ಕೊರಟಗೆರೆ: ಈಜಾಡಲು ತೆರಳಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವಿಗೀಡಾದ ಹೃದಯವಿದ್ರಾವಕ ಘಟನೆ ಕೊರಟಗೆರೆ ತಾಲೂಕಿನ ಕೋಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ತಿಮ್ಮಸಂದ್ರದ ಗೋಕುಲ್ ಕೆರೆಯಲ್ಲಿ ನಡೆದಿದೆ.
ವಂಶಿಹಳ್ಳಿ (ವಮಚ್ಚೆಹಳ್ಳಿ) ಗ್ರಾಮದ ಹನುಮಂತ ರಾಯಪ್ಪ ಅವರ ಪುತ್ರ ಹೇಮಂತ್ ಕುಮಾರ್ (ವಯಸ್ಸು 20) ಮೃತ ದುರ್ದೈವಿಯಾಗಿದ್ದು, ಈತ ದಾಬಾಸ್ ಪೇಟೆ ಬಳಿಯ ನಿಡವಂದ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಸೋಲಾರ್ ಫ್ಯಾಕ್ಟರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದನು.

ಮಧ್ಯಾಹ್ನ 2 ಗಂಟೆಗೆ ಕೆಲಸಕ್ಕೆ ಹೋಗಬೇಕಿದ್ದ ಹೇಮಂತ್, ಅಣ್ಣ ಹಾಗೂ ಸ್ನೇಹಿತರೊಂದಿಗೆ ಕೆಲಕಾಲ ರಜೆಯ ಮಜಾ ಅನುಭವಿಸಲು ತಿಮ್ಮಸಂದ್ರದ ಗೋಕುಲ್ ಕೆರೆಯತ್ತ ತೆರಳಿದ್ದ. ಈ ವೇಳೆ ಈಜು ಬಾರದ ಹೇಮಂತ್ ನೀರಿನಲ್ಲಿ ಮುಳುಗಿದ್ದು, ಜೊತೆಗಿದ್ದವರು ಶೋಧನೆ ನಡೆಸಿದರೂ ವಿಫಲರಾಗಿದ್ದರು. ನಂತರ ಸಾರ್ವಜನಿಕರ ನೆರವಿನಿಂದ ಕೆರೆಯ ನೀರಿನಿಂದ ಹೊರ ತೆಗೆಯಲಾದಾಗ ಹೇಮಂತ್ ಸಾವಿಗೀಡಾಗಿರುವುದು ಪತ್ತೆಯಾಯಿತು.
ಈ ಸಂಬಂಧ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಪಿಐ ಅನಿಲ್, ಎಸ್ಐ ಅಭಿಷೇಕ್ ಹಾಗೂ ಸಿಬ್ಬಂದಿ ಯೋಗೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ದುರ್ಘಟನೆ ಗ್ರಾಮಸ್ಥರಲ್ಲಿ ದುಃಖದ ಛಾಯೆ ಮೂಡಿಸಿದ್ದು, ಯುವಕನ ಆಕಸ್ಮಿಕ ಸಾವಿಗೆ ಎಲ್ಲೆಡೆ ಸಂತಾಪ ವ್ಯಕ್ತವಾಗಿದೆ.
ವರದಿ – ಶ್ರೀನಿವಾಸ್ ಟಿ., ಕೊರಟಗೆರೆ