ಕೊರಟಗೆರೆ: ರಾಜ್ಯದ ಮಹಾನಗರಪಾಲಿಕೆಗಳು, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಿಗಳ ವ್ಯಾಪ್ತಿಯಲ್ಲಿ ಎರಡು ದಶಕಕ್ಕಿಂತ ಹೆಚ್ಚು ಕಾಲದಿಂದ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ನೀರು ಸರಬರಾಜು ನೌಕರರು, ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಧ್ವನಿ ಎತ್ತಿದ್ದಾರೆ.
ಈ ನೌಕರರು ತನ್ನ ಜೀವನದ ಬಹುಮಟ್ಟಿನ ಸಮಯವನ್ನು ಸಾರ್ವಜನಿಕರಿಗೆ ನಿತ್ಯ ಅಗತ್ಯವಾದ ನೀರಿನ ಸೇವೆಯಲ್ಲಿ ಸಮರ್ಪಣೆಗಳೊಂದಿಗೆ ಕೊಡುಗೆ ನೀಡಿದರೂ, ಇದುವರೆಗೆ ಯಾವುದೇ ಸೇವಾ ಭದ್ರತೆ ಅಥವಾ ನೇರಪಾವತಿ ದೊರೆತಿಲ್ಲವೆಂಬ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
“ನಮ್ಮನ್ನು ಸರ್ಕಾರ ನೇರಪಾವತಿಯಡಿಯಲ್ಲಿ ತರದೇ ಹೊರಗುತ್ತಿಗೆಯಲ್ಲಿಯೇ ಕೆಲಸ ಮಾಡಿಸುತ್ತಿದ್ದು, ನಮ್ಮ ಕುಟುಂಬಗಳು ಆರ್ಥಿಕ ಅನಿಶ್ಚಿತತೆಗೆ ಒಳಗಾಗಿವೆ. ಹಬ್ಬ-ಹರಿದಿನಗಳಲ್ಲಿಯೂ ಕೂಡ ವಿಶ್ರಾಂತಿಯಿಲ್ಲದೆ ನೀರು ಸರಬರಾಜು ಸೇವೆಯಲ್ಲಿ ನಿರತರಾಗಿದ್ದೇವೆ. ಆದರೆ ಯಾವುದೇ ಭರವಸೆ ಈಡೇರಿಲ್ಲ,” ಎಂದು ಅವರು ದೂರಿದ್ದಾರೆ.

ಈ ಕುರಿತು ತಾಲೂಕು ತಹಶೀಲ್ದಾರ್ ಹಾಗೂ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದ ನೌಕರರು, ಈ ತಿಂಗಳೊಳಗಾಗಿ ನೇರಪಾವತಿ ನೀಡದಿದ್ದಲ್ಲಿ ಮುಂದಿನ ತಿಂಗಳು ರಾಜ್ಯಮಟ್ಟದ ನೀರು ಸರಬರಾಜು ಮುಷ್ಕರವನ್ನು ಹಮ್ಮಿಕೊಳ್ಳಬೇಕಾಗುವುದು ಅನಿವಾರ್ಯವೆಂದು ಎಚ್ಚರಿಸಿದ್ದಾರೆ.
ತಮ್ಮ ಸೇವೆಯ ಮಹತ್ವ ಹಾಗೂ ಸ್ಥಿರತೆಗಾಗಿ ಮಾನ್ಯ ಮುಖ್ಯಮಂತ್ರಿಗಳು, ಸರ್ಕಾರದ ಕಾರ್ಯದರ್ಶಿಗಳು ಹಾಗೂ ಸಂಬಂಧಪಟ್ಟ ಸಚಿವರುಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನೌಕರರು ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಅಧ್ಯಕ್ಷರು ನರಸಿಂಹ, ಉಪಾಧ್ಯ ಮುನಿಗೋಪಾಲ, ದೇವರಾಜು, ವೇಣು, ಮಂಜುನಾಥ್, ದೇವರಾಜು, ಲಿಂಗರಾಜು, ಇಮ್ರಾನ್, ರಾಮಕೃಷ್ಣ, ಬೀಮರಾಜು, ಹರೀಶ, ನವೀನ ಸೇರಿದಂತೆ ಇತರರು ಹಾಜರಿದ್ದರು.