ಕೊರಟಗೆರೆ-ಕಣ್ವ ಸಮೂಹದ ಶಾಲೆಯ ಆಸ್ತಿ ಮುಟ್ಟುಗೋಲು-ಅತಂತ್ರ ಸ್ಥಿತಿಯಲ್ಲಿ 412 ಜನ ಮಕ್ಕಳ ಭವಿಷ್ಯ

ಕೊರಟಗೆರೆ:- ಕಣ್ವಸೌಹಾರ್ದ ಕೋ-ಆಪರೇಟಿವ್ ಕ್ರೆಡಿಟ್ ಲಿಮಿಟೆಡ್ ಹಾಗೂ ಕಣ್ವ ಸಮೂಹ ಸಂಸ್ಥೆಯ ಆರ್ಥಿಕ ಅವ್ಯವಹಾರದಿಂದ ಸರಕಾರ ಜಿ.ನಾಗೇನಹಳ್ಳಿಯ ಕಣ್ವ ಇಂಟರ್ ನ್ಯಾಷನಲ್ ಶಾಲೆಯ ಜಮೀನು, ಕಟ್ಟಡ ಮತ್ತು ನಿವೇಶನ ಮುಟ್ಟುಗೋಲು ಹಾಕಿಕೊಂಡಿದೆ. ಕಣ್ವಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 412 ವಿದ್ಯಾರ್ಥಿಗಳ ಶಿಕ್ಷಣ ಅತಂತ್ರ ಸ್ಥಿತಿಯಲ್ಲಿದ್ದು ಮಕ್ಕಳ ಭವಿಷ್ಯದ ಬಗ್ಗೆ ಆತಂಕ ಎದುರಾಗಿದೆ.

ಕೊರಟಗೆರೆ ತಾಲೂಕು ಕಸಬಾ ಹೋಬಳಿ ಹಂಚಿಹಳ್ಳಿ ಗ್ರಾಪಂ ವ್ಯಾಪ್ತಿಯ ದೊಡ್ಡೇನಹಳ್ಳಿ ಸರ್ವೆ ನಂ.5/4ರಲ್ಲಿ 2ಎಕರೇ 37 ಗುಂಟೆ ಜಮೀನು ಮತ್ತು 0.26 ಗುಂಟೆ ಕಣ್ವ ಇಂಟರ್ ನ್ಯಾಷನಲ್ ಶಾಲೆ ಮತ್ತು ಶಾಲಾ ಕಟ್ಟಡವನ್ನು ಕೆಪಿಐಡಿಎಫ್‌ಇ ಕಾಯ್ದೆಯಡಿ ಸರಕಾರ ಮುಟ್ಟುಗೋಲು ಹಾಕಿಕೊಂಡಿದೆ. ಶಾಲೆಯ ಕಾರ್ಯದರ್ಶಿ ಮನವಿ ಮಾಡಿ ನಿರ್ವಹಣೆಗೆ ಬಿಇಓರನ್ನು ಆಡಳಿತಾಧಿಕಾರಿ ಆಗಿ ನೇಮಿಸಲು ಮಾಡಿದ ಮನವಿಗೂ ಈಗ ಅವಕಾಶ ಇಲ್ಲದಾಗಿದೆ.

ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಯಿಂದ ಪ್ರಸಕ್ತ ಶೈಕ್ಷಣಿಕ ವರ್ಷದ ಅಂತ್ಯದವರೇಗೆ ಶಾಲೆ ಮುಂದುವರೆಸಲು ಸರಕಾರ ಚಿಂತನೆ ನಡೆಸುತ್ತಿದೆ. ಆದರೇ ಶಾಲೆಯ ಐಸಿಎಸ್‌ಸಿ ಮಾನ್ಯತೆ 2025ರ ಮಾರ್ಚ್ 31ಕ್ಕೆ ಮುಕ್ತಾಯವಾಗಿದೆ. ಇದುವರೇಗೆ ಶಾಲೆಯು ಕರ್ನಾಟಕ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಡಿ ಶಾಲೆಯ ಮಾನ್ಯತೆ ಸಹ ನವೀಕರಣ ಮಾಡದಿರುವುದು ಇನ್ನೂ ಅನುಮಾನಕ್ಕೆ ಕಾರಣವಾಗಿದೆ.
ಜಿ.ನಾಗೇನಹಳ್ಳಿಯ ಕಣ್ವಶಾಲೆಯ ಭವಿಷ್ಯದ ಬಗ್ಗೆ ಪೋಷಕರಲ್ಲಿ ಅನಿಶ್ಚಿತತೆ ಮುಂದುವರೆದಿದೆ.

ಸರಕಾರವು ಶೀರ್ಘದಲ್ಲೇ ಪೋಷಕರ ಸಭೆ ಕರೆದು ವಾಸ್ತವಾಂಶ ತಿಳಿಸಬೇಕಿದೆ. ಒಟ್ಟಾರೇಯಾಗಿ ಕಣ್ವ ಸಮೂಹದ ಆರ್ಥಿಕ ಅವ್ಯವಹಾರದ ಸಮಸ್ಯೆಯು ಕಣ್ವಶಾಲೆಯ 412ಜನ ವಿದ್ಯಾರ್ಥಿಗಳ ಶಿಕ್ಷಣದ ಭವಿಷ್ಯಕ್ಕೆ ಸಂಕಷ್ಟ ತಂದಿದೆ. ಸರಕಾರವು ತಕ್ಷಣ ಮಕ್ಕಳ ಶೈಕ್ಷಣಿಕ ಭವಿಷ್ಯವನ್ನು ಕಾಪಾಡಬೇಕಿದೆ ಎಂದು ಪೋಷಕರು ಒತ್ತಾಯ ಮಾಡಿದ್ದಾರೆ.

ಶಿಕ್ಷಣ ಇಲಾಖೆ ಆಯುಕ್ತರ ಆದೇಶ:-

ಕಣ್ವ ಇಂಟರ್‌ನ್ಯಾಷನಲ್ ಶಾಲೆಯು ಐಸಿಎಸ್‌ಸಿ ಪಠ್ಯಕ್ರಮ ಆಧಾರಿತ ಶಾಲೆ. ಕಣ್ವಶಾಲೆಯ ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮತ್ತು ಆಡಳಿತಾಧಿಕಾರಿ ನೇಮಿಸಲು ಸಾಧ್ಯವಿಲ್ಲ. ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಕಣ್ವಶಾಲೆಯ ಮಕ್ಕಳ ಪೋಷಕರ ಸಭೆ ಕರೆದು ವಾಸ್ತವಂಶ ಗಮನಕ್ಕೆ ತರಬೇಕು. ಶಿಕ್ಷಣ ಇಲಾಖೆಯ ನಿಯಮಾನುಸಾರ ಸದರಿ ಶಾಲೆ ಮುಂದುವರೆಸಲು ಅವಕಾಶವಿಲ್ಲ. ಪೋಷಕರು ತಮ್ಮ ಮಕ್ಕಳನ್ನು ಬೇರೆ ಶಾಲೆಗೆ ದಾಖಲಿಸುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಮಧುಗಿರಿ ಡಿಡಿಪಿಐಗೆ2025ರ ಮಾ17ರಂದೇ ಶಿಕ್ಷಣ ಇಲಾಖೆಯ ನಿರ್ದೇಶಕರು ಆದೇಶ ಮಾಡಿದ್ದರು.

ಮಕ್ಕಳಿಗೆ ಉಚಿತ ಶಿಕ್ಷಣದ ಆಮೀಷ:-
ಕಣ್ವ ಇಂಟರ್ ನ್ಯಾಷನಲ್ ಶಾಲೆಯ ಆಡಳಿತ ಮಂಡಳಿಯು ಮಕ್ಕಳ ಪೋಷಕರಿಗೆ ಸಮಸ್ಯೆಯ ವಿಷಯ ತಿಳಿಸದೇ 2025-26ರ ಶೈಕ್ಷಣಿಕ ವರ್ಷಕ್ಕೆ ಶುಲ್ಕವನ್ನು ಕಟ್ಟಿಸಿಕೊಳ್ಳದೇ ಉಚಿತ ಭೋದನೆಯ ವದಂತಿ ಹರಿದಾಡಿವೆ. ಶಾಲೆಯಿಂದ ಮಕ್ಕಳಿಗೆ ಬರುವ ವಾಹನಗಳ ಶುಲ್ಕ ಈ ವರ್ಷ ಉಚಿತ ಎಂಬ ಮಾತು ಕೇಳಿಬಂದಿವೆ. ಇದು ಪೋಷಕರ ಆತಂಕವನ್ನು ಮತ್ತಷ್ಟು ಹೆಚ್ಚಿಸಿದ್ದು ಶಿಕ್ಷಣ ಇಲಾಖೆ ತುರ್ತು ಕ್ರಮ ಕೈಗೊಳ್ಳಬೇಕಿದೆ.

412ಜನ ಮಕ್ಕಳ ಭವಿಷ್ಯವೇ ಅತಂತ್ರ:-
ಕಣ್ವ ಸಮೂಹದ ಜಿ.ನಾಗೇನಹಳ್ಳಿ ಶ್ರೀಕಣ್ವ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ 2024-25ನೇ ಸಾಲಿನ ಅನ್ವಯ ನರ್ಸರಿಯಿಂದ 10ನೇ ತರಗತಿ ವರೇಗೆ 417ಜನ ಮಕ್ಕಳು ಐಸಿಎಸ್‌ಸಿ ಪಠ್ಯಕ್ರಮ ಅನುಸಾರ ವ್ಯಾಸಂಗ ಮಾಡುತ್ತಿದ್ದಾರೆ. ಮುಖ್ಯಶಿಕ್ಷಕನ ಹುದ್ದೆಯು ಈಗ ಖಾಲಿಯಿದ್ದು 21ಜನ ಶಿಕ್ಷಕರಿದ್ದಾರೆ. ಶಾಲೆಯ ಜಮೀನು ಮತ್ತು ಕಟ್ಟಡವೇ ಸರಕಾರಕ್ಕೆ ಮುಟ್ಟುಗೋಲು ಆದ ಮೇಲೆ 2025-26ರ ಶೈಕ್ಷಣಿಕ ವರ್ಷದಲ್ಲಿ ಮತ್ತೇ ಜಮೀನು ಸಮಸ್ಯೆ ಎದುರಾದರೇ ಮಕ್ಕಳ ಶಿಕ್ಷಣದ ಪಾಡೇನು ಎಂಬುದೇ ಯಕ್ಷಪ್ರಶ್ನೆ.

ಜಿ.ನಾಗೇನಹಳ್ಳಿಯ ಕಣ್ವ ಇಂಟರ್ ನ್ಯಾಷನಲ್ ಸ್ಕೂಲ್ ಮುಚ್ಚಿಸಲು ಶಿಕ್ಷಣ ಇಲಾಖೆ ಆಯುಕ್ತರಿಂದ ನಿರ್ದೇಶನವಿದೆ. ಕಣ್ವಶಾಲೆಯಲ್ಲಿ ಏ.3ರಂದು ಪೋಷಕರ ಸಭೆ ಕರೆಯಲು ಬಿಇಓ ಶಾಲೆಯ ಕಾರ್ಯದರ್ಶಿಗೆ ಮಾ.28ರಂದು ನೊಟೀಸ್ ನೀಡಿದ್ದರು. ಸಭೆ ಕರೆಯಲು ಮಾನ್ಯ ಉಚ್ಚ ನ್ಯಾಯಾಲಯ ತಡೆ ನೀಡಿದೆ ಎಂದು ಮಧುಗಿರಿ ಡಿಡಿಪಿಐ ಗಿರೀಜಾ.ಬಿ.ಹೆಚ್. ತಿಳಿಸಿದ್ದಾರೆ.

ಸರಕಾರದ ಜೊತೆ ಕಣ್ವಶಾಲೆ 3೦ವರ್ಷ ಗುತ್ತಿಗೆ ಒಪ್ಪಂದ ಮಾಡಿಕೊಂಡಿದೆ:-
ಕಣ್ವಶಾಲೆ ಇರುವ ಜಮೀನು ಸರಕಾರದ ಆಸ್ತಿ. ಈಗ ಕಣ್ವಶಾಲೆ ಮಾತ್ರ ನಮ್ಮದು ಅಷ್ಟೆ. ಶಾಲೆಯ ಜಮೀನು ಮತ್ತು ಕಟ್ಟಡದ ಸಮಸ್ಯೆ ಇರೋದು ಸತ್ಯ. ಸರಕಾರದ ಜೊತೆ ಒಪ್ಪಂದ ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಕಾಲಾವಕಾಶ ನೀಡಿದೆ ಎಂದು ಕಣ್ವ ಎಜುಕೇಷನ್ ಟ್ರಸ್ಟ್. ಕಾರ್ಯದರ್ಶಿ. ರಜತ್.ಪಿ.ಗೌಡ ತಿಳಿಸಿದ್ದಾರೆ.

  • ನರಸಿಂಹಯ್ಯ ಕೋಳಾಲ

Leave a Reply

Your email address will not be published. Required fields are marked *

× How can I help you?