ಕೊಟ್ಟಿಗೆಹಾರ:ಕನ್ನಡ ನೆಲೆ,ಭಾಷಾ ಸಂಸ್ಕೃತಿ ಉಳಿಸುವುದು ನಮ್ಮ ಆಧ್ಯ ಕರ್ತವ್ಯವಾಗಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.
ಅವರು ಬಣಕಲ್,ಕೊಟ್ಟಿಗೆಹಾರದಲ್ಲಿ ಕನ್ನಡ ಜ್ಯೋತಿ ರಥದ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದರು.
‘ಕನ್ನಡ ಭಾಷೆಯ ಜನಜಾಗೃತಿ ಮೂಡಿಸಲು ಕಳೆದ ತಿಂಗಳಿನ ಕೊನೆಯ ದಿನ ಚಿಕ್ಕಮಗಳೂರು ಜಿಲ್ಲೆಗೆ ಕನ್ನಡ ರಥ ಪ್ರವೇಶಿಸಿದೆ.ಈ ನಿಟ್ಟಿನಲ್ಲಿ ಶಾಲಾ ಮಕ್ಕಳು, ಕನ್ನಡ ಪರ ಸಂಘಟನೆಗಳು ರಥಯಾತ್ರೆಗೆ ಬೆಂಬಲ ನೀಡಿವೆ’ಎಂದರು.
ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಡಿ.ಕೆ.ಲಕ್ಷ್ಮಣಗೌಡ ಮಾತನಾಡಿ’ ಇದು ಕನ್ನಡ ನಾಡಿನ ಜನತೆಗೆ ವಿಶೇಷ ಹಬ್ಬವಾಗಿದ್ದು, ಕನ್ನಡ ಭಾಷಾಭಿಮಾನ ಮೂಡಿಸುವ ನಿಟ್ಟಿನಲ್ಲಿ ರಥದ ನಿತ್ಯೋತ್ಸವ ನಡೆಯುತ್ತಿದೆ.ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಹಾಗೂ ಹೋಬಳಿ ಮಟ್ಟಗಳಲ್ಲಿ ರಥಕ್ಕೆ ಭವ್ಯ ಸ್ವಾಗತ ನೀಡಲಾಗಿದೆ.ನಮ್ಮ ಭಾಷೆಯ ಅರಿವನ್ನು ಮೂಡಿಸಲು ಈ ರಥ ನೆರವಾಗಲಿದೆ’ಎಂದರು.
ಈ ಸಂದರ್ಭದಲ್ಲಿ ಬಣಕಲ್ ಹೋಬಳಿ ಕಸಾಪ ಘಟಕದ ಅಧ್ಯಕ್ಷ ಬಿ.ಕೆ.ಲೋಕೇಶ್,ಕರವೇ ಬಣಕಲ್ ಘಟಕದ ಅಧ್ಯಕ್ಷ ಅಶ್ರಫ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲ,ಉಪಾಧ್ಯಕ್ಷೆ ಸ್ವರೂಪ ಪ್ರಶಾಂತ್,ಸದಸ್ಯರಾದ ಎ.ಎನ್, ರಘು,ಕಸಾಪ ಗೌರವ ಕಾರ್ಯದರ್ಶಿ ಭಕ್ತೇಶ್, ಕೋಶಾಧ್ಯಕ್ಷ ರಾಮಚಂದ್ರ,ಸಂಗಮ್, ಸುರೇಶ್,ರಂಜಿತ್ ಕೋಗಿಲೆ,ರಿವರ್ ವ್ಯೂವ್ ಶಾಲೆಯ ಮುಖ್ಯಸ್ಥ ಮೊಹಮ್ಮದ್ ಇಮ್ರಾನ್,ಅತ್ತಿಗೆರೆ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರು ಹಾಗೂ ಗ್ರಾ.ಪಂ.ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಇದ್ದರು.