ಕೊರಟಗೆರೆ – 18ನೇ ಶತಮಾನದ ಆದಿ ಭಾಗದಲ್ಲಿ ಕೊರಟಗೆರೆ ಪ್ರಾಂತ್ಯಕ್ಕೆ ದೊರೆಯಾಗಿದ್ದ ಕುರಂಗರಾಜು ದಕ್ಷಿಣ ಭಾರತದ ಮೊದಲ ದಲಿತ ಜನಾಂಗದ ನಾಯಕ ಹಾಗೂ ಸ್ಥಳೀಯ ಸಾಂಸ್ಕೃತಿಕ ಲೋಕದ ಪ್ರತಿನಿಧಿ ಎಂದು ಕವಿ ಡಾ,ಶಿವಣ್ಣ ತಿಮ್ಲಾಪುರ ಅಭಿಪ್ರಾಯಪಟ್ಟರು.
ಅವರು ಕೊರಟಗೆರೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ವಿಭಾಗ ಹಾಗೂ ಸಾಂಸ್ಕೃತಿಕ ಸಮಿತಿಯ ಸಹಯೋಗ ದಲ್ಲಿ ಆಯೋಜಿಸಿದ್ದ ಚಕೋರ ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡುತ್ತಾ ದಲಿತ ಜನಾಂಗದ ನಾಯಕ ಕುರಂಗರಾಜರ ಆಳ್ವಿಕೆ ಬಗ್ಗೆ ಸವಿಸ್ತಾರವಾಗಿ ಬಣ್ಣಿಸಿದ್ದರು.
ಕೊರಟಗೆರೆ ಪ್ರಾಂತ್ಯಕ್ಕೆ ದೊರೆಯಾಗಿದ್ದ ಕುರಂಗರಾಜನ ಬಗೆಗಿನ ವಿಶೇಷ ಮಾಹಿತಿಯನ್ನ ಸಭೆಯಲ್ಲಿ ಕೂಲಂಕುಶವಾಗಿ ಮನಮುಟ್ಟುವಂತೆ ವಿವರಿಸಿದ್ದ ಜೊತೆಗೆ ಕೊರಟಗೆರೆ ತಾಲೂಕಿನ ಕುರಂಕೋಟೆಯಲ್ಲಿ ಕೋಟೆ ನಿರ್ಮಿಸಿ ದೇವಾಲಯಗಳನ್ನು ಕಟ್ಟಿದ್ದು, ಚರ್ಮದ ನಾಣ್ಯಗಳನ್ನು ಬಳಕೆಗೆ ತಂದಿದ್ದು, ಮುಂತಾದ ಸಮಾಜಿಕ ಕಾರ್ಯಗಳನ್ನು ನಿರ್ವಹಿಸುವ ಮೂಲಕ ಜನಸಾಮಾನ್ಯರ ದೊರೆಯಾಗಿದ್ದ ಎಂಬುದಾಗಿ ಕುರಂಗರಾಜರ ಪರಿಚಯವನ್ನು ವಿದ್ಯಾರ್ಥಿಗಳಿಗೆ ಆತನ ಚರಿತ್ರೆಯನ್ನು ಬಹಳ ಸೊಗಸಾಗಿ ವಿವರಿಸಿದ್ದರು.
ಕುರಂಗರಾಜನನ್ನು ಕುರಿತು ಕುರಂಗರಾಜನ ವೈಭವ ಎಂಬ ಕಾದಂಬರಿಯನ್ನು ರಚಿಸಿದ ಮತ್ತು ಅದನ್ನು ನಾಟಕ ರೂಪಕ್ಕೆ ಆಲವಡಿಸಿ ಜನಪ್ರಿಯಗೊಳಿಸಿದ ಡಾ.ಓ.ನಾಗರಾಜ ಕುರಂಗರಾಜುರು ಇಡೀ ಕೊರಟಗೆರೆ ತಳ ಸಮುದಾಯಕ್ಕೆ ಮನೋಬಲವನ್ನು ತುಂಬಿದ ದಲಿತ ರಾಜರಲ್ಲಿ ಅತಿ ಶ್ರೇಷ್ಠವಾದವನು ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಸುಮಾ ಸತೀಶ್ ಮಾತನಾಡಿ ಸ್ಥಳೀಯ ಇತಿಹಾಸದ ಪರಿಚಯ ವಿದ್ಯಾರ್ಥಿಗಳಿಗೆ ಅತ್ಯಗತ್ಯವಾಗಿ ಆಗಬೇಕಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಈರಪ್ಪ ನಾಯಕ ವಹಿಸಿ ಕಾಲೇಜಿನ ಪ್ರತಿ ವಿದ್ಯಾರ್ಥಿಗಳೀಗೆ ಸ್ಥಳೀಯ ಇತಿಹಾಸ ಪರಿಚಯ ಆಗಬೇಕಿದ್ದು ಈ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ವೇದಿಕೆಯಲ್ಲಿ ಚಕೋರ ಸಂಚಾಲಕ ಡಾ.ನಾಗಭೂಷಣ್ ಬಗ್ಗನಡು, ಡಾ.ಓ ನಾಗರಾಜು, ಮಲ್ಲಿಕಾಬಸವರಾಜು, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ,ಕೆ.ಎಸ್.ಚೈತಾಲಿ, ರಂಗನಾಥಮೂರ್ತಿ, ಮುನಿರಾಜು, ಸಾಂಸ್ಕೃತಿಕ ಸಮಿತಿಯ ಸಂಚಾಲಕರಾದ ಶಿವರಾಮಯ್ಯ, ಡಾ.ಲೋಕೇಶ್ ನಾಯಕ್, ಡಾ.ರೇಣುಕಾ, ಡಾ.ಸಿದ್ದಗಂಗಯ್ಯ, ಡಾ.ರಮೇಶ್, ಕರಿಯಪ್ಪ, ಸೇರಿದಂತೆ ಕಾಲೇಜಿನ ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
– ಶ್ರೀನಿವಾಸ್ ಕೊರಟಗೆರೆ