ಕೊರಟಗೆರೆ:-ತಾಲೂಕಿನ ದುಡ್ಡನಹಳ್ಳಿಯ ಸರ್ಕಾರಿ ಪ್ರೌಢಶಾಲೆ ವತಿಯಿಂದ ಕೆ.ಜಿ.ಬೇವಿನಹಳ್ಳಿಯ ಅರಳಿಕಟ್ಟೆಯ ಮೇಲೆ ಸಾರ್ವಜನಿಕರು ಮತ್ತು ಪೋಷಕರೊಂದಿಗೆ ಶೈಕ್ಷಣಿಕ ಚರ್ಚೆ ಮತ್ತು ಅರಿವು ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯ ಹೊಸಕೆರೆ ರಿಜ್ವಾನ್ ಬಾಷಾ ಮಾತನಾಡುತ್ತಾ " ಪ್ರಸ್ತುತ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳಿಗಾಗಿ ಸರ್ಕಾರ ಒದಗಿಸುತ್ತಿರುವ ಸೌಲಭ್ಯಗಳು ಮತ್ತು ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಇಲಾಖೆ ರೂಪಿಸುತ್ತಿರುವ ಹೊಸ ಹೊಸ ಯೋಜನೆಗಳು,ಶಾಲಾ ವ್ಯವಸ್ಥೆಯಲ್ಲಿ ಹಮ್ಮಿಕೊಳ್ಳುವ ಹಲವಾರು ಕಾರ್ಯಕ್ರಮಗಳ ಬಗ್ಗೆ,ಮುಖ್ಯವಾಗಿ ಪೋಷಕರು ತಮ್ಮ ಮಕ್ಕಳಿಗೆ ಮನೆಗಳಲ್ಲಿ ಓದುವ ವಾತಾವರಣವನ್ನು ಕಲ್ಪಿಸಿಕೊಟ್ಟು ಶಾಲೆ ಮತ್ತು ಶಿಕ್ಷಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದುಕೊಂಡು ಮಕ್ಕಳ ಶೈಕ್ಷಣಿಕ ಪ್ರಗತಿಯನ್ನು ಕಾಲಕಾಲಕ್ಕೆ ಪರಿಶೀಲಿಸಿ ಮಕ್ಕಳು ನಿತ್ಯ ಶಾಲೆಗೆ ಹಾಜರಾಗುವಂತೆ ಮಾಡುವ ಉದ್ದೇಶದಿಂದ ಈ ಅರಳಿಕಟ್ಟೆ ಶೈಕ್ಷಣಿಕ ಚರ್ಚೆಯನ್ನು ನಾವಿಂದು ಹುಟ್ಟು ಹಾಕಿದ್ದೇವೆ.
ಬೆಳಗಾಗೆದ್ದು ಅರಳಿಕಟ್ಟೆಯ ಮೇಲೆ ಗಂಟೆಗಟ್ಟಲೆ ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಚರ್ಚೆ ಮಾಡುವ ಬದಲು ಸಾರ್ವಜನಿಕರು ತಮ್ಮ ಊರಿನ ಶಾಲೆಯ ಸ್ಥಿತಿಗತಿಗಳು, ಅಲ್ಲಿ ನಡೆಯುವ ಪಾಠಬೋಧನೆ, ಮಕ್ಕಳ ಕಲಿಕಾ ಚಟುವಟಿಕೆಗಳು, ಶಾಲೆ ಬಿಟ್ಟ ಮಕ್ಕಳ ಪೋಷಕರಿಗೆ ಮನವೊಲಿಸುವ, ದುಡಿಮೆಗೆ ಮಕ್ಕಳನ್ನು ಬಳಸಿಕೊಳ್ಳದೆ ಶಾಲೆಯಲ್ಲಿ ಕಲಿಯಲು ಪ್ರೋತ್ಸಾಹಿಸುವ, ಬಾಲ್ಯವಿವಾಹದಂಥ ಅನಿಷ್ಠ ಪದ್ದತಿಯನ್ನು ನಿರ್ಮೂಲನೆ ಮಾಡುವಲ್ಲಿ ಸಹಕರಿಸುವ, ಮದ್ಯಪಾನದಿಂದ ದೂರ ಉಳಿಯುವ ವಿಷಯಗಳನ್ನ ಚರ್ಚೆ ಮಾಡುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು.
ತಾಯಂದಿರು ಮನೆಯಲ್ಲಿ ತಮ್ಮ ಮಕ್ಕಳಿಗೆ ಅಕ್ಕರೆಯಿಂದ ಕಂಡು, ಪ್ರೀತಿಯಿಂದ ಓದಿನ ಕಡೆಗೆ ತೊಡಗಿಸಲು ಅಡ್ಡಿಯೇನಿಲ್ಲ. ಒಬ್ಬ ವಿದ್ಯಾರ್ಥಿ ಸುಶಿಕ್ಷಿತನಾಗಿ, ಸಂಸ್ಕಾರವಂತನಾದರೆ ಆತನ/ಆಕೆಯ ವ್ಯಕ್ತಿತ್ವದಿಂದ ಒಂದು ಮನೆ ನಂದಾದೀಪವಾಗುತ್ತದೆ. ಒಂದು ಮನೆ ಆದರ್ಶ ಕುಟುಂಬವಾದರೆ ಒಂದು ಗ್ರಾಮ ಮಾದರಿಯಾಗುತ್ತದೆ ಹಾಗೂ ಗ್ರಾಮದಿಂದ ತಾಲ್ಲೂಕು,ಜಿಲ್ಲೆ,ರಾಜ್ಯ ರಾಷ್ಟ್ರದ ಅಬ್ಯುದಯವಾಗುತ್ತದೆ ಆದರೆ ಪೋಷಕರಿಗೆ ಇಚ್ಛಾಶಕ್ತಿ ಇರಬೇಕು. ತನ್ನ ಮಕ್ಕಳು ಒಳ್ಳೆಯ ವಿದ್ಯಾಭ್ಯಾಸ ಪಡೆದು ಮುಂದೊಂದು ದಿನ ಈ ಸಮಾಜಕ್ಕೆ ಆದರ್ಶ ವ್ಯಕ್ತಿಯಾದರೆ ಹೇಗಿರುತ್ತೆ ಎಂದು ಅನೇಕ ಉದಾಹರಣೆಗಳೊಂದಿಗೆ ಶೈಕ್ಷಣಿಕ ಅರಿವು ಮೂಡಿಸಿದರು.
ಈ ಸಂದರ್ಬದಲ್ಲಿ ತುಮಕೂರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ.ನವೀನ್, ಶಿಕ್ಷಣ ಸಂಯೋಜಕರಾದ .ಗಂಗಾಧರ್. ಗಂಗಮ್ಮ, ಹಿರಿಯ ಪ್ರಾಥಮಿಕ ಪಾಠಶಾಲೆಯ ಮು.ಶಿ.ಶ್ರೀರಂಗಯ್ಯ, ಶಿಕ್ಷಕರಾದ ಅಶ್ವತ್ಥನಾರಾಯಣ, ಚಿಕ್ಕಪ್ಪಯ್ಯ, ಕೃಷ್ಣಪ್ಪ, ಅಶೋಕ್‍ಪೂಜಾರ್, ದುಡ್ಡನಹಳ್ಳಿ ಗ್ರಾಮದ ಮುಖಂಡರಾದ ರಂಗರಾಜಣ್ಣ, ಎಸ್.ಡಿ.ಎಂ.ಸಿ. ಅದ್ಯಕ್ಷರು, ಸದಸ್ಯರು, ಪೋಷಕರು ಹಾಗೂ ಗ್ರಾಮಸ್ಥರು ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.
—————————–-ಶ್ರೀನಿವಾಸ್ ಕೊರಟಗೆರೆ