್ಟ ಚಿನ್ನದಂತೆ ನಿಮ್ಮ ಭಕ್ತಿ ಇನ್ನಷ್ಟು ಥಳಥಳಿಸುತ್ತದೆ, ಎಂಬ ಮಾತುಗಳಿಂದ ಇಡೀ ಶರಣರ ಬಳಗವೆ ಮಾಚಿದೇವರ ವ್ಯಕ್ತಿತ್ವಕ್ಕೆ ಅನುಭವಕ್ಕೆ ಶರಣನೆಂದಿದ್ದರು ಎಂದರು.
ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳಾದ ವೆಂಕಟರಂಗನ್, ಮಂಜುನಾಥ್, ಬಸವರಾಜು ತಿಮ್ಮಲಾಪುರ, ನಕುಲ್, ತಾಲೂಕು ಮಡಿವಾಳ ಸಂಘದ ಅಧ್ಯಕ್ಷ ಆರ್.ರುದ್ರೇಶ್, ಉಪಾಧ್ಯಕ್ಷ ಹನುಮಂತರಾಯಪ್ಪ, ಖಜಾಂಚಿ ಲಕ್ಷ್ಮಿಕಾಂತ, ಸಹಕಾರ್ಯದರ್ಶಿ ನರೇಂದ್ರಬಾಬು, ನಿರ್ದೆಶಕರುಗಳಾದ ನರಸಿಂಹಮೂರ್ತಿ, ಬಸವರಾಜು, ಮಹೇಶ್, ದೊಡ್ಡಯ್ಯ, ಹುನಂತರಾಯಪ್ಪ ಸೇರಿದಂತೆ ಇನ್ನಿತರ ಮುಖಂಡರುಗಳು ಉಪಸ್ಥಿತರಿದ್ದರು.