ಕೊಟ್ಟಿಗೆಹಾರ-ಚಾರ್ಮಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿಯನ್ನು ದ್ವಿಪಥವನ್ನಾಗಿ ಅಭಿವೃದ್ಧಿ ಪಡಿಸಲು ಸರ್ಕಾರ 343.74 ಕೋಟಿ ರೂ. ಅನುದಾನ ಬಿಡುಗಡೆ ಮಾಡಿರುವ ಹೇಳಿಕೆ ಬೆನ್ನಲ್ಲೇ ಗಂಭೀರ ಚರ್ಚೆಗಳು ಆರಂಭವಾಗಿವೆ.
ಹಣ ಬಿಡುಗಡೆ ಬಗ್ಗೆ ಮಾಹಿತಿ ನೀಡಿರುವ ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಮಂಗಳೂರಿನಿಂದ ಮೂಡಿಗೆರೆ–ತುಮಕೂರಿಗೆ ಸಂಪರ್ಕಿಸುವ ಚಾರ್ಮಾಡಿ ಘಾಟಿಯಲ್ಲಿ 75 ಕಿ.ಮೀ ನಿಂದ 86.20 ಕಿ.ಮೀ. ರಸ್ತೆ ದ್ವಿಪಥವಾಗಿ ಅಗಲೀಕರಣಗೊಳ್ಳಲಿದೆ ಎಂದಿದ್ದಾರೆ.
ರಾಜ್ಯದ ಪ್ರಮುಖ ಹೆದ್ದಾರಿ ಚಾರ್ಮಾಡಿ ಘಾಟ್‌ನ್ನು ಮೇಲ್ದರ್ಜೆಗೇರಿಸುವುದರಿಂದ ಕರಾವಳಿ ಭಾಗದ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲದ ಜೊತೆಗೆ ಸುಗಮ ಸರಕು ಸಾಗಣೆಯೊಂದಿಗೆ ಈ ಭಾಗದ ವ್ಯಾಪಾರ-ವಹಿವಾಟು ಕೂಡ ವೃದ್ಧಿಸಲಿದೆ ಎನ್ನುವುದು ಸಂಸದರ ಅಭಿಪ್ರಾಯ.
ಮತ್ತೊಂದು ದುರಂತ ?
ಚಾರ್ಮಾಡಿ ರಸ್ತೆಗೆ ಅಭಿವೃದ್ಧಿಗೆ ಹಣ ಬಿಡುಗಡೆ ಆಗಿರುವುದು ಸಂತೋಷ, ಆದರೆ ಸರಿಯಾದ ಕ್ರಿಯಾ ಯೋಜನೆ ಇಲ್ಲದೆ ರಸ್ತೆ ಮಾಡಲು ಹೊರಟಿರೋದು ಮತ್ತೊಂದು ಶಿರಾಡಿ ಘಾಟ್ ದುರಂತದಂತೆ ಆಗುವುದಿಲ್ಲವೇ ಎನ್ನುವ ಪ್ರಶ್ನೆ ಎದುರಾಗಿದೆ.
ದ್ವಿಪಥ ಮಾಡಲು ಜಾಗವೇ ಇಲ್ಲ.ಸ್ವಲ್ಪ ಜಾಸ್ತಿ ಹಣ ಖರ್ಚಾದರೂ ಸರಿಯೇ, ಉತ್ತಮವಾದ ಸುರಂಗ ಮಾರ್ಗ ಅಥವಾ ಫ್ಲೈ ಓವರ್ ರೀತಿಯ ಕ್ರಿಯಾ ಯೋಜನೆ ಮಾಡಿ,ಆಗು ಹೋಗುಗಳ ಬಗ್ಗೆ ಚರ್ಚಿಸಿ ಉತ್ತಮವಾದ ರಸ್ತೆ ನಿರ್ಮಿಸಿ ಎನ್ನುವ ಸಲಹೆ ಚಾರ್ಮಾಡಿ ರಸ್ತೆ ಉಳಿಸಿ ಹೋರಾಟ ಸಮಿತಿ ಸಂಚಾಲಕ ಸಂಜಯ್ ಕೊಟ್ಟಿಗೆಹಾರರವರದು.
ಅಭಿವೃದ್ಧಿಯ ಹೆಸರಲ್ಲಿ ಸುಮಾರು 10 ವರ್ಷಗಳ ಕಾಲ ರಸ್ತೆ ಮುಚ್ಚುವ ಹುನ್ನಾರ ನಡೆದಿದೆ,3 ವಿಭಾಗದ ಟೆಂಡರ್ ಆಗಿದ್ದು ಒಂದು ವಿಭಾಗದ ರಸ್ತೆ ಮಾಡಲು 5 ವರ್ಷ ಬೇಕು,ಹೀಗಾದರೆ ಕೊಟ್ಟಿಗೆಹಾರ ಹತ್ತು ವರ್ಷಗಳಲ್ಲಿ ನಿರ್ನಾಮವಾಗಲಿದೆ ಎನ್ನುವ ಆತಂಕ ಹೊರ ಹಾಕಿ ನಮಗೇನು ದ್ವಿಪಥ ರಸ್ತೆ ಬೇಕಾಗಿಲ್ಲ.ಗುಂಡಿ ಮುಚ್ಚಿದರೆ ಸಾಕು ಎಂದಿದ್ದಾರೆ.
ದ್ವಿಪಥ ರಸ್ತೆ ನಿರ್ಮಾಣದಿಂದ ವಿದ್ಯಾರ್ಥಿಗಳಿಗೆ ಹಾಗೂ ದಕ್ಷಿಣ ಕನ್ನಡದಲ್ಲಿರುವ ಆಸ್ಪತ್ರೆಗಳಿಗೆ ತೆರಳಲು ರೋಗಿಗಳಿಗೆ ಬಹಳ ತೊಂದರೆ ಆಗಲಿದೆ.ಎಲ್ಲರೂ ಕೈ ಜೋಡಿಸಿದರೆ ಒಂದು ದೊಡ್ಡ ಮಟ್ಟದ ಹೋರಾಟ ಮಾಡೋಣ ಎಂದು ತಿಳಿಸಿರುವ ಸಂಜಯ್ ಕೊಟ್ಟಿಗೆಹಾರ ಹೋರಾಟದ ರೂಪುರೇಷೆ ನಿರ್ಧರಿಸಲು ಸಭೆಯನ್ನು ಕರೆಯಲಾಗಿದೆ ಎಂದಿದ್ದಾರೆ.
—–ಆಶಾ ಸಂತೋಷ್