ಕೊರಟಗೆರೆ-ತಾಲೂಕಿನಲ್ಲಿ ಜಮೀನುಗಳ ಅಕ್ರಮ ದಾಖಲಾತಿಗಳ ಸೃಷ್ಟಿಸಿ ಮಾರಾಟ ಮಾಡುವ ಜಾಲ ಸಕ್ರೀಯ?

ಕೊರಟಗೆರೆ-ತಾಲೂಕಿನಲ್ಲಿ ಜಮೀನುಗಳ ಅಕ್ರಮ ದಾಖಲಾತಿಗಳ ಸೃಷ್ಟಿಸಿ ಮಾರಾಟ ಮಾಡುವ ಜಾಲವೊಂದು ಸಕ್ರೀಯವಾಗಿದ್ದು ಭೂ ಮಾಲೀಕರ ನಿದ್ರೆ ಗೆಡುವಂತೆ ಮಾಡಿದೆ.

ಪಾಖಂಡಿಗಳು ತೊಗರಿ ಘಟ್ಟ ಸರ್ವೆ ನಂಬರ್ 89 ರ 12 ಎಕರೆ ಜಮೀನೊಂದರ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಮೈಸೂರು ಮೂಲದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರೊಂದು ದಾಖಲಾಗಿ ಆತಂಕವನ್ನು ಸೃಸ್ಟಿಸಿದ್ದು ಭೂ ಮಾಲೀಕರು ತಮ್ಮ ಜಮೀನುಗಳ ದಾಖಲೆಗಳನ್ನು ಪರಿಶೀಲಿಸಿಕೊಳ್ಳಲು ತಾಲೂಕು ಕಚೇರಿಗೆ ದಾಂಗುಡಿ ಇಡುತ್ತಿದ್ದಾರೆ.

ಏನಿದು ಪ್ರಕರಣ..?

ತೊಗರಿ ಘಟ್ಟ ಸರ್ವೆ ನಂಬರ್ 89 ರ 12 ಎಕರೆ ಜಮೀನಿನ ಮಾಲೀಕರುಗಳಾದ ಹರಿಚರಣ್ ಹಾಗೂ ರಾಕೇಶ್ ಎಂಬುವವರು 5 ಕೋಟಿ ಮೌಲ್ಯದ ತಮ್ಮ ಜಮೀನನ್ನು ಜನಾರ್ದನ, ರಾಘವೇಂದ್ರ,ಪಾಲರಾಜು,ಹರ್ಷವರ್ಧನ ಎಂಬುವವರು ಅಕ್ರಮ ದಾಖಲಾತಿಗಳ ಸೃಷ್ಟಿಸಿ ಮೈಸೂರು ಮೂಲದ ಲಿಂಗೇಗೌಡ ಎಂಬುವವರಿಗೆ ಅಗ್ರಿಮೆಂಟ್ ಮಾಡಿಕೊಟ್ಟಿದ್ದಾರೆ.ನಮಗೆ ನ್ಯಾಯ ಕೊಡಿಸಿ ಎಂದು ಕೊರಟಗೆರೆ ಪೋಲೀಸರ ಮೊರೆ ಹೋಗಿದ್ದಾರೆ.

ಖದೀಮರು ಈ ಬೆಲೆಬಾಳುವ ಜಮೀನನ್ನು ಉಳುಮೆ ಮಾಡದೇ ಪಾಳು ಬಿಟ್ಟಿರುವುದನ್ನು ಮನಗಂಡು ನಕಲಿ ವಂಶವೃಕ್ಷ ತಯಾರಿಸಿ ಬೇನಾಮಿ ಮಾಲೀಕರನ್ನು ಸೃಷ್ಟಿಸಿ ಅಕ್ರಮವಾಗಿ ಮಾರಾಟ ಮಾಡಲು ಸಂಚು ರೂಪಿಸಿದ್ದಾರೆ.ಅದರಲ್ಲಿ ಸಫಲರು ಆಗಿರುವ ಅವರು ಜಮೀನಿನ ಅಗ್ರೀಮೆಂಟನ್ನು ಸಹ ಮಾಡಿಕೊಟ್ಟಿದ್ದು ಈ ಹಂತದಲ್ಲಿ ಮಾಲೀಕರಿಗೆ ಮಾಹಿತಿ ದೊರೆತು ಪೋಲೀಸರ ಸಹಾಯವನ್ನು ಯಾಚಿಸಿದ್ದಾರೆ.

ಈ ಹಿಂದೆಯೂ ಇಂತಹದ್ದೇ ಹಲವು ದೂರುಗಳು ಕೇಳಿ ಬಂದಿದ್ದವಾದರೂ ಅವು ರಾಜೀ ಸಂದಾನಗಳ ಮೂಲಕ ಮುಗಿದು ಹೋಗಿದ್ದವು ಎನ್ನಲಾಗುತ್ತಿದ್ದು ಕೊರಟಗೆರೆ ಖಡಕ್ ಪೊಲೀಸರು ಸರಿಯಾದ ತನಿಖೆ ನಡೆಸಿ ದೂರುದಾರ ಭೂ ಮಾಲೀಕರಿಗೆ ನ್ಯಾಯ ಕೊಡಿಸುವುದರ ಜೊತೆಗೆ ಹೀಗೆ ಅಕ್ರಮ ಎಸಗುವ ಕ್ರಿಮಿಗಳಿಗೆ ಸರಿಯಾದ ಪಾಠ ಕಲಿಸುವ ಅವಶ್ಯಕತೆ ಇದೆ.

ಇಲ್ಲವಾದಲ್ಲಿ ಈ ಭೂ ಮಾಫಿಯಾದ ಕೆಟ್ಟ ಹುಳಗಳ ಕೈಗೆ ಸಿಕ್ಕು ಅದೆಷ್ಟು ಮನೆಗಳ ದೀಪ ಆರಲಿದೆಯೋ ದೇವರೇ ಬಲ್ಲ.

—————ಶ್ರೀನಿವಾಸ್ ಕೊರಟಗೆರೆ

Leave a Reply

Your email address will not be published. Required fields are marked *

× How can I help you?