ಕೊರಟಗೆರೆ :- ಸಂಬಂಧಿಕರ ಮನೆಗೆ ಹಬ್ಬಕ್ಕೆ ಹೋಗುತ್ತಿದ್ದ ಯುವಕನ ದ್ವಿಚಕ್ರವಾಹನಕ್ಕೆ ಹಿಂಬದಿಯಿಂದ ಬಂದ ಅನಾಮಧೇಯ ವಾಹನ ಡಿಕ್ಕಿ ಹೊಡೆದ ಪರಿಣಾಮ ಯುವಕ ತಲೆಗೆ ತೀವ್ರ ಪೆಟ್ಟಾಗಿ ಅತೀವ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಕೊರಟಗೆರೆ ಪಟ್ಟಣದ ಕೈಮರ ಕ್ರಾಸ್ ನ ಬಳಿ ಈ ದುರ್ಘಟನೆ ಸಂಭವಿಸಿದ್ದು, ಲೇ. ನಾಗಪ್ಪನ ಮಗ ಮಂಜುನಾಥ್ ಸಾವಿಗೀಡಾದ ದುರ್ದೈವಿಯಾಗಿದ್ದಾನೆ.

ಮೃತ ಮಂಜುನಾಥ್ ಮೂಲತಹ ಮಡಕಶಿರಾ ತಾಲೂಕ್ , ಗುಡುಬಂಡೆ ಸಮೀಪದ ಬಳ್ಳೇಕಟ್ಟೆ ವಾಸಿಯಾಗಿದ್ದು, ತಾಯಿ ಹಾಗೂ ಮಗ ಬೆಂಗಳೂರಿನಲ್ಲಿ ಕಳೆದ ಕೆಲವು ವರ್ಷಗಳಿಂದ ವಾಸವಾಗಿದ್ದು, ಭಾನುವಾರ ಕೊರಟಗೆರೆ ಪಟ್ಟಣದ ಸಮೀಪದ ಕೈಮರದ ಸಂಬಂಧಿಕರ ಮನೆಗೆ ಹಬ್ಬದ ವಿಚಾರವಾಗಿ ಆಗಮಿಸುತ್ತಿದ್ದ ಸಂದರ್ಭದಲ್ಲಿ ಬೆಂಗಳೂರಿನಿಂದ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದಾಗ ಹಿಂಬದಿಯಿಂದ ಯಾವುದೋ ಅನಾಮಧೇಯ ವಾಹನ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ ಮಂಜುನಾಥ್ ಗೆ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲಿ ಸಾವಿಗೀಡಾಗಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಅನಿಲ್ ಹಾಗೂ ಪಿಎಸ್ಐ ಚೇತನ್ ಗೌಡ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.