ಕೊರಟಗೆರೆ:-ಇದೊಂತರಹ ದೇವರು ಕೊಟ್ಟರು ಪೂಜಾರಿ ಕೊಡಲಾರ ಎನ್ನುವಂಥ ಕಥೆ.ತಾಲೂಕಿನಾದ್ಯಂತ 188 ಶುದ್ಧ ನೀರಿನ ಘಟಕಗಳನ್ನು ಸರಕಾರ ಕೋಟ್ಯಂತರ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದೂ ಅವುಗಳಲ್ಲಿ ಸರಿಸುಮಾರು 60 ಕ್ಕೂ ಹೆಚ್ಚು ಘಟಕಗಳು ಕಾರ್ಯನಿರ್ವಹಿಸದೇ ಅನುಪಯುಕ್ತವಾಗಿವೆ.
ಈ 188 ಶುದ್ದ ಕುಡಿಯುವ ನೀರಿನ ಘಟಕಗಳಲ್ಲಿ ,10 ಕೊರಟಗೆರೆ ಪಟ್ಟಣಪಂಚಾಯತಿ ಸುಪರ್ದಿನಲ್ಲಿ ,118 ಜಿಲ್ಲಾ ಪಂಚಾಯಿತಿ ಅಧೀನದಲ್ಲಿ ಗ್ರಾಮ ಪಂಚಾಯತಿ ಸಹಯೋಗದೊಂದಿಗೆ ನಿರ್ವಹಣೆಯಲ್ಲಿದ್ದರೆ, 32 ಗ್ರಾಮ ಪಂಚಾಯಿತಿಗಳ ಸಂಪೂರ್ಣ ಅಧೀನದಲ್ಲಿವೆ.
6 ಘಟಕಗಳು ಹಾಲು ಉತ್ಪಾದಕ ಸಹಕಾರ ಸಂಘಗಳ ಅದೀನದಲ್ಲಿದ್ದರೆ,ಉಳಿದಂತೆ 22 ಕೆ ಆರ್ ಐ ಡಿ ಲ್ಯಾಂಡ್ ಆರ್ಮಿ ನಿಗಾವಣೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ.
ಸದ್ಯ ಈ 188 ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಕನಿಷ್ಠ 60ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರಿಗಾಗಿ ಅಲೆಯುವಂಥ ಪರಿಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರ ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಫ್ಲೋರೈಡ್ ಹಾಗೂ ಕಬ್ಬಿಣಂಶದ ನೀರಿನ ಸೇವೆನೆ ಮುಕ್ತಗೊಳಿಸುವ ಉದ್ದೇಶದಿಂದ ಕೋಟ್ಯಾಂತರ ರೂಪಾಯಿ ಅನುದಾನದಲ್ಲಿ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಮಹತ್ವಕಾಂಕ್ಷಿಯೊಂದಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಪ್ರಾರಂಭಿಸಿದೆ.
ಆದರೆ ಅಧಿಕಾರಿಗಳ ಹಾಗೂ ಸಂಬಂಧಪಟ್ಟ ಏಜೆನ್ಸಿಗಳ ನಿರ್ಲಕ್ಷದಿಂದ ಶುದ್ಧ ಕುಡಿಯುವ ನೀರಿನ ಘಟಕಗಳು ವರ್ಷಾನುಗಟ್ಟಲೆ ದುರಸ್ತಿಯಲ್ಲಿರುವ ಮೂಲಕ ಕೋಟ್ಯಾಂತರ ರೂಪಾಯಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿರುವುದಲ್ಲದೆ ಸಾರ್ವಜನಿಕರು ಶುದ್ಧ ಕುಡಿಯುವ ನೀರಿಗಾಗಿ ಕಿಲೋಮೀಟರ್ ಗಟ್ಟಲೆ ಅಲೆಯುವಂತ ಪರಿಸ್ಥಿತಿ ನಿರ್ಮಾಣಗೊಂಡಿರುವುದು ಮಾತ್ರ ದುರದೃಷ್ಟಕರ.
ಆದಷ್ಟು ಶೀಘ್ರ ಸಂಬಂಧಪಟ್ಟವರು ಹಾಗು ಶಾಸಕರು ಇದೊಂದು ಸಮಸ್ಯೆಯನ್ನು ಬಗೆಹರಿಸಿ ಜನಸಾಮಾನ್ಯರ ದಾಹ ತೀರಿಸಲು ಮುಂದಾಗುತ್ತಾರೆಯೇ? ಕಾದುನೋಡಬೇಕಾಗಿದೆ.
—————–ಶ್ರೀನಿವಾಸ್ ಕೊರಟಗೆರೆ