ಕೊರಟಗೆರೆ :- ಸರ್ಕಾರಿ ಗೋಮಾಳದಲ್ಲಿ ಸುಮಾರು 30 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿದ್ದು, ಜಮೀನು ರಹಿತ ಕಡು ಬಡವರನ್ನ ಒಕ್ಕಲಿಬ್ಬಿಸುವಂತಹ ಹುನ್ನಾರ ತೋಟಗಾರಿಕೆ ಇಲಾಖೆಯಿಂದ ನಡೆಯುತ್ತಿದೆ ಎಂದು ಆರೋಪಿಸಿ ನೂರಾರು ಜನ ರೈತರು ತಾಲೂಕ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.
ಕೊರಟಗೆರೆ ತಾಸಿಲ್ದಾರ್ ಕಚೇರಿ ಮುಂಭಾಗ ಮಂಗಳವಾರ ಹೊಳವನಹಳ್ಳಿ ಹೋಬಳಿಯ ಅಕ್ಕಜಹಳ್ಳಿ ಗ್ರಾಮದ ಸರ್ವೆ ನಂಬರ್ 32 ರಲ್ಲಿ ಸಾಗುವಳಿ ನಡೆಸುತ್ತಿರುವ ನೂರಾರು ಜನ ರೈತರು ತಾಲೂಕ ಕಚೇರಿ ಎದರು ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿ ತಹಸಿಲ್ದಾರ್ ಅವರಿಗೆ ಮನವಿ ಸಲ್ಲಿಸಿದ್ದರು.

ದೊಡ್ಡಸಾಗ್ಗೇರೆ ಮರಿಸ್ವಾಮಿ ತೋಟಗಾರಿಕೆ ಇಲಾಖೆಯ ಕೆಂಪೇಗೌಡ ಎಂಬುವ ವ್ಯಕ್ತಿ ಅಕ್ಕಜಹಳ್ಳಿ ಸರ್ವೆ ನಂಬರ್ 33ರಲ್ಲಿ ಕಳೆದ 30 ವರ್ಷಗಳಿಂದ ಬ್ಯಾಸಾಯ ಮಾಡಿಕೊಂಡು ಬರುತ್ತಿದ್ದ ನೂರಾರು ಜನ ರೈತರಿಗೆ ಅನಾವಶ್ಯಕವಾಗಿ ಕಿರುಕುಳ ಕೊಡುತ್ತಾನೆ, ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಾನೆ ಎಂದು ತಹಶೀಲ್ದಾರ್ ಕಚೇರಿ ಎದುರು ಆರೋಪಗಳ ಸುರಿಮಳೆಗೆರೆದರು.
ಅಕ್ಕಜಹಳ್ಳಿ ಸರ್ವೆ ನಂಬರ್ 33ರಲ್ಲಿ 30 ವರ್ಷಗಳಿಂದ ಬೇಸಾಯ ಮಾಡಿಕೊಂಡು ಬರುತ್ತಿದ್ದು ಬಗರ್ ಹುಕ್ಕುಂ ಅಡಿಯಲ್ಲಿ ಅರ್ಜಿ ಸಲ್ಲಿಸಲಾಗಿ ಟಿಟಿ ಸಹ ಕಟ್ಟಿದ್ದು ಖಾತೆ ಪಹಣಿ ಮಾಡಿಕೊಡಲು ಕಂದಾಯ ಇಲಾಖೆ ಮೀನಾ ಮೇಷ ಎಣಿಸುತ್ತಿದೆ ಎಂದು ರೈತರು ಕಂದಾಯ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ರೈತ ಮುಖಂಡ ಬಸವರಾಜು ಮಾತನಾಡಿ ಜಮೀನು ರಹಿತ ರೈತಾಪಿ ವರ್ಗ ಕೂಲಿನಾಲಿ ಮಾಡಿಕೊಂಡು ಇದೇ ಜಮೀನನ್ನೇ ನಂಬಿ ಬಡ ಕುಟುಂಬದಲ್ಲಿ ಬದುಕುತ್ತಿದ್ದೇವೆ ಲಂಬಾಣಿ ಜನಾಂಗದ ಬಹುತೇಕ ಮಂದಿ ಇದೇ ಜಮೀನಿನಲ್ಲಿ ಬೇಸಾಯ ಮಾಡುತ್ತಿದ್ದೇವೆ, ನಮಗೆ ಅವಕಾಶ ಮಾಡಿಕೊಡಲಿ ತೋಟಗಾರಿಕೆ ಇಲಾಖೆಯವರು ನಮ್ಮನ್ನು ಒಕ್ಕಲೆಬ್ಬಿಸುವಂಥ ಕೆಲಸ ಮಾಡುತ್ತಿದ್ದಾರೆ, ನಾವು ಪ್ರಾಣ ಕಳೆದುಕೊಂಡರು ಚಿಂತೆ ಇಲ್ಲ ನಾವು ಈ ಜಮೀನುಗಳನ್ನು ಬಿಟ್ಟು ಕೊಡುವುದಿಲ್ಲ, ಇನ್ನಷ್ಟು ಉಗ್ರ ಹೋರಾಟ ನಡ್ಸೆ ತೀರುತ್ತೇವೆ ಜಮೀನು ಮಾತ್ರ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದರು.

ಲಕ್ಷ್ಮಮ್ಮ ಮಾತನಾಡಿ ಬಡ ಕುಟುಂಬದಲ್ಲಿರುವ ನಾವು ಮಕ್ಕಳು ಮರಿ ಮೊಮ್ಮಕ್ಕಳನ್ನ ಯಾವುದೇ ಜಮೀನಿಲ್ಲದೆ ಹೆಂಗೆ ಸಾಕುವುದು, ನಮಗೆ ಈ ಜಮೀನು ಏನಾದ್ರೂ ಸರ್ಕಾರ ಕೊಡ್ಲಿಲ್ಲ ಅಂದ್ರೆ ನಾವು ಇದೇ ಜಮೀನಿನಲ್ಲಿ ವಿಷ ಸೇವನೆ ಮಾಡಿ ಮಕ್ಕಳು ಮರಿಗು ವಿಷ ಕೊಟ್ಟು ನಾವು ಇದೇ ಜಾಮೀನಿನಲ್ಲಿ ಸಾಯುತ್ತೇವೆ ತೋಟಗಾರಿಕೆ ಇಲಾಖೆಯವರು ಇಲ್ಲಿಯೇ ಮಣ್ಣು ಮಾಡಲಿ ಎಂದು ದುಃಖ ವ್ಯಕ್ತಪಡಿಸಿದರು.

ನಾಗರಾಜ್ ನಾಯಕ ಮಾತನಾಡಿ ಅವಧಾರನಹಳ್ಳಿ ಗ್ರಾಮದ ಎಸ್‌ಸಿ ಜನಾಂಗಕ್ಕೆ ಸೇರಿದ ಲಂಬಾಣಿ ಜನಾಂಗದವರಾದ ನಾವು ಜಮೀನು ರಹಿತರಾಗಿದ್ದು, ನಮಗೆ ಯಾವುದೇ ಜಮೀನುಗಳಿಲ್ಲ ಕಳೆದ 30 ವರ್ಷಗಳಿಂದ ಇಲ್ಲಿ ಬೇಸಾಯ ಮಾಡಿಕೊಂಡು ಬಂದಿದ್ದೇವೆ ಈಗ ನಮ್ಮನ್ನ ಹೊರ ಹಾಕಿದರೆ ನಾವು ಏನು ಮಾಡುವುದು ದಯಮಾಡಿ ನಮಗೆ ನ್ಯಾಯ ಕೊಡಬೇಕು , ಸಾಗುವಳಿ ಪತ್ರ ಕೊಡಬೇಕು ನಮಗೆ ಖಾತೆ ಪಹಣಿ ಮಾಡಿಕೊಡಬೇಕು ತಾಸಿಲ್ದಾರ್ ನಮಗೆ ಒಂದು ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿ ಮಾಡಿಕೊಂಡರು.
- ಶ್ರೀನಿವಾಸ್ ಟಿ.