ಕೊರಟಗೆರೆ-ಯಶಸ್ಸು ಗಳಿಸುವುದು ಮಕ್ಕಳಲ್ಲಿ ಒಂದು ಒಳ್ಳೆಯ ಹವ್ಯಾಸವಾಗಿ ಬೆಳೆಯಬೇಕು ಎಂದು ಭಾರತ ಕಾಫೀ ಬೋರ್ಡ್ನ ಸಿ.ಇ.ಓ. ಮತ್ತು ಕಾರ್ಯದರ್ಶಿ ಐ.ಎ.ಎಸ್. ಅಧಿಕಾರಿ ಡಾ.ಕೆ.ಜಿ.ಜಗದೀಶ್ ತಿಳಿಸಿದರು.
ಅವರು ಕೊರಟಗೆರೆ ಪಟ್ಟಣದ ಕನ್ನಿಕಾಮಹಲ್ನಲ್ಲಿ ತಾಲ್ಲೂಕು ವಾಸವಿ ಯುವಜನ ಸಂಘದ ವತಿಯಿಂದ ನಡೆದ 2023-24 ನೇ ಸಾಲಿನ ತಾಲ್ಲೂಕು ಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯೆಗೆ ಯಾವುದೇ ಜಾತಿ, ಧರ್ಮ, ಬಡತನ, ಸಿರಿತನ, ನಗರ, ಗ್ರಾಮೀಣಗಳ ಬಗ್ಗೆ ಬೇದವಿಲ್ಲ.ವಿದ್ಯೆಯ ಸಾದನೆಗೆ ಸಾಧಿಸುವ ಗುರಿ ಒಂದೇ ಮುಖ್ಯವಾಗಿದೆ.ದೊಡ್ಡ ಸಾಧನೆಯ ಘಟ್ಟ ತಲುಪುವ ವಿದ್ಯಾರ್ಥಿಗಳು ಜೀವನದಲ್ಲಿ ಶ್ರದ್ದೆ, ಸಮಯ ಪರಿಪಾಲನೆ, ನಿರ್ದಿಷ್ಟ ಯೋಜನೆ, ತಲುಪುವ ಗುರಿಯ ಬಗ್ಗೆ ಸ್ಪಷ್ಟತೆ ಮತ್ತು ಆಸಕ್ತಿ, ಯಾವುದೇ ವಿಷಯವನ್ನು ಓದುವ ಮತ್ತು ಗ್ರಹಿಸುವ ಪರಿಪಾಲನೆ ಬೆಳಸಿಕೊಳ್ಳಬೇಕು. ಇದರೊಂದಿಗೆ ಸಮಾಜಕ್ಕೆ ಒಳಿತನ್ನು ಮಾಡುವ ಗುಣ ಸಹಾಯ ಮನೋಭಾವ ನಿಮ್ಮಗಳ ಭವಿಷ್ಯಕ್ಕೆ ತುಂಬಾ ಸಹಕಾರಿಯಾಗುತ್ತದೆ ಎಂದರು.
ಕರ್ನಾಟಕದ ವಿದ್ಯಾರ್ಥಿಗಳು ದೇಶದಲ್ಲೇ ಬುದ್ದಿವಂತರವರಾಗಿದ್ದಾರೆ. ಆದರೆ ಅವರು ಇರವಲ್ಲಿಯೇ ನೆಲೆ ಕಂಡುಕೊಳ್ಳವ ಮನೋಭಾವ ಹೊಂದಿದ್ದಾರೆ.ಐ.ಎ.ಎಸ್. ಸೇರಿದಂತೆ ಇತರ ದೊಡ್ಡ ಪದವಿಗಳ ಸಾದನೆಗೆ ಅವರು ಹೊರ ರಾಜ್ಯಗಳಲ್ಲಿ ಹೋಗಿ ಬದುಕುವ ಸೇವೆ ಮಾಡುವ ಮನಸ್ಸು ಮಾಡುವುದಿಲ್ಲ, ಆದರೆ ಈ ದೈರ್ಯವನ್ನು ಉತ್ತರ ಭಾರತದ ಹಲವರು ಮಾಡುತ್ತಾರೆ. ವಿಧ್ಯಾರ್ಥಿಗಳು ಚಿಕ್ಕ ವಯಸ್ಸಿನಿಂದಲೂ ಆತ್ಮ ಸ್ಥೈರ್ಯ ಮತ್ತು ಸ್ವತಂತ್ರವಾಗಿ ಬದುಕುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ವಹಿಸಿದ್ದ ತುಮಕೂರು ಇಸ್ಕಾನ್ ನ ಶ್ರೀರಾಮ ಅಪ್ರಮೇಯ ದಾಸ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ತಂದೆ ತಾಯಿಗಳು ಮಕ್ಕಳಿಗೆ ಹೆಚ್ಚಿನ ಹೊರೆಯನ್ನು ಹೊರೆಸಬಾರದು. ಮಕ್ಕಳಿಗೆ ಸಾದನೆಯ ಗುರಿಯನ್ನು ಮಾತ್ರ ತೋರಿಸಬೇಕು. ವಿದ್ಯೆಯೊಂದಿಗೆ ಮಕ್ಕಳಿಗೆ ಸಂಸ್ಕಾರ, ಸಭ್ಯತೆ, ಸಮಾಜದಲ್ಲಿ ಒಳ್ಳೆಯ ನಡತೆಯ ಪರಿಪಾಠವನ್ನು ವಯಸ್ಸಿಗೆ ತಕ್ಕಂತೆ ತಿಳುವಳಿಕೆ ನೀಡುತ್ತಿರಬೇಕು.ಇಂದಿನ ಜೀವನದಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ಅವಶ್ಯಕವಾಗಿದೆ. ಮಕ್ಕಳಿಗೆ ಈಗಿನ ಆಧುನಿಕ ಯುಗದ ಜೊತೆಗೆ ಪುರಾತನ ಕಾಲದ ಒಳ್ಳೆಯ ವಿಷಯಗಳನ್ನು ತಿಳಿಸಬೇಕು. ಮಕ್ಕಳನ್ನು ಓದುವ ಯಂತ್ರಗಳನ್ನಾಗಿ ಮಾಡದೆ ಪರಿಪೂರ್ಣ ವ್ಯಕ್ತಿತ್ವವನ್ನು ರೂಪುಗೊಳ್ಳುವ ಪ್ರಜೆಗಳಾಗಿ ಮಾರ್ಪಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಕನ್ನಿಕಾಸಂಸ್ಥೆಯ ಎಂ.ಜಿ.ಸುಧೀರ್, ಸುಷ್ಮಾರಾಣಿ, ಬದರಿಪ್ರಸಾದ್, ವಿದ್ಯಾ, ಅಮೃತ್ರಾಜ್, ಹೆಚ್.ಎಸ್.ದಿನೇಶ್, ಕೃಷ್ಣಯ್ಯ ಶ್ರೇಷ್ಠಿ, ಭದ್ರಿನಾಥ್, ಡಾ.ಹರೀಶ್ಬಾಬು, ಸಾಗರ್, ನಾಗಶಯನ, ರಾಘವೇಂದ್ರ, ದರ್ಶನ್, ಅನಿಲ್, ಶ್ರೀಧರ್ ಸೇರಿದಂತೆ ಇತರರು ಹಾಜರಿದ್ದರು.
—————–ಶ್ರೀನಿವಾಸ್ ಕೊರಟಗೆರೆ