ಕೊಟ್ಟಿಗೆಹಾರ: ಕೆಳಗೂರು ಸಮೀಪದ ಮೇಗೂರು’ಎ’ವಿಭಾಗ ಟೀ ತೋಟದಲ್ಲಿ ಭಾನುವಾರ ಮಧ್ಯರಾತ್ರಿ ಒಂಟಿ ಸಲಗವೊಂದು ದಾಳಿ ನಡೆಸಿ ತೋಟದ ಲೈನ್ ಸಮೀಪ ಹಾಕಿರುವ ಬಾಳೆಗಿಡ ಹಾಗೂ ಕಾಫಿ ಗಿಡಗಳನ್ನು ತುಳಿದು ಹಾನಿ ಮಾಡಿದೆ.
ಭಾನುವಾರ ರಾತ್ರಿ ಟೀ ಪ್ಯಾಕ್ಟರಿಯ ಟೀ ಮೇಕರ್ ಸುಧಾಕರ್ ಅವರ ಮನೆಯ ಮುಂದೆ ಲದ್ದಿ ಹಾಕಿ ಕಾಡಾನೆ ಕೂಗಿದಾಗ ಲೈನ್ ನಲ್ಲಿ ವಾಸ್ತವ್ಯ ಇದ್ದ ಕಾರ್ಮಿಕರು ಭಯಭೀತರಾಗಿದ್ದಾರೆ.ಅದೃಷ್ಟ ವಶಾತ್ ಯಾರೂ ಹೊರ ಬಂದಿಲ್ಲ.ಲೈನ್ ಬಳಿ ದಾಂದಲೇ ನಡೆಸಿದ ಕಾಡಾನೆ ಒಂದು ಗಂಟೆಗೂ ಅಧಿಕ ಕಾಲ ಅಲ್ಲೇ ಇದ್ದು ಸುತ್ತಮುತ್ತಲ ಬಾಳೆಗಿಡ ತುಳಿದು ಹಾನಿ ಮಾಡಿ ನಂತರ ಅಲ್ಲಿಂದ ತೆರಳಿದೆ.
ಒಂಟಿ ಸಲಗ ಸ್ಥಳಾಂತರಕ್ಕೆ ಒತ್ತಾಯ:
ಚಾರ್ಮಾಡಿ ಘಾಟ್, ಬಿದಿರುತಳ,ಆಲೇಕಾನ್, ಮಲೆಮನೆ ಮಾರ್ಗದ ಮೂಲಕ ಒಂಟಿ ಸಲಗ ಮೇಗೂರಿಗೆ ಬಂದಿದೆ.ಟೀ ಎಸ್ಟೇಟಿನಲ್ಲಿ ಹಲವು ಕಾರ್ಮಿಕರು ಜೀವನ ನಡೆಸುತ್ತಿದ್ದಾರೆ.ಈ ಒಂಟಿ ಸಲಗ ಹಗಲಿನಲ್ಲಿ ಬಂದಿದ್ದರೆ ಕೂಲಿ ಕಾರ್ಮಿಕರ ಮೇಲೆ ದಾಳಿ ಮಾಡುತ್ತಿತ್ತು.ರಾತ್ರಿ ಬಂದಿದ್ದರಿಂದ ದೊಡ್ಡ ದುರಂತ ತಪ್ಪಿದೆ.ಈ ಭಾಗದಲ್ಲಿ ಒಂದು ಒಂಟಿ ಸಲಗ ಆಗಾಗ ಬರುತ್ತಿದೆ.ಸಂಬಂಧಿಸಿದ ಅರಣ್ಯ ಅಧಿಕಾರಿಗಳು ಒಂಟಿ ಸಲಗವನ್ನು ಸ್ಥಳಾಂತರಿಸಬೇಕು ಎಂದು ಕಾರ್ಮಿಕ ಜಾನ್ ನೊರೋನ್ಹ ಆಗ್ರಹಿಸಿದ್ದಾರೆ.