ಕೊರಟಗೆರೆ-ಪಂಚ ಗ್ಯಾರಂಟಿಗಳ ಸಮರ್ಪಕ ನಿಗಾವಣೆ-ಅರ್ಹರಿಗೆ ಯೋಜನೆಗಳ ತಲುಪಿಸಲು ಕ್ರಮ-ಬಿ.ಸಿ.ವೆಂಕಟೇಶ್‍ಮೂರ್ತಿ ಭರವಸೆ

ಕೊರಟಗೆರೆ-ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ತಾಲ್ಲೂಕಿನ ಪ್ರತಿ ಅರ್ಹ ಪಲಾನುಭವಿಗಳಿಗೂ ತಲುಪಿಸುವ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಲಾಗುವುದು ಎಂದು ಕೊರಟಗೆರೆ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ನೂತನ ಅದ್ಯಕ್ಷ ಬಿ.ಸಿ.ವೆಂಕಟೇಶ್‍ಮೂರ್ತಿ ತಿಳಿಸಿದರು.

ಅವರು ಪಟ್ಟಣದ ತಾಲ್ಲೂಕು ಪಂಚಾಯಿತಿಯಲ್ಲಿ ಸಮಿತಿಯ ನೂತನ ಆಡಳಿತ ಕಛೇರಿಯನ್ನು ಪ್ರಾರಂಭಿಸಿ ಮಾತನಾಡಿ, ಸರ್ಕಾರದ ಗೃಹ ಸಚಿವರು ಹಾಗು ಕ್ಷೇತ್ರದ ಶಾಸಕರಾದ ಡಾ.ಜಿ ಪರಮೇಶ್ವರರವರ ಮಾರ್ಗದರ್ಶನದಲ್ಲಿ ಈ ಅನುಷ್ಠಾನ ಸಮಿತಿಯು ಕಾರ್ಯನಿರ್ವಹಿಸಲಿದ್ದು ನನ್ನೊಂದಿಗೆ 15 ಪದಾಧಿಕಾರಿಗಳನ್ನು ಈ ಸಮಿತಿಯಲ್ಲಿ ನೇಮಕ ಮಾಡಿದ್ದು ನಾವೆಲ್ಲರು ಒಟ್ಟುಗೂಡಿ ಯಾವುದೇ ಕುಂದುಕೊರತೆ ಬಾರದಂತೆ ನಿಷ್ಟೆಯಿಂದ ಕೆಲಸ ಮಾಡುತ್ತೇವೆ ಎಂದರು.

ತಹಶೀಲ್ದಾರ್ ಮಂಜುನಾಥ್ ಮಾತನಾಡಿ, ಸರ್ಕಾರವು ಜಾರಿಗೊಳಿಸಿರುವ 5 ಗ್ಯಾರಂಟಿಗಳನ್ನು ಅನುಷ್ಠಾನ ಮಾಡಲು ವೆಂಕಟೇಶ್‍ಮೂರ್ತಿ ರವರ ಅದ್ಯಕ್ಷತೆಯಲ್ಲಿ 15 ಉಪಾದ್ಯಕ್ಷರ ಸಮಿತಿಯನ್ನು ಸರ್ಕಾರವು ರಚನೆ ಮಾಡಿದ್ದು ಈ ಸಮಿತಿಗೆ ತಾಲ್ಲೂಕು ಆಡಳಿತ ಸೇರಿದಂತೆ ವಿವಿದ ಇಲಾಖೆಗಳು ಸಹಕಾರ ನೀಡಲಿದ್ದು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಹ ಈ ಯೋಜನೆಯ ಫಲವನ್ನು ತಲುಪಿಸುವ ಕೆಲಸ ಮಾಡಲಾಗುವುದು ಎಂದರು.

ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಅರೆಕೆರೆ ಶಂಕರ್ ಮಾತನಾಡಿ, ಗೃಹಸಚಿವರಾದ ಡಾ.ಜಿ ಪರಮೇಶ್ವರ ನೇತೃತ್ವದಲ್ಲಿ ಈ ಕಮಿಟಿಯನ್ನು ರಚನೆ ಮಾಡಿದ್ದು ಸಮಾಜದ ಬಡ ಮತ್ತು ದುರ್ಬಲ ವರ್ಗದವರಿಗೆ ಈ ಯೋಜನೆಯನ್ನು ತಲುಪಿಸುವ ಕಾರ್ಯವನ್ನು ಸಮಿತಿ ಮಾಡಬೇಕಿದೆ. ವಿಶೇಷವೆಂದರೆ ವಿಧಾನಸಭೆ ಚುನಾವಣೆ ಸಂಧರ್ಭದಲ್ಲಿ ಗ್ಯಾರಂಟಿ ಸಮಿತಿಯ ಅದ್ಯಕ್ಷತೆಯನ್ನು ಗೃಹಸಚಿವರಾದ ಡಾ.ಜಿ. ಪರಮೇಶ್ವರ ರವರು ವಹಿಸಿಕೊಂಡಿದ್ದರು ಇಂದು ಅವರ ಗ್ಯಾರಂಟಿ ಯೋಜನೆಯ ಆಲೋಚನೆ ಇತರ ರಾಜ್ಯಗಳಲ್ಲಿ ಎಲ್ಲಾ ಪಕ್ಷಗಳ ಆಡಳಿತ ಸರ್ಕಾರಗಳು ಜಾರಿಗೆ ತಂದಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗೃಹಸಚಿವರ ವಿಶೇಷ ಅಧಿಕಾರಿ ನಾಗಣ್ಣ, ತಾ.ಪಂ.ಇ.ಓ.ಅಪೂರ್ವ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಅಶ್ವತ್‍ನಾರಾಯಣ ಮುಖಂಡರುಗಳಾದ ಮಹಾಲಿಂಗಯ್ಯ, ಎ.ಡಿ.ಬಲರಾಮಯ್ಯ, ಎಲ್.ರಾಜಣ್ಣ, ಈಶ್ವರಯ್ಯ, ಮಹಿಳಾ ಅದ್ಯಕ್ಷೆ ಜಯಮ್ಮ, ಕವಿತ, ಸಮಿತಿ ಉಪಾದ್ಯಕ್ಷರುಗಳಾದ ಗೋಪಾಲಕೃಷ್ಣ, ರಿಯಾಜ್ ಅಹಮದ್, ಕಿಶೋರ್, ವೀರಣ್ಣಗೌಡ, ರೋಹಿತ್, ಚಂದ್ರಶೇಖರ್, ಶ್ರೀ ವಿದ್ಯಾ, ರಾಘವೇಂದ್ರ, ಪುಟ್ಟಸ್ವಾಮಿ, ಪವನ್‍ಕುಮಾರ್, ಆನಂದ್, ಚಂದ್ರಕಲಾ, ಗುರುಶಾಂತಪ್ಪ, ಶಿವಕುಮಾರ್ ಸೇರಿದಂತೆ ಇತರರು ಹಾಜರಿದ್ದರು.

————-ಶ್ರೀನಿವಾಸ್ ಕೊರಟಗೆರೆ

Leave a Reply

Your email address will not be published. Required fields are marked *

× How can I help you?