ಕೊರಟಗೆರೆ- ಪ.ಪಂ ಅಧ್ಯಕ್ಷೆ ಮನೆಯಿಂದ ಸಮೀಕ್ಷೆ ಆರಂಭ.- ಪ.ಜಾತಿ ಒಳ ಮೀಸಲಾತಿ ದತ್ತಾಂಶಗಳ ಸಂಗ್ರಹಣೆಗೆ ತಹಶೀಲ್ದಾರ್ ಚಾಲನೆ

ಕೊರಟಗೆರೆ:- ಭಾರತದ ಸಂವಿಧಾನ ಆಶಯ, ಸಮಾನತೆಯ ತತ್ವ ಆಧಾರದ ಮೇಲೆ ಅವಕಾಶದಿಂದ ವಂಚಿತರಾದವರಿಗೆ ಸರ್ಕಾರದ ಪ್ರತಿ ಸೌಲಭ್ಯ ಪಡೆಯಲು ಅನುಕೂಲವಾಗುವಂತೆ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನ್‌ದಾಸ್ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗವು ಪ.ಜಾತಿಗಳ ಸಮಗ್ರ ಸಮೀಕ್ಷೆ-2025 ಮೊದಲ ಹಂತದ ಸಮೀಕ್ಷೆ ಮೇ.5ರಿಂದ 12ರ ತನಕ ನಡೆಯಲಿದೆ ಎಂದು ತಹಶೀಲ್ದಾರ್ ಕೆ.ಮಂಜುನಾಥ್ ತಿಳಿಸಿದರು.

           ಪಟ್ಟಣದ ಗುಂಡಾಂಜನೇಯ ಸ್ವಾಮಿ ದೇವಾಲಯದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಲಾದ ಪರಿಶಿಷ್ಟ ಜಾತಿಯ ಒಳ ಮೀಸಲಾತಿ ದತ್ತಾಂಶಗಳ ಸಂಗ್ರಹಣೆ ಕಾರ್ಯಕ್ಕೆ ಸೋಮವಾರ ಬೆಳಗ್ಗೆ ಸಸಿಗೆ ನೀರು ಹಾಕುವ ಮೂಲಕ ಚಾಲನೆ ನೀಡಿ ಮಾತನಾಡಿದರು.

         ಕರ್ನಾಟಕ ಸರ್ಕಾರದ ಆದೇಶದ ಅನ್ವಯ ಪ.ಜಾತಿಗೆ ಒಳ ಮೀಸಲಾತಿ ಕಲ್ಪಿಸುವ ಉದ್ದೇಶದ ಪರಿಶಿಷ್ಟ ಜಾತಿ ಪ್ರತಿಯೊಂದು ಕುಟುಂಬದ ದತ್ತಾಂಶ ಸಂಗ್ರಹಣೆಯನ್ನು ಶಿಕ್ಷಕರಿಗೆ ಈಗಾಗಲೇ ನೀಡಿರುವ ತರಬೇತಿಯಂತೆ ನಡೆಸಬೇಕು. ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂದ್ರ, ಲಂಬಾಣಿ ಸೇರಿ 101 ಜಾತಿಗಳು ಪ.ಜಾತಿಗೆ ಒಳಪಡುತ್ತವೆ. ಪ.ಪಂ ವ್ಯಾಪ್ತಿ ಮತ್ತು ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿ ಸಮೀಕ್ಷೆ ನಡೆಸಲು ಕ್ರಮವಹಿಸಲಾಗಿದೆ ಎಂದು ಹೇಳಿದರು.

      ಗೃಹ ಸಚಿವರ ವಿಶೇಷ ಅಧಿಕಾರಿ ಡಾ.ಕೆ ನಾಗಣ್ಣ ಮಾತನಾಡಿ, ಗೃಹ ಸಚಿವ ಡಾ.ಜಿ ಪರಮೇಶ್ವರ್‌ರವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಪ.ಜಾತಿಯ ಒಳಮೀಸಲಾತಿ ದತ್ತಾಂಶ ಸಂಗ್ರಹಣೆ ಕಾರ್ಯವು ಒಳ ಮೀಸಲಾತಿ ಜಾರಿಗೆ ಬಹುಮುಖ್ಯ ಪಾತ್ರವಹಿಸುತ್ತದೆ. ಸಮುದಾಯದ ಪ್ರತಿಯೊಬ್ಬ ವ್ಯಕ್ತಿಯ ಸಂಪೂರ್ಣ ವಿವರವನ್ನು ಸಂಗ್ರಹಿಸಿ ಸಂಬಂಧ ಪಟ್ಟ ಅಧಿಕಾರಿಗಳಿಗೆ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.

           ಈ ವೇಳೆ ನಿವೃತ್ತ ಐಎಎಸ್ ಅಧಿಕಾರಿ ಅನಿಲ್ ಕುಮಾರ್, ಗೃಹ ಸಚಿವರ ವಿಶೇಷ ಅಧಿಕಾರಿ ಡಾ.ಕೆ ನಾಗಣ್ಣ, ಬಿಇಓ ನಟರಾಜ್, ಪ.ಪಂ ಅಧ್ಯಕ್ಷೆ ಅನಿತಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಮಂಜುನಾಥ್, ಪ.ಪಂ ಮುಖ್ಯಾಧಿಕಾರಿ ಉಮೇಶ್, ಸದಸ್ಯರಾದ ಕೆ.ಆರ್ ಓಬಳರಾಜು, ಪ್ರದೀಪ್‌ಕುಮಾರ್, ಪುಟ್ಟನರಸಪ್ಪ, ಮಂಜುಳಾ ಗೋವಿಂದರಾಜು, ಮುಖಂಡರಾದ ದಾಡಿ ವೆಂಕಟೇಶ್, ಶಿವರಾಮ್, ಜಯರಾಮಣ್ಣ,  ವೀರಕ್ಯಾತಯ್ಯ ಸೇರಿದಂತೆ ಇತರರು ಇದ್ದರು.

ಕೊರಟಗೆರೆ ಪ.ಪಂ ಅಧ್ಯಕ್ಷೆ ಮನೆಯಿಂದ ಆರಂಭ:

ಗೃಹ ಸಚಿವ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ ಪರಮೇಶ್ವರ್ ಮಾರ್ಗದರ್ಶನದಲ್ಲಿ ತಾಲ್ಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆಯಿಂದ ಪ.ಜಾತಿ ಒಳ ಮೀಸಲಾತಿ ದತ್ತಾಂಶ ಸಂಗ್ರಹಣೆಗೆ ತಹಶೀಲ್ದಾರ್ ಮಂಜುನಾಥ್ ಸೋಮವಾರ ಚಾಲನೆ ನೀಡಿದ್ದು, ಕೊರಟಗೆರೆ ಪ.ಪಂ ಅಧ್ಯಕ್ಷೆ ಅನಿತಾ ಮನೆಯಿಂದ ಸಮೀಕ್ಷೆ ಆರಂಭಿಸಲಾಯಿತು.

ಕರ್ನಾಟಕದಲ್ಲಿನ ಪ.ಜಾತಿಯಲ್ಲಿನ ಉಪಜಾತಿಗಳ ಬಗ್ಗೆ ನಿಖರವಾದ ಮಾಹಿತಿ ಕೊರತೆಯಿಂದ ನಿವೃತ್ತ ನ್ಯಾಯಮೂರ್ತಿ ಹೆಚ್.ಎನ್ ನಾಗಮೋಹನ್‌ದಾಸ್ ನೇತೃತ್ವದ ಏಕ ಸದಸ್ಯ ವಿಚಾರಣಾ ಆಯೋಗದಿಂದ ರಾಜ್ಯದಲ್ಲಿ ಪ.ಜಾತಿಗಳ ಜಾತಿ ಜನಗಣತಿ ನಡೆಯುತ್ತಿದೆ. ಪ್ರಮುಖವಾಗಿ ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂದ್ರ ಉಪಜಾತಿಗಳಲ್ಲಿನ ಗೊಂದಲ ನಿವಾರಣೆಗೆ ಮೊದಲ ಹಂತದ ಸಮೀಕ್ಷೆ ಅಗತ್ಯವಾಗಿದೆ.  

  • ಬಿ.ಎಚ್ ಅನಿಲ್‌ಕುಮಾರ್, ನಿವೃತ್ತ ಐಎಎಸ್ ಅಧಿಕಾರಿ.

ಪ.ಜಾತಿಯಲ್ಲಿನ 101ಜಾತಿಗಳಲ್ಲಿ ಒಳಮೀಸಲಾತಿ ವರ್ಗೀಕರಣಕ್ಕೆ ಒತ್ತು ನೀಡಿ ಶಿಕ್ಷಕರಿಗೆ ಈಗಾಗಲೇ ತರಬೇತಿಯನ್ನು ನೀಡಿದೆ. ಒಳ ಮೀಸಲಾತಿ ಜಾರಿಗೆ ಪ.ಜಾತಿಯ ಜನಾಂಗದ ಕೂಗು. ಆದಿ ಕರ್ನಾಟಕ, ಆದಿ ದ್ರಾವಿಡ ಜಾತಿಗಳಲ್ಲಿನ ಉಪಜಾತಿಗಳ ಬಗ್ಗೆ 8 ಜಿಲ್ಲೆಗಳಲ್ಲಿ ಗೊಂದಲವನ್ನು ಉಂಟುಮಾಡಿದೆ. ಅಪ್ಲಿಕೇಷನ್‌ನಲ್ಲಿ ಜಾತಿ ಮತ್ತು ಉಪಜಾತಿ ಹೆಸರನ್ನು ನಮೂದಿಸಿ ಗೊಂದಲಗಳಿಗೆ ತೆರೆ ಎಳೆಯಬೇಕಿದೆ. 

  • ದಾಡಿ ವೆಂಕಟೇಶ್, ದಲಿತ ಮುಖಂಡ.

ವರದಿ- ಶ್ರೀನಿವಾಸ್‌ ಕೊರಟಗೆರೆ

Leave a Reply

Your email address will not be published. Required fields are marked *

× How can I help you?