ಕೊರಟಗೆರೆ-ಹಣಕ್ಕೆ ಬದಲಾಗಿ ಚಿನ್ನ ಕೊಡುವುದಾಗಿ ನಂಬಿಸಿ ಐದು ಲಕ್ಷ ರೂಪಾಯಿಗಳನ್ನು ದೋಚಿ ಪರಾರಿಯಾಗಿದ್ದ ಖದೀಮರ ಹೆಡೆಮುರಿ ಕಟ್ಟುವಲ್ಲಿ ಕೊರಟಗೆರೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಂಧ್ರ ಮೂಲದ ಗುತ್ತಿ ಗ್ರಾಮದ ಶಾಶಾವಲಿ ಎಂಬ ವ್ಯಕ್ತಿಯೊಬ್ಬನಿಗೆ ಹಕ್ಕಿ-ಪಿಕ್ಕಿ ಕಾಲೋನಿಯ ಯುವರಾಜ್ ನಾಯಕ್ ಅಲಿಯಾಸ್ ಯುವರಾಜ್ ಉರುಫ್ ಗಣೇಶ (22 ವರ್ಷ),ಕನ್ನೇಶ್ ಬಿನ್ ಪಾರಿಸ್, (45 ವರ್ಷ),ರಾಜ ಬಾಬು ಬಿನ್ ನಂಜಯ್,ಸಂದಿಲ್ ಬಿನ್ ರಮೇಶ್ ಎಂಬುವವರು ಮನೆ ಪಾಯ ಅಗೆಯುವ ಕೆಲಸಕ್ಕೆ ಹೋದ ಸಮಯದಲ್ಲಿ ಬಾರಿ ಚಿನ್ನ ಸಿಕ್ಕಿದ್ದು ಎಂಟು ಲಕ್ಷ ನೀಡಿದರೆ ಅದನ್ನೇ ತಮಗೆ ನೀಡುವುದಾಗಿ ನಂಬಿಸಿದ್ದಾರೆ.
ಅವರ ಮಾತಿಗೆ ಮರುಳಾದ ಶಾಶಾವಲಿ ಐದು ಲಕ್ಷ ರೂಪಾಯಿಗಳನ್ನು ಹೊಂದಿಸಿಕೊಂಡು ಆರೋಪಿಗಳು ಕರೆದಂತೆ ಜಿ ನಾಗೇನಹಳ್ಳಿ ಬಳಿಗೆ ಹಣದ ಸಮೇತ ಬಂದಿದ್ದಾರೆ.
ಮೊದಲೇ ಮಾತುಕತೆಯಾದಂತೆ,ನನ್ನ ಬಳಿ ಎಂಟು ಲಕ್ಷ ರೂಪಾಯಿಗಳಿಲ್ಲ ಬದಲಿಗೆ ಐದು ಲಕ್ಷ ರೂಪಾಯಿಗಳಷ್ಟೇ ಇದೆ ಎಂದು ಅಲ್ಲಿಯೇ ಕಾಯುತ್ತಿದ್ದ ಖದೀಮರಿಗೆ ತಿಳಿಸಿದ್ದಾರೆ.
ನೀವ್ಯಾಕೆ ತಲೆಕೆಡಿಸಿಕೊಳ್ತೀರಿ ಎಷ್ಟಿದೆ ಅಷ್ಟು ಕೊಡಿ ಚಿನ್ನ ಕೊಡ್ತೀವಿ ಎಂದು ಹೇಳಿದ ಆರೋಪಿಗಳು ಶಾಶಾವಲಿ ಹಣ ಕೈಗೆ ಇಡುತ್ತಿದ್ದಂತೆಯೇ ಬೈಕ್ ಹತ್ತಿ ಪರಾರಿಯಾಗಿದ್ದಾರೆ.
ಚಿನ್ನವು ಇಲ್ಲ.ಹಣವನ್ನು ಕಳೆದುಕೊಂಡೆನಲ್ಲ ಎಂದು ಚಿಂತಾಕ್ರಾಂತರಾದ ಆತ ಸೀದಾ ಕೊರಟಗೆರೆ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.ಸಿ.ಪಿ.ಐ ಅನಿಲ್ ಹಾಗೂ ಪಿ.ಎಸ್.ಐ ಚೇತನ್ ಗೌಡರವರಿಗೆ ನಡೆದ ಘಟನೆಯ ಮಾಹಿತಿ ನೀಡಿ ದೂರನ್ನು ಕೊಟ್ಟಿದ್ದಾರೆ.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳ ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಆರೋಪಿಗಳಿಂದ ಐದೂವರೆ ಲಕ್ಷ ನಗದು ಕೃತ್ಯಕ್ಕೆ ಬಳಸಿದ್ದ ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ.
ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ ವೆಂಕಟ್ ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ ,ಅಬ್ದುಲ್ ಖಾದರ್ ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪನವರ ಮಾರ್ಗದರ್ಶನದಂತೆ ಕೊರಟಗೆರೆ ಸಿಪಿಐ ಅನಿಲ್ ಹಾಗೂ ಪಿ ಎಸ್ ಐ ಚೇತನ್ ಗೌಡ ತಂಡ ರಂಗರಾಜು ಸಿ,ದೊಡ್ ಲಿಂಗಯ್ಯ ,ಸಿಬ್ಬಂದಿಗಳಾದ ಮೋಹನ್ ಎಂ ಎಲ್ , ರಾಮಚಂದ್ರ, ಗಣೇಶ್, ಪ್ರದೀಪ್ ಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಎಗ್ಗಿಲ್ಲದೆ ನಡೆಯುತ್ತಿದೆ ಮೋಸದ ದಂದೆ
ಹಕ್ಕಿ-ಪಿಕ್ಕಿ ಕಾಲೋನಿಯ ಇಂತಹ ಖದೀಮರುಗಳ ಕಾರಣಕ್ಕೆ ರಾಜ್ಯ ಹಾಗು ಅಂತರರಾಜ್ಯ ಮಟ್ಟದಲ್ಲಿ ಕೊರಟಗೆರೆ ತಾಲೂಕಿನ ಗೌರವ ಹಾಳಾಗುತ್ತಿದೆ.ಇಲ್ಲಿನ ಬಹಳಷ್ಟು ಜನ,ಆಮೆ,ಎರಡು ತಲೆ ಹಾವು,ಚಿನ್ನ ಹೀಗೆ ನಾನಾ ರೀತಿಯಲ್ಲಿ ಬಹಳಷ್ಟು ಜನರಿಗೆ ಮೋಸ ಮಾಡುತ್ತಾ ಬಂದಿದ್ದಾರೆ.
ಹೀಗೆ ಒಂದಷ್ಟು ಪ್ರಕರಣ ಗಳು ಆಚೆಗೆ ಬರುತ್ತವೆಯಾದರು ಬಹಳಷ್ಟು ಪ್ರಕರಣಗಳಲ್ಲಿ ಮೋಸ ಹೋದವರು ವಿವಿಧ ಕಾರಣಗಳಿಗಾಗಿ ದೂರು ನೀಡಲು ಹಿಂದೇಟು ಹಾಕುತ್ತಾರೆ.
ಕೇವಲ ತಮ್ಮ ಮೋಜು ಮಸ್ತಿಗಾಗಿ ಅಮಾಯಕರ ಸುಲಿಗೆ ಮಾಡುವ ಈ ಕಿರಾತಕರ ಚಟುವಟಿಕೆಗಳ ಮೇಲೆ ಪೊಲೀಸರು ನಿರಂತರವಾಗಿ ಹದ್ದಿನಂತೆ ಕಣ್ಣಿಡುವ ಅವಶ್ಯಕತೆಯಿದೆ.ಆಗ ಮಾತ್ರ ಇಂತಹ ಸುಲಿಗೆ ಪ್ರಕರಣಗಳ ತಪ್ಪಿಸಬಹುದು.
—————-ಶ್ರೀನಿವಾಸ್ ಕೊರಟಗೆರೆ