ಕೆ.ಆರ್.ಪೇಟೆ-ಸಾಮಾಜಿಕ ಕಳಕಳಿಯ ಅಪರೂಪದ ವ್ಯಕ್ತಿ ಶ್ರೀನಿವಾಸ್-ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಎ.ಬಿ.ಕುಮಾರ್ ಅಭಿಮತ

ಕೆ.ಆರ್.ಪೇಟೆ: ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಎ.ಬಿ.ಕುಮಾರ್ ನೇತೃತ್ವದಲ್ಲಿ
ತಾಲ್ಲೂಕಿನ ಹಿರಿಯ ಪತ್ರಕರ್ತರು ಹಾಗೂ ಅಗ್ರಹಾರಬಾಚಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಆರ್.ಶ್ರೀನಿವಾಸ್ ಅವರಿಗೆ ಹೃದಯ ಸ್ಪರ್ಷಿಯಾಗಿ ಸನ್ಮಾನಿಸಿ ಗೌರವಿಸುವ ಮೂಲಕ ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರಲಾಯಿತು.

ಈ ವೇಳೆ ಮಾತನಾಡಿದ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಎ.ಬಿ.ಕುಮಾರ್ ಅವರು ಪತ್ರಕರ್ತರಾಗಿರುವ ಆರ್.ಶ್ರೀನಿವಾಸ್ ಅವರು ನಮ್ಮ ಗ್ರಾಮದ ಅಪರೂಪದ ಪ್ರತಿಭೆಯಾಗಿದ್ದು, ಗ್ರಾಮದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ನನ್ನ ಗ್ರಾಮ ಎಂಬ ಭಾವನೆಯಿಂದ ಕೆಲಸ ಮಾಡುತ್ತಾ ಬಂದಿದ್ದಾರೆ. 1999ರಲ್ಲಿ ಕ್ಷೇತ್ರದ ಶಾಸಕರಾಗಿದ್ದ ಕೆ.ಬಿ.ಚಂದ್ರಶೇಖರ್ ಅವರ ಸಲಹೆಯ ಮೇರೆಗೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಎಸ್.ಡಿ.ಎಂ.ಸಿ ಸದಸ್ಯರಾಗಿ ಆಯ್ಕೆಗೊಂಡು ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ್ದರು.

2001ರಲ್ಲಿ ಗ್ರಾಮದ ಸಾಕ್ಷರತಾ ಆಂದೋಲನ ಸಮಿತಿಯ ಮುಖ್ಯಸ್ಥರಾಗಿ ಗ್ರಾಮದಲ್ಲಿ ಸಾಕ್ಷರತೆಯ ಪ್ರಮಾಣವನ್ನು ಹೆಚ್ಚಿಸಲು ಸೇವಾ ಭಾವನೆಯಿಂದ ಕೆಲಸ ಮಾಡಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಪತ್ರಿಕೆಗಳ ವಾಚಕರ ವಾಣಿಗೆ ಲೇಖನಗಳನ್ನು ಬರೆಯುವ ಮೂಲಕ ಸಮಸ್ಯೆಗಳನ್ನು ಪತ್ರಿಕೆಗಳಲ್ಲಿ ಅನಾವರಣ ಮಾಡಿ, ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವ ಕೆಲಸ ಮಾಡಿದ್ದರು. ನಂತರ ವಿವಿಧ ಪತ್ರಿಕೆಗಳ ಪ್ರತಿನಿಧಿಯಾಗಿ ನಂತರ ಬಡ್ತಿ ಪಡೆದು ವರದಿಗಾರರಾಗಿ ಕ್ರಿಯಾಶೀಲವಾಗಿ, ಅರ್ಪಣಾ ಭಾವನೆಯಿಂದ ಕೆಲಸ ಮಾಡುತ್ತಾ ಬಂದಿದ್ದಾರೆ. ಇವರ ಪತ್ರಿಕಾ ಕ್ಷೇತ್ರದ ಸಾಧನೆಯ ಹಿನ್ನೆಲೆಯಲ್ಲಿ ನಮ್ಮ ಅಗ್ರಹಾರಬಾಚಹಳ್ಳಿ ಗ್ರಾಮಕ್ಕೆ ಹೊಂದಿಕೊಂಡಿರುವ ಚಿಲ್ಲದಹಳ್ಳಿ ಗ್ರಾಮದ ವಾರ್ಡಿನಿಂದ ಗ್ರಾಮ ಪಂಚಾಯಿತಿ ಸದಸ್ಯರಾಗಿ ಭಾರೀ ಬಹುಮತದಿಂದ ಆಯ್ಕೆಗೊಂಡು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ.

ತಾವು ಚುನಾಯಿತರಾಗಿರುವ ಚಿಲ್ಲದಹಳ್ಳಿ ಗ್ರಾಮದಲ್ಲಿ ಸುಮಾರು 30ಲಕ್ಷ ರೂ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ, ಬಾಕ್ಸ್ ಡ್ರೈನೇಜ್ ಮಾಡಿಸಿರುತ್ತಾರೆ. ಸೋಲಾರ್ ಬೀದಿ ದೀಪಗಳನ್ನು ತಮ್ಮ ಗ್ರಾಮ ಪಂಚಾಯಿತಿ ನಿಧಿಯಿಂದ ಅಳವಡಿಸಿ ಕೊಟ್ಟಿರುತ್ತಾರೆ . ಈ ಮೂಲಕ ಚಿಲ್ಲದಹಳ್ಳಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಪರಿವರ್ತನೆ ಮಾಡುವಲ್ಲಿ ಅಪಾರವಾಗಿ ಶ್ರಮಿಸಿದ್ದಾರೆ. ಹೀಗೆ ಗ್ರಾಮಾಭಿವೃದ್ದಿಗೆ ಒತ್ತು ನೀಡುವ ಮೂಲಕ ಒಳ್ಳೆಯ ಹೆಸರು ಪಡೆದುಕೊಂಡಿರುವ ಶ್ರೀನಿವಾಸ್ ಅವರ ಸಮಾಜಮುಖಿ ಕಳಕಳಿಯು ಇತರೆ ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಮಾದರಿಯಾಗಿದೆ.
ಇಂತಹ ಅಪರೂಪದ ಪತ್ರಕರ್ತರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀನಿವಾಸ್ ಅವರ ಹುಟ್ಟು ಹಬ್ಬದ ಈ ಸಂದರ್ಭದಲ್ಲಿ ಅವರಿಗೆ ದೇವರು ಆಯಸ್ಸು, ಆರೋಗ್ಯ, ಐಶ್ವರ್ಯ ನೀಡಿ ಕಾಪಾಡಲಿ ಎಂದು ಎ.ಬಿ.ಕುಮಾರ್ ಶುಭ ಹಾರೈಸಿದರು.

ಶ್ರೀನಿವಾಸ್ ಅವರ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಸಹಪಾಠಿ ಎ.ಎಸ್.ಅಶೋಕ್ ಕುಮಾರ್ ಮಾತನಾಡಿ ಮಿತಭಾಷಿಕರಾಗಿರುವ ಶ್ರೀನಿವಾಸ್ ಯಾವತ್ತೂ ನಾನು ಪತ್ರಕರ್ತ, ಗ್ರಾಮ ಪಂಚಾಯಿತಿ ಸದಸ್ಯ ಎಂಬ ಹಮ್ಮುಬಿಮ್ಮು ತೋರಿಸಿದವರಲ್ಲ. ನಮ್ಮ ಗ್ರಾಮದ ಯಾವುದೇ ಕಾರ್ಯಕ್ರಮ ನಡೆದರೂ ನಾಲ್ಕಾರು ಪತ್ರಿಕೆಗಳಲ್ಲಿ ಆ ಸುದ್ದಿಯನ್ನು ಪ್ರಸಾರ ಮಾಡಿಸಿಕೊಡುವ ಮೂಲಕ ಗ್ರಾಮದ ಎಲ್ಲ ಜನರ ಪ್ರೀತಿ ವಿಶ್ವಾಸಕ್ಕೆ ಭಾಜನರಾಗಿರುತ್ತಾರೆ ಇಂತಹ ಅಪರೂಪದ ಸರಳ ವ್ಯಕ್ತಿತ್ವ ಹೊಂದಿರುವ ಶ್ರೀನಿವಾಸ್ ಅವರು ನನ್ನ ಕುಚುಕು ಗೆಳೆಯ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಎನಿಸುತ್ತದೆ ಎಂದು ತಿಳಿಸಿದರು.



ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಎ.ಬಿ.ಕುಮಾರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಹೆಚ್.ವಿ.ಸತೀಶ್, ಹೆಮ್ಮನಹಳ್ಳಿ ತಮ್ಮಣ್ಣ, ದೊಡ್ಡಗಾಡಿಗನಹಳ್ಳಿ ಲೋಕೇಶ್, ಪತ್ರಕರ್ತರಾದ ಜಗದೀಶ್, ರಂಗನಾಥ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದು ಶ್ರೀನಿವಾಸ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿದರು.

Leave a Reply

Your email address will not be published. Required fields are marked *