ಕೊರಟಗೆರೆ-ಸರಕಾರಿ ಶಾಲೆಗಳ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಕುಸಿತ-ಮುಂದೆ ಹೀಗಾಗದಂತೆ ಎಚ್ಚರ ವಹಿಸಿ-ಉಸ್ತುವಾರಿ ಕಾರ್ಯಧರ್ಶಿ ತುಳಸಿ ಮದ್ದಿನೇನಿ ಎಚ್ಚರಿಕೆ

ಕೊರಟಗೆರೆ :- ಸರ್ಕಾರಿ ಶಾಲೆಗಳಲ್ಲಿ ಈ ಬಾರಿಯ ಶೈಕ್ಷಣಿಕ ಗುಣಮಟ್ಟ ಬಹಳ ಕ್ಷೀಣಿಸಿದೆ,ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಬಂದಿರುವ ಪಲಿತಾಂಶ ಶಿಕ್ಷಕರ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಂತಿದೆ. ಇದು ಮುಂದಿನ ದಿನಗಳಲ್ಲಿ ಮುಂದುವರಿಯದಂತೆ ಎಚ್ಚರಿಕೆ ವಹಿಸುವಂತೆ ಆಡಳಿತ ಸುಧಾರಣಾ ಇಲಾಖೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ ಶಿಕ್ಷಕರುಗಳಿಗೆ ಕಿವಿಮಾತು ಹೇಳಿದರು.

ಅವರು ಕೊರಟಗೆರೆ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿ ಮಧುಗಿರಿ ಶೈಕ್ಷಣಿಕ ಜಿಲ್ಲೆ, ಉಪ ನಿರ್ದೇಶಕರ ಕಾರ್ಯಾಲಯ ಮಧುಗಿರಿ,ಕೊರಟಗೆರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ವತಿಯಿಂದ ಭಾರತ ರತ್ನ ಡಾ. ಸರ್ವಪಲ್ಲಿ ರಾಧಾಕೃಷ್ಣನ್ 137ನೇ ಜನ್ಮ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕರುಗಳಿಗೆ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಾ, ಸರ್ಕಾರಿ ಶಾಲಾ ಶಿಕ್ಷಕರುಗಳು ಮಕ್ಕಳ ಕಲಿಕೆಗೆ ಶ್ರಮ ವಹಿಸದಿರುವುದು ವಿಪರ್ಯಾಸ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

ಖಾಸಗಿ ಶಿಕ್ಷಕರುಗಳಿಂದ ಸರ್ಕಾರಿ ಶಿಕ್ಷಕರು ಬೆಸ್ಟ್,ಆದರೂ ಶಿಕ್ಷಣ ಗುಣಮಟ್ಟದಲ್ಲಿ ಸರ್ಕಾರಿ ಶಾಲೆಗಳು ಹಿಂದುಳಿಯುತ್ತಿರುವುದು ವಿಪರ್ಯಾಸ,ಸಾರ್ವಜನಿಕರು ಕಟ್ಟುವ ಟ್ಯಾಕ್ಸ್ ನಿಂದ ನಮಗೆ ಸಂಬಳ ನೀಡುತ್ತಿರುವುದು,ಶಿಕ್ಷಣ ಗುಣಮಟ್ಟ ಹಿನ್ನಡೆಯಾದಾಗ ಸಾರ್ವಜನಿಕರು ಪ್ರಶ್ನೆ ಮಾಡಿದರೆ ಯಾರು ಉತ್ತರ ಕೊಡಬೇಕು ಎಂದು ತುಳಸಿ ಮದ್ದಿನೇನಿ ಬೇಸರ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇತ್ತೀಚಿಗೆ ನಡೆದ ಶೈಕ್ಷಣಿಕ ಗುಣಮಟ್ಟ ಪ್ರಗತಿ ಪರಿಶೀಲನಾ ಸಭೆಯಲ್ಲಿ ತುಮಕೂರು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡುತ್ತಾ ಇತ್ತೀಚೆಗೆ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಫಲಿತಾಂಶ ಶೇಕಡ 30% ಅಷ್ಟೇ ಬಂದಿದೆ.ಶೈಕ್ಷಣಿಕ ಗುಣಮಟ್ಟದ ಹಿನ್ನೆಡೆಗೆ ಕಾರಣ ಹುಡುಕಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಫಲಿತಾಂಶ ಬರುವಂತೆ ಕೆಲಸವಾಗಬೇಕು ಎಂದು ತಾಕೀತು ಮಾಡಿದ್ದಾರೆ.ಇದರ ಬಗ್ಗೆ ಪ್ರತಿಯೊಬ್ಬ ಶಿಕ್ಷಕರು ಕಾರ್ಯಪ್ರವೃತ್ತರಾಗಿ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಉತ್ತಮ ಫಲಿತಾಂಶಕ್ಕೆ ಶ್ರಮಹಿಸಬೇಕು ಎಂದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ ಪರಮೇಶ್ವರ ರವರ ವಿಶೇಷ ಅಧಿಕಾರಿ ನಾಗಯ್ಯ ಮಾತನಾಡಿ
ಕ್ಯಾಬಿನೆಟ್ ಮೀಟಿಂಗ್ ಇರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ‌. ಜಿ ಪರಮೇಶ್ವರ್ ಅವರು ಭಾಗವಹಿಸಲು ಸಾಧ್ಯವಾಗಿಲ್ಲ.ಅವರ ಸಂದೇಶವನ್ನು ನಮ್ಮ ಮೂಲಕ ಕಳಿಸಲಾಗಿದೆ.ರಾಜ್ಯ ಕಂಡ ಶಿಕ್ಷಣ ತಜ್ಞ ಸರ್ವಪಲ್ಲಿ ರಾಧಾಕೃಷ್ಣನ್ ಅವರ ತತ್ವ ಸಿದ್ಧಾಂತ ಆದರ್ಶ ಪ್ರತಿಯೊಬ್ಬ ಶಿಕ್ಷಕರು ಮೈಗೂಡಿಸಿಕೊಳ್ಳಬೇಕು.ಶಿಕ್ಷಣ ಗುಣಮಟ್ಟ ಹೆಚ್ಚಿಸುವಂತಹ ನಿಟ್ಟಿನಲ್ಲಿ ಪ್ರತಿಯೊಬ್ಬ ಶಿಕ್ಷಕರು ಕೈಜೋಡಿಸುವಂತಾಗಬೇಕು ಎಂದರು.

ತಹಸೀಲ್ದಾರ್ ಕೆ ಮಂಜುನಾಥ್ ಮಾತನಾಡಿ ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ಒಬ್ಬ ಭಾರತೀಯ ತತ್ವಜ್ಞಾನಿ ಮತ್ತು ರಾಜಕಾರಣಿಯಾಗಿದ್ದು, ತುಲನಾತ್ಮಕ ಧರ್ಮ ಮತ್ತು ತತ್ವಶಾಸ್ತ್ರದ ಅಗ್ರಗಣ್ಯ ವಿದ್ವಾಂಸರಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ಹೆಸರು ಮುಂಚೂಣಿಯಲ್ಲಿದೆ.ಪಾಶ್ಚಿಮಾತ್ಯ ಆದರ್ಶವನ್ನು ಭಾರತೀಯ ತತ್ವಶಾಸ್ತ್ರಕ್ಕೆ ಪರಿಚಯಿಸಿದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಆದರ್ಶ ತತ್ವ ಸಿದ್ಧಾಂತ ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಉತ್ತಮ ಸಾಧನೆಗೈದ ಶಿಕ್ಷಕರುಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಎಂಪ್ರೆಸ್ ಕಾಲೇಜಿನ ಉಪನ್ಯಾಸಕ ನಂದೀಶ್ ಪಿ.ಕೆ, ಮಧುಗಿರಿ ಜಿಲ್ಲಾಶಿಕ್ಷಕರ ಸಮಿತಿ ಉಪ ನಿರ್ದೇಶಕ ಗಂಗಾಧರ್, ಮಧುಗಿರಿ ವಿಭಾಗಾಧಿಕಾರಿ ಗೋಟೂರು ಶಿವಪ್ಪ ನೋಡಲ್ ಅಧಿಕಾರಿ ರಾಜಣ್ಣ ಜಿಲ್ಲಾ ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸಿದ್ದೇಶ್ವರ ಕೆ.ಟಿ, ಬಿಇಒ ನಟರಾಜು, ಜಿಲ್ಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಚೆನ್ನಿಗರಾಮಯ್ಯ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೋಟೆಕಲ್ಲಯ್ಯ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

—————-ಶ್ರೀನಿವಾಸ್ ಕೊರಟಗೆರೆ

Leave a Reply

Your email address will not be published. Required fields are marked *

× How can I help you?