ಕೊರಟಗೆರೆ:-ಪ್ರಥಮ ಬಾರಿಗೆ ಮುಸಲ್ಮಾನರು ಗಣಪತಿ ವಿಸರ್ಜನಾ ಕಾರ್ಯಕ್ರಮದಲ್ಲಿ ಕೇಸರಿ ಶಾಲು ಹೊದ್ದು ಭಾಗವಹಿಸುವ ಮೂಲಕ ನೈಜ ಭಾವೈಕ್ಯತೆಯ ಪ್ರದರ್ಶನ ಮಾಡಿದರು.
ಮೈಸೂರು ದಸರಾ ವೈಭದಂತೆ ನಡೆದ 14ಗಣಪತಿ ಮೂರ್ತಿಗಳ ಸಾಮೂಹಿಕ ವಿಸರ್ಜನಾ ಕಾರ್ಯಕ್ರಮದಲ್ಲಿ ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಮುಸಲ್ಮಾನ ಸಮಾಜದ ಯುವಕರು ದಣಿದವರಿಗೆ ತಂಪು ಪಾನಕ-ಸಿಹಿಯನ್ನು ಹಂಚಿ ಇತಿಹಾಸ ಸೃಷ್ಟಿಸಿದರು.
ಇದಕ್ಕೆ ಸಾಕ್ಷಿಯಾಗಿದ್ದು ಕೊರಟಗೆರೆ ಪಟ್ಟಣ.ಕೊರಟಗೆರೆ ತಹಶೀಲ್ದಾರ್ ಮಂಜುನಾಥ್ ಕೆ ರವರ ಅದ್ಯಕ್ಷತೆಯಲ್ಲಿ ನಡೆದ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಕೊರಟಗೆರೆ ಸಿಪಿಐ ಅನಿಲ್,ಪಿಎಸ್‍ಐ ಚೇತನ್‍ಕುಮಾರ್,ಪಿಎಸ್‍ಐ ಯೋಗೀಶ್ ಸೇರಿದಂತೆ ಪೋಲೀಸ್ ಸಿಬ್ಬಂದಿಗಳು,ಪಟ್ಟಣ ಪಂಚಾಯತಿಯ ಕೆಲವು ಸದಸ್ಯರು,ಪಟ್ಟಣದ ಗಣೇಶ ಸಮಾನ ಮನಸ್ಥಿತಿ ಗೆಳೆಯರ ಬಳಗ,ಕೊರಟಗೆರೆ ಸ್ನೇಹ ಬಳಗ ಸೇರಿದಂತೆ ಹಲವು ಸಂಘಟನೆಗಳು ಒಟ್ಟಾಗಿ ಕೈ ಜೋಡಿಸಿ ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಮೆರವಣಿಗೆಯಲ್ಲಿ ವಿವಿಧ ಜಾನಪದ ನೃತ್ಯಗಳು,ತಮಟೆ,ನಾಸಿಕ್ ಡೋಲ್‍ಗಳು,ಕೇರಳದ ವಾನಂಬಾಡಿ,ಚಂಡಮದ್ದಲೇ, ಹಕ್ಕಿ ಕುಣಿತ,ಕರ್ನಾಟಕದ ವೀರಗಾಸೆ,ದೇವಿಕುಣಿತ ಸೇರಿದಂತೆ ವಿವಿಧ ಪ್ರದರ್ಶನಗಳು ನಡೆದವು.ಭಕ್ತಾದಿಗಳು ನೃತ್ಯ ಮಾಡುತ್ತ ಸಂತೋಷದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿದ ಭವ್ಯ ಮೆರವಣಿಗೆಯನ್ನು ನೋಡಲು ಸಾರ್ವಜನಿಕರು ಕಿಕ್ಕಿರಿದು ಸೇರಿದ್ದರು. ಕೋಟೆ ವೆಂಕಟರಮಣಸ್ವಾಮಿ ಕಲ್ಯಾಣಿಯಲ್ಲಿ ಎಲ್ಲ ಗಣೇಶ ಮೂರ್ತಿಗಳನ್ನು ವಿಸರ್ಜಿಸಲಾಯಿತು.
ಮೆರವಣಿಗೆಯಲ್ಲಿ ಸತ್ಯಗಣಪತಿ,ಕಟ್ಟೆಗಣಪತಿ,ಕೋಟೆಗಣಪತಿ,ರಾಮಾಜಣ್ಣ ಗಣಪತಿ,ವಾಲ್ಮೀಕಿ ನಗರ ಗಣಪತಿ, ತಾಲ್ಲೂಕು ಕಚೇರಿ ಗಣಪತಿ,ಮೊದಲವಾರ್ಡ್ ಗಣಪತಿ,ದೊಡ್ಡಪೇಟೆ ಗಣಪತಿ,ವಿದ್ಯಾ ಗಣಪತಿ,ಸಿದ್ದಿಗಣಪತಿ, ಶಿವಗಣಪತಿ ಸೇರಿದಂತೆ ಹಲವು ಗಣಪತಿ ಮಂಡಳಿಗಳ ಗಣೇಶ ಮೂರ್ತಿಗಳಿದ್ದವು.
ಈ ಸಂದರ್ಭದಲ್ಲಿ ಸಿದ್ದರಬೆಟ್ಟದ ಶ್ರೀ ವೀರಭದ್ರಶಿವಾಚಾರ್ಯಸ್ವಾಮಿಜಿ,14 ಗಣಪತಿ ಸಮಿತಿಗಳ ಅದ್ಯಕ್ಷರು ಪದಾಧಿಕಾರಿಗಳು ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.
————————-ಶ್ರೀನಿವಾಸ್ ಕೊರಟಗೆರೆ