ಕೊರಟಗೆರೆ:ಬಸವಣ್ಣನವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗಲಿದೆ ಎಂದು ತಾಲೂಕಿನ ಎಲೆರಾಂಪುರದ ಕುಂಚಿಟಿಗ ಮಠದ ಪೀಠಾಧ್ಯಕ್ಷರಾದ ಶ್ರೀ ಹನುಮಂತನಾಥ ಸ್ವಾಮೀಜಿ ತಿಳಿಸಿದರು.
ಬೆಂಗಳೂರು ಗ್ರಾಮಾಂತರದ ನೆಲಮಂಗಲದಲ್ಲಿ ಬುಧವಾರ ರಾತ್ರಿ ಕರ್ನಾಟಕ ರಣಧೀರರ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಬಸವಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಆಶೀರ್ವಚನ ನೀಡಿದರು.
ಬಸವಣ್ಣನವರು ಎಲ್ಲಾ ಸಮಾಜಕ್ಕೂ ಶಕ್ತಿ ತುಂಬುವ ಕೆಲಸ ಮಾಡಿದ್ದು ಪ್ರತಿಯೊಬ್ಬರು ಸಂಸ್ಕಾರವಂತರಾಗಬೇಕು.ಅವರ ಕಾಯಕವೇ ಕೈಲಾಸ ಎಂಬ ಮಾತನ್ನು ಸಕಲರೂ ಪಾಲಿಸಿದ್ದೇ ಆದಲ್ಲಿ ಬಡತನವನ್ನೇ ಸಮಾಜದಿಂದ ಕಿತ್ತೊಗೆ ಯಬಹುದು.ಅವರ ಪ್ರತಿಯೊಂದು ವಚನಗಳು ಸಮಾಜವನ್ನು ಬಡಿದೆಬ್ಬಿಸುವ,ಭ್ರಾಂತಿಗಳಿಂದ ಹೊರತರುವ ಕೆಲಸವನ್ನು ಮಾಡುತ್ತವೆ.ಇಂದಿನ ಯುವಪೀಳಿಗೆ ಅವರ ವಚನಗಳನ್ನು ಓದಿ ತಿಳಿದು ಅವುಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದೆ ಆದಲ್ಲಿ ಅವರ ಭವಿಷ್ಯ ಉಜ್ವಲವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿಸಿಕೊಡಬೇಕು.ಮಕ್ಕಳು ಸಂಸ್ಕಾರವಂತರಾದರೆ ಅವರಿಗೆ ಯಾವುದೇ ಆಸ್ತಿ ಬೇಕಾಗುವುದಿಲ್ಲ.ಪೋಷಕರು ಸಂಸ್ಕಾರವಂತರಾದಾಗ ಮಾತ್ರ ಮಕ್ಕಳು ಸಂಸ್ಕಾರವಂತರಾಗುತ್ತಾರೆ. ಅದೇ ರೀತಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದಾಗ ಮಾತ್ರ ಉತ್ತಮ ಸಮಾಜ ನಿರ್ಮಿಸಬಹುದು ಎಂದು ಸಲಹೆ ನೀಡಿದರು.
ಪ್ರಸ್ತುತ ದಿನಮಾನದಲ್ಲಿ ಪ್ರಶಸ್ತಿಗಳು ಮಾರಾಟದ ವಸ್ತುಗಳಾಗಿವೆ ಎಂಬ ಆರೋಪಗಳಿವೆ.ಪ್ರಶಸ್ತಿಗಳಿಗೆ ತನ್ನದೇ ಆದ ಗೌರವ, ಮೌಲ್ಯಗಳಿವೆ.ಹಾಗಾಗಿ ಪ್ರಶಸ್ತಿಗಳು ಮಾರಾಟದ ಸರಕಾಗದೆ ಪ್ರಭುದ್ದರ,ಪ್ರಜ್ಞಾವಂತರ,ಸಮಾಜೋದ್ಧಾರಕರ ಪಾಲಾಗಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕಿನ ಸಿದ್ದರಬೆಟ್ಟದ ಬಾಳೆಹೊನ್ನೂರು ಖಾಸಾ ಶಾಖಾ ಮಠದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ,ತುಮಕೂರು ವಿಶ್ವವಿದ್ಯಾನಿಲಯದ ಕುಲ ಸಚಿವರಾದ ನಹೀದಾ ಜಮ್ ಜಮ್ ಸೇರಿದಂತೆ ಇತರರು ಇದ್ದರು.
———–ಶ್ರೀನಿವಾಸ್ ಕೊರಟಗೆರೆ