ಕೊರಟಗೆರೆ:- ಪಟ್ಟಣ ಪಂಚಾಯಿತಿಯಿಂದ ಎಫ್‍ಎಸ್‍ಟಿಪಿ ಘಟಕ ಸ್ಥಾಪನೆಗೆ ಕಸಬಾ ಹೋಬಳಿ ಕೊರಟಗೆರೆ ಸರ್ವೇ.ನಂ.181ರಲ್ಲಿ 3ಎಕೆರೆ ಭೂ ಮಂಜುರಾತಿಗೆ ಕೋರಿದ ಹಿನ್ನೆಲೆ ತಹಶೀಲ್ದಾರ್ ಕೆ.ಮಂಜುನಾಥ್ ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿ ವರ್ಗ ಸರ್ವೇ ಕಾರ್ಯದಲ್ಲಿ ಭಾಗಿಯಾಗಿತ್ತು.
ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಎಫ್‍ಎಸ್‍ಟಿಪಿ ಘಟಕ ನಿರ್ಮಾಣಕ್ಕೆ ಸರ್ವೇ.ನಂ.181ರಲ್ಲಿ ಸರ್ಕಾರಿ ಗೋಮಾಳದಲ್ಲಿ 3ಎಕೆರೆ ಭೂಮಿ ನೀಡುವಂತೆ ಪ.ಪಂಚಾಯಿತಿಯು ಕಂದಾಯ ಇಲಾಖೆಗೆ ಕೋರಿತ್ತು. ಜಿಲ್ಲಾಧಿಕಾರಿಗಳ ಆದೇಶದ ಅನ್ವಯ ತಹಶೀಲ್ದಾರ್ ಮಂಜುನಾಥ್ ನೇತೃತ್ವದಲ್ಲಿ ಅಧಿಕಾರಿಗಳು ಸರ್ವೇ ಮಾಡಿದ್ದು ಶೀಘ್ರದಲ್ಲಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

*ಸಾರ್ವಜನಿಕರಿಂದ ತಕರಾರು*
ಜೀವನಕ್ಕೆಂದು ಇರುವ ಭೂಮಿಯನ್ನು ಕಿತ್ತುಕೊಂಡು ಕಸ ವಿಲೇವಾರಿ ಘಟಕಕ್ಕೆ ಭೂ ಮಂಜೂರು ಮಾಡಬೇಡಿ. ಗಂಗಾಧರೇಶ್ವರ ಕೆರೆಗೆ ಸದರಿ ಕಾಲುವೆ ಮೂಲಕವೇ ಮುಂದೆ ಸಾಗುತ್ತಿದೆ. ಕಾಲುವೆ ನೀರನ್ನು ಪ್ರಾಣಿ ಪಕ್ಷಿಗಳು ಸೇವಿಸುತ್ತವೆ. ತ್ಯಾಜ್ಯ ವಸ್ತುವಿನಿಂದ ಪರಿಸರದ ಮಾಲಿನ್ಯ ಜೊತೆಗೆ ಮನುಷ್ಯನ ಆರೋಗ್ಯದ ಮೇಲೆ ದುಷ್ಪಾರಿಣಾಮ ಬೀರಲಿದೆ ಎಂದು ಸಾರ್ವಜನಿಕರು ತಕರಾರು ವ್ಯಕ್ತಪಡಿಸಿದರು.
ಈ ವೇಳೆ ಕಂದಾಯ ಇಲಾಖೆಯ ಆರ್.ಐ ಬಸವರಾಜು, ಆರೋಗ್ಯ ನಿರೀಕ್ಷಕ ಹುಸೇನ್, ಸರ್ವೇಯರ್ ನಾಗಲಾಂಭಿಕೆ, ಪ.ಪಂಚಾಯ್ತಿಯ ವೇಣುಗೋಪಾಲ್, ಪ.ಪಂ ಸದಸ್ಯ ನಂದೀಶ್, ಇದ್ದರು.

ಭೂ ಮಂಜುರಾತಿಗೆ ಹದ್ದುಬಸ್ತು:
ಪ.ಪಂಚಾಯಿತಿಯು ಫೀಕಲ್ ಸ್ಲಡ್ಜ್ ಟ್ರಿಟ್‍ಮೆಂಟ್ ಪ್ಲಾಂಟ್ ನಿರ್ಮಾಣಕ್ಕೆ ಕಂದಾಯ ಇಲಾಖೆ ಬಳಿ ಸವೇ.ನಂ.181ರಲ್ಲಿ 3ಎಕೆರೆ ಭೂ ಮಂಜುರಾತಿಗೆ ಕಂದಾಯ ಇಲಾಖೆಗೆ ಕೋರಿದ ಹಿನ್ನೆಲೆ 3ಎಕೆರೆ ಸರ್ಕಾರಿ ಜಮೀನನ್ನು ಸರ್ವೇ ಮಾಡಿದ್ದು, ಸರ್ವೇಯರ್ ನಾಗಲಾಂಭಿಕೆಗೆ ಶೀಘ್ರದಲ್ಲೇ ವರದಿ ನೀಡುವಂತೆ ತಹಶೀಲ್ದಾರ್ ಸೂಚನೆ ನೀಡಿದರು.

ಸರ್ಕಾರದ ನಿರ್ದೇಶನದ ಮೆರೆಗೆ ಘನತ್ಯಾಜ್ಯ ಮತ್ತು ಫೀಕಲ್ ತ್ಯಾಜ್ಯ ಸ್ಥಳೀಯ ಇಲಾಖೆ ವ್ಯಾಪ್ತಿಯಲ್ಲಿ ನಿರ್ಮಿಸಬೇಕು. ಇದಕ್ಕೆ ಬೇಕಾದ ಕ್ರಿಯಾಯೋಜನೆ ರೂಪಿಸಿಕೊಂಡು ಘಟಕ ಸ್ಥಾಪನೆ ಮಾಡಲಾಗುವುದು. ಈ ಘಟಕ ಮತ್ತೊಬ್ಬರಿಗೆ ತೊಂದರೆ ಮಾಡುವ ಉದ್ದೇಶ ಹೊಂದಿಲ್ಲ, ಸಾರ್ವಜನಿಕರ ದೂರನ್ನು ಪರಿಶೀಲಿಸಿ ಪರ್ಯಾಯ ವ್ಯವಸ್ಥೆಯನ್ನು ಕಂಡುಕೊಳ್ಳಲಾಗುವುದು.
- ಕೆ.ಮಂಜುನಾಥ್, ಹಶೀಲ್ದಾರ್, ಕೊರಟಗೆರೆ.

ಎಫ್‍ಎಸ್‍ಟಿಪಿ ಘಟಕ ನಿರ್ಮಾಣದಿಂದ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಬಹುಮುಖ್ಯ ಪಾತ್ರ ವಹಿಸುತ್ತದೆ. 3ಎಕೆರೆ ಪ್ರದೇಶದಲ್ಲಿ 3.5ಕೋಟಿ ವೆಚ್ಚದಲ್ಲಿ ಈ ಘಟಕ ಸ್ಥಾಪನೆಯಾಗಲಿದ್ದು ಕಸ ವಿಲೇವಾರಿ ಘಟಕಕ್ಕೆ ಈ ಸ್ಥಳವನ್ನು ಬಳಸುವುದಿಲ್ಲ, ರೈತರಿಗೆ ಮತ್ತು ಸ್ಥಳೀಯ ಸಾರ್ವಜನಿಕರಿಗೆ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಆರೋಗ್ಯ ಮತ್ತು ಪರಿಸರ ಹಾನಿಗೆ ಸಮಸ್ಯೆ ಉಂಟಾಗುವುದಿಲ್ಲ.
- ಉಮೇಶ್, ಪ.ಪಂ ಮುಖ್ಯಾಧಿಕಾರಿ.

ಫೀಕಲ್ ತ್ಯಾಜ್ಯ ಘಟಕ ಸ್ಥಾಪನೆಗೆ ಕಂದಾಯ ಇಲಾಖೆಯಿಂದ ಸರ್ವೇ ಮಾಡಿದ್ದಾರೆ. ಒಂದು ವೇಳೆ ಫೀಕಲ್ ತ್ಯಾಜ್ಯ ಬದಲಿಗೆ ಕಸ ವಿಲೇವಾರಿ ಘಟಕ ನಿರ್ಮಿಸಿದರೆ ಪರಿಸರಕ್ಕೆ ಹಾನಿಯಾಗುವುದು. ಸರ್ವೇ.ನಂ. 255ರಲ್ಲಿ ಕಲ್ಲು ಬಂಡೆ ವಿಂಗಡಿಸಿಕೊಂಡು ಸುಮಾರು 30ಕ್ಕೂ ಹೆಚ್ಚು ವರ್ಷಗಳಿಂದ 2ಎಕೆರೆ 24ಗುಂಟೆ ಜಮೀನಿನಲ್ಲಿ ಬೇಸಾಯ ಮಾಡಿಕೊಂಡು ಅನುಭೋಗದಲ್ಲಿದ್ದೇವೆ. ಆದ್ದರಿಂದ ರೈತರನ್ನು ಸರ್ಕಾರವೇ ಕಾಪಾಡಬೇಕು.
- ಪೆನ್ನಪ್ಪ, ಸ್ಥಳೀಯ ರೈತ.
– ಶ್ರೀನಿವಾಸ್ , ಕೊರಟಗೆರೆ