ಕೊರಟಗೆರೆ-ಶಾಲೆಯಲ್ಲಿ ‘ತಾಜಾ ತಾಜಾ’ತರಕಾರಿ-ಶಿಕ್ಷಕರು ಹಾಗು ವಿದ್ಯಾರ್ಥಿಗಳ ಜಂಟಿ ಕೃಷಿ-ಬೆಳೆದ ತರಕಾರಿ ಬಿಸಿಯೂಟಕ್ಕೆ ಬಳಕೆ

ಕೊರಟಗೆರೆ;ವಿದ್ಯಾರ್ಥಿಗಳಿಗೆ ತರಗತಿಯಲ್ಲಿ ಕೇವಲ ಪಾಠ ಮಾಡುವುದಷ್ಟೇ ನಮ್ಮ ಕೆಲಸವಲ್ಲ.ಅದರಾಚೆಗೂ ಕೆಲಸ ಮಾಡಿದರೆ ವಿದ್ಯಾರ್ಥಿಗಳಿಗೆ ಇನ್ನಷ್ಟು ಉಪಯುಕ್ತವಾಗುತ್ತದೆ ಎನ್ನುವುದನ್ನು ತರಕಾರಿ ಕೃಷಿ ಮಾಡುವ ಮೂಲಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ತೋರಿಸಿಕೊಟ್ಟಿದ್ದಾರೆ.

ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಕ್ಯಾಮೇನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ನಾಲ್ಕು ಗೋಡೆಗಳ ಮಧ್ಯೆ ಪಾಠ ಮಾತ್ರ ಮಾಡದೇ ಬಿಡುವಿನ ವೇಳೆಯಲ್ಲಿ ಶಾಲಾ ಆವರಣದಲ್ಲಿ ತರಕಾರಿ ಕೃಷಿ ಮಾಡುವ ಮೂಲಕ ಸ.ಕಿ.ಪ್ರಾ.ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಮಾದರಿಯಾಗಿದ್ದಾರೆ.

ಶಾಲೆ ಬಿಡುವಿನ ಸಮಯದಲ್ಲಿ ಹಾಗೂ ಶಾಲೆ ಬಿಟ್ಟ ನಂತರ ಸ್ವಲ್ಪ ಸಮಯ ಕೃಷಿ ಕಾಯಕದಲ್ಲಿ ತೊಡಗಿ ಮನೆಗೆ ತೆರಳುವ ಶಿಕ್ಷಕರ ನಡೆಯು ಗ್ರಾಮದಲ್ಲಿ ಮಾದರಿಯೆನಿಸಿಕೊಂಡಿದೆ.

ಕ್ಯಾಮೇನಹಳ್ಳಿ ಸರ್ಕಾರಿ ಶಾಲೆಯ ತರಕಾರಿ ತೋಟ ಎಲ್ಲರನ್ನು ಆಕರ್ಷಿಸುತ್ತಿದೆ.ಇವರಿಗೆ ಶಾಲೆಯ ಮಕ್ಕಳು ಸಹಕಾರ ನೀಡುತ್ತಿದ್ದಾರೆ.ಶಾಲಾ ಎಸ್‌ ಡಿಎಂಸಿ ಅಧ್ಯಕ್ಷ ಸಿದ್ದಗಂಗಯ್ಯ ,ಅವರೂ ಬೆಂಬಲ ನೀಡುತ್ತಿದ್ದು,ಶಾಲೆಗೆ ರಜೆ ಇರುವ ಸಂದರ್ಭ ಸ್ವತಃ ತಾವೇ ತರಕಾರಿ ಕೃಷಿಗೆ ನೀರು ಹಾಯಿಸುವ ಕೆಲಸವನ್ನು ಮಾಡುತ್ತಿದ್ದಾರೆ.

ತರಕಾರಿ ತೋಟದಲ್ಲಿ ಏನೇನಿದೆ?

ಶಾಲಾ ಆವರಣದ ತರಕಾರಿ ತೋಟದಲ್ಲಿ ಬದನೆ, ಮೆಣಸಿನ ಕಾಯಿ, ಹುರುಳಿಕಾಯಿ, ಸೊಪ್ಪು , ಬೆಂಡೆಕಾಯಿ, , ಹೀರೇಕಾಯಿ, ಟೊಮೇಟೊ ತರಕಾರಿ ತೋಟವನ್ನು ಗ್ರಾಮಸ್ಥರು ನೀಡುವ ನೈಸರ್ಗಿಕ ಗೊಬ್ಬರಗಳನ್ನು ಬಳಸಿ ಅಭಿವೃದ್ಧಿಪಡಿಸಲಾಗುತ್ತಿದೆ.

ಇದಲ್ಲದೆ ಶಾಲೆಯ ಆವರಣದ ಸುತ್ತಲೂ ಮಾವು, ತೆಂಗು, ನೇರಳೆ,ಸಂಪಿಗೆ ,ಬಾಳೆ ,ಸಪೋಟ ಇನ್ನು ಮುಂತಾದ ಸಸಿಗಳನ್ನು ನೆಟ್ಟು ಬೆಳೆಸಲಾಗುತ್ತಿದೆ.

ಶಾಲೆಯ ಆವರಣದಲ್ಲಿ ಬೆಳೆದ ತರಕಾರಿಯು ಮಧ್ಯಾಹ್ನದ ಬಿಸಿಯೂಟಕ್ಕೂ ವರದಾನವಾಗಿದ್ದು ಬಹುತೇಕ ವಿದ್ಯಾರ್ಥಿಗಳು ಕೃಷಿಕರ ಕುಟುಂಬದಿಂದ ಬಂದವರಾದ ಕಾರಣ ಮಕ್ಕಳಿಗೆ ತರಕಾರಿ ತೋಟದಲ್ಲೇ ಕೃಷಿ ಬಗ್ಗೆ ತಿಳುವಳಿಕೆ ನೀಡಲಾಗುತ್ತಿದ್ದು ಮಕ್ಕಳಲ್ಲಿ ಕೃಷಿ ಬಗೆಗಿನ ಆಸಕ್ತಿ ಇಮ್ಮಡಿಗೊಳ್ಳುವಂತೆ ಮಾಡಿದೆ.

ಶಾಲೆಯ ಮುಖ್ಯೋಪಾಧ್ಯಾಯೇ ಸುಜಾತ ಮಾತನಾಡಿ, ಶಾಲೆಯಲ್ಲಿ ಮಕ್ಕಳ ಆಟ ಪಾಠದ ಜೊತೆಗೆ ನಮ್ಮ ಶಾಲೆಯಲ್ಲಿ ಅನಗತ್ಯವಾಗಿ ವ್ಯಯವಾಗುತ್ತಿದ್ದಂತ ನೀರನ್ನು ಬಳಸಿಕೊಂಡು ಸಮೃದ್ಧಿಯಾಗಿ ತಾಜಾ ತರಕಾರಿಯನ್ನ ಬೆಳೆಯುತ್ತಿದ್ದು, ಈ ತಾಜಾ ತರಕಾರಿಯನ್ನ ಬಿಸಿ ಊಟಕ್ಕೆ ಬಳಸಿಕೊಳ್ಳುತ್ತಿದ್ದೇವೆ.ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎಂಬುವಂತೆ ವಿದ್ಯಾಭ್ಯಾಸದ ಜೊತೆಗೆ ವ್ಯವಸಾಯದ ಗುಣಮಟ್ಟ ಹೆಚ್ಚಿಸುವಂತಹ ಅಭ್ಯಾಸಕ್ಕೆ ತರಕಾರಿಯನ್ನು ಬೆಳೆಯುವಂತ ಹವ್ಯಾಸ ಮಾಡುತ್ತಿದ್ದೇವೆ ಎಂದರು.

ಶಾಲೆಯ ಹಳೆಯ ವಿದ್ಯಾರ್ಥಿ ನಂಜುಂಡಯ್ಯ ಜಿ ಮಾತನಾಡಿ, ಕ್ಯಾಮೇನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಬಹಳ ಚಿಕ್ಕದಿದ್ದರೂ ಚೊಕ್ಕವಾಗಿ ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ವ್ಯವಸಾಯದಲ್ಲಿಯೂ ವಿದ್ಯಾರ್ಥಿಗಳನ್ನು ತೊಡಗಿಸಿಕೊಂಡು ಅವರ ಜ್ಞಾನವನ್ನು ಹೆಚ್ಚಿಸಿಕೊಳ್ಳುವಂತ ಕೆಲಸ ಮಾಡಲಾಗುತ್ತಿದ್ದು , ವಿರಾಮದ ಸಂದರ್ಭದಲ್ಲಿ ಕೈತೋಟವನ್ನುಬೆಳೆಸಲಾಗಿದ್ದು ತಾಜಾ ತರಕಾರಿಯನ್ನು ಬೆಳೆದು ಬಹಳಷ್ಟು ಉಪಯುಕ್ತವಾಗಿ ದಾಸೋಹಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಸಿದ್ದಗಂಗಯ್ಯ ಮಾತನಾಡಿ ಶಾಲೆಯ ಕಾಂಪೌಂಡ್ ಅಲ್ಲಿ ಯಾವುದೇ ವೇಸ್ಟ್ ಮಾಡದೆ ಜಾಗವನ್ನು ಬಳಸಿಕೊಂಡು ತಾಜಾ ತರಕಾರಿಯನ್ನು ಬೆಳೆಸಲಾಗುತ್ತಿದೆ, ನೀರು ವೇಸ್ಟ್ ಮಾಡದೆ ಆ ನೀರಿನಲ್ಲಿಯೇ ತರಕಾರಿ ಬೆಳೆಯಲಾಗುತ್ತಿದೆ.ಇದು ಬಹಳ ಉತ್ತಮವಾದ ಬೆಳವಣಿಗೆ ಇದನ್ನ ದಾಸೋಹಕ್ಕೆ ಬಳಸಲಾಗುತ್ತದೆ ಎಂದು ತಿಳಿಸಿದರು.

ನಾಲ್ಕನೇ ತರಗತಿ ವಿದ್ಯಾರ್ಥಿನಿ ವರ್ಷಿಣಿ ಮಾತನಾಡಿ ಶಾಲೆಯ ಶಿಕ್ಷಕರ ಮಾರ್ಗದರ್ಶನದಂತೆ ನಾವು ನಮ್ಮ ಶಾಲೆಯ ಮುಂಭಾಗ ತಾಜಾ ತರಕಾರಿಯನ್ನು ಬೆಳೆಯುತ್ತಿದ್ದೇವೆ. ನೇರಳೆ ಗಿಡ ಮಾವಿನ ಗಿಡ, ಬಾಳೆ ಗಿಡ, ಸಂಪಿಗೆ ಗಿಡ ಸೇರಿದಂತೆ ಇನ್ನಿತರ ಗಿಡಗಳನ್ನು ಬೆಳೆಯುತ್ತಿದ್ದೇವೆ ಎಂದರು.

—————– ಶ್ರೀನಿವಾಸ್ ಕೊರಟಗೆರೆ

Leave a Reply

Your email address will not be published. Required fields are marked *

× How can I help you?