ಕೊರಟಗೆರೆ:-ಸಾಮಾಜಿಕ ಕಾರ್ಯಗಳ ಜೊತೆಗೆ ರೋಟರಿ ಸಂಸ್ಥೆಯು ನಮ್ಮ ಸಂಸ್ಕೃತಿ ಉಳಿಸಿ ಬೆಳೆಸುವ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ ಎಂದು ಕ್ಷೇತ್ರ ಶಿಕ್ಷಣಾಧಿ ಕಾರಿ ಸಿ.ವಿ ನಟರಾಜ್ ಮೆಚ್ಚುಗೆ ಸೂಚಿಸಿದರು.
ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ರೋಟರಿ ಸಿದ್ದರಬೆಟ್ಟ ಮತ್ತು ಕನ್ನಿಕಾ ವಿದ್ಯಾಪೀಠ ಶಾಲೆಯ ಸಹಯೋಗದೊಂದಿಗೆ ನಡೆದ ರೋಟೋತ್ಸವ ಕಲಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರೋಟರಿ ಸಂಸ್ಥೆಯು ಭವಿಷ್ಯದಲ್ಲಿ ಶಾಲಾ ಮಕ್ಕಳ ಕಲಿಕಾ ಚೈತನ್ಯವನ್ನು ಬಲಪಡಿಸಲು ಸಾಂಸ್ಕೃತಿಕ,ನಮ್ಮ ನೆಲೆಗಟ್ಟಿನ ಜಾನಪದ, ರಂಗೋಲಿ ಸ್ಪರ್ಧೆಗಳಂತಹ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ.ಅದೇ ರೀತಿ ಮಕ್ಕಳ ಭವಿಷ್ಯ ರೂಪಿಸುವ ಶಿಕ್ಷಕರಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದ ತಾಲೂಕಿನ ಎಲೆ ಮರೆಯ ಕಾಯಿಯಂತೆ ಇರುವಂತಹ ಶಿಕ್ಷಕರನ್ನು ಗುರುತಿಸಿ ಅವರಿಗೆ ಗೌರವ ಸೂಚಿಸಿರುವುದು ಖುಷಿಯ ವಿಚಾರ ಎಂದು ತಿಳಿಸಿದರು.
ಸಿದ್ದರಬೆಟ್ಟ ರೋಟರಿ ಅಧ್ಯಕ್ಷ ಕೆ.ಎನ್ ರಘು ಮಾತನಾಡಿ, ತಾಲೂಕಿನಲ್ಲಿರುವ ಪ್ರತಿ ಶಾಲೆಯ ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸುವ ಸಲುವಾಗಿ ರೋಟೋ ಉತ್ಸವ ಕಾರ್ಯಕ್ರಮದಲ್ಲಿ ಕಲಾ ಮತ್ತು ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮ ಅಯೋಜಿಸಿ ಪ್ರತಿಭಾವಂತ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಗಿದೆ ಮುಂಬರುವ ದಿನದಲ್ಲಿ ಇನ್ನು ಹೆಚ್ಚಿನ ಶಿಕ್ಷಣಕ್ಕೆ ಪೂರಕವಾದ ಕೆಲಸವನ್ನು ಮಾಡುವುದಾಗಿ ಹೇಳಿದರು.
ರೋಟರಿ ಸಹಾಯಕ ರಾಜ್ಯಪಾಲ ಮಂಜುನಾಥ್ ಮಾತನಾಡಿ, ಸಂಕಷ್ಟಕ್ಕೆ ಸಿಲುಕಿದ ಬಡ ಕುಟುಂಬಗಳಿಗೆ ಆಸರೆ, ಆರೋಗ್ಯ ಶಿಬಿರ, ಮಕ್ಕಳ ವಿದ್ಯಾಭ್ಯಾಸ, ಯುವತಿಯರಿಗೆ ಟೈಲರಿಂಗ್, ಬ್ಯೂಟಿ ಪಾರ್ಲರ್ ಉಚಿತ ತರಬೇತಿಯನ್ನು ನೀಡಿ ಸ್ವಾವಲಂಬಿ ಜೀವನಕ್ಕೆ ಸಹಕಾರಿಯ ಜೊತೆಗೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದೆ ಎಂದರು.
ರೋಟೋತ್ಸವ ಕಾರ್ಯಕ್ರಮದಲ್ಲಿ ರಂಗೋಲಿ,ಚಿತ್ರಕಲೆ,ಜಾನಪದ ನೃತ್ಯ,ಭರತನಾಟ್ಯ,ವೈದ್ಯ ವೇಷ,ಏಕಪಾತ್ರಾಭಿನಯ ಸೇರಿದಂತೆ ಇತರೆ ಸಾಂಸ್ಕøತಿಕ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಿಪಿಐ ಅನಿಲ್,ಕನ್ನಿಕಾ ವಿದ್ಯಾಪೀಠ ಶಾಲೆಯ ಅಧ್ಯಕ್ಷ ಎಂ.ಜಿ ಸುಧೀರ್,ಕಾರ್ಯದರ್ಶಿ ಕೆ ಎಸ್ ವಿ ರಘು,ರೋಟರಿಯನ್ ಗಳಾದ ಕೆ.ಕೆ ನವೀನ್‍ಕುಮಾರ್,ಬಾಲಾಜಿ ದರ್ಶನ್, ಬದ್ರಿಪ್ರಸಾದ್,ಶಿಕ್ಷಣ ಇಲಾಖೆಯ ಇಸಿಓ
ಮಂಜುನಾಥ್,ಬಿ ಆರ್ ಪಿ ಶಾರದಮ್ಮ,ಗಂಗಮ್ಮ ಸೇರಿದಂತೆ ಇತರರು ಇದ್ದರು.
ಪೋಷಕರಿಗೆ ಮಕ್ಕಳ ಮೇಲೆ ವಿಶೇಷ ಕಾಳಜಿಯಿರಲಿ.
ದೇಶದಲ್ಲಿ ಇತ್ತೀಚಿಗೆ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವು ಹೆಚ್ಚಾಗಿದ್ದು, ಇದರ ಬಗ್ಗೆ ಜನರಲ್ಲಿ ಅರಿವು ಮೂಡಿಸಲೆಂದು ಪ್ರತಿವರ್ಷ ಡಿಸೆಂಬರ್ ಮಾಹೆಯಲ್ಲಿ ಪೋಲಿಸ್ ಇಲಾಖೆಯಿಂದ ಅಪರಾಧ ತಡೆ ಮಾಸಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಪೋಷಕರು ಮಕ್ಕಳನ್ನು ಮೊಬೈಲ್ ಎಂಬ ದುಶ್ಚಟದಿಂದ ದೂರ ಉಳಿಯುವಂತೆ ಮಾಡಿ, ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ವಿಶೇಷ ಕಾಳಜಿ ವಹಿಸಬೇಕಿದೆ.
ಅನಿಲ್, ಸಿಪಿಐ.
ಪೋಲಿಸ್ ಇಲಾಖೆ, ಕೊರಟಗೆರೆ.
——ಶ್ರೀನಿವಾಸ್ ಕೊರಟಗೆರೆ