ಕೆ.ಆರ್.ಪೇಟೆ: ತಾಲ್ಲೂಕಿನ ಬೂಕನಕೆರೆ ವಿವಿದೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬೆಟ್ಟದ ಹೊಸೂರು ಪ್ರಕಾಶ್ ಹಾಗೂ ಉಪಾಧ್ಯಕ್ಷರಾಗಿ ಗಾಯತ್ರಿ ಶಿವಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬೂಕನಕೆರೆ ಸೊಸೈಟಿ ನೂತನ ಆಡಳಿತ ಮಂಡಳಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗಿತ್ತು. ಅಧ್ಯಕ್ಷ ಸ್ಥಾನ ಬಯಸಿ ಪ್ರಕಾಶ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಗಾಯತ್ರಿಶಿವಣ್ಣ ಅವರನ್ನು ಹೊರತು ಪಡಿಸಿ ಬೇರೆ ಯಾರೂ ನಾಮಪತ್ರವನ್ನು ಸಲ್ಲಿಸದೇ ಇರುವ ಕಾರಣ ಅಧ್ಯಕ್ಷರಾಗಿ ಪ್ರಕಾಶ್ ಹಾಗೂ ಉಪಾಧ್ಯಕ್ಷರಾಗಿ ಗಾಯತ್ರಿ ಶಿವಣ್ಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಘೋಷಣೆ ಮಾಡಿದರು.
ನೂತನ ಅಧ್ಯಕ್ಷರು ಉಪಾಧ್ಯಕ್ಷರನ್ನು ಸಂಘದ ನಿರ್ದೇಶಕರು,ಸೊಸೈಟಿ ವ್ಯಾಪ್ತಿಯ ಮುಖಂಡರು ಪಕ್ಷಾತೀತವಾಗಿ ಅಭಿನಂದಿಸಿದರು.
ತಾ.ಪಂ.ಮಾಜಿ ಸದಸ್ಯ ಹೆಳವೇಗೌಡ(ಹುಲ್ಲೇಗೌಡ) ಮಾತನಾಡಿ ಸಹಕಾರ ಸಂಘಗಳು ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಹೆಚ್ಚಿನ ಮಹತ್ವದ ಪಾತ್ರವನ್ನು ವಹಿಸುತ್ತವೆ. ಸಹಕಾರ ಸಂಘಗಳಲ್ಲಿ ರಾಜಕೀಯವನ್ನು ಬದಿಗೊತ್ತಿ ಸಂಘದ ಲಾಭವನ್ನು ದ್ವಿಗುಣ ಗೊಳಿಸಲು ಹೆಚ್ಚು ಒತ್ತು ನೀಡಬೇಕು. ಸಂಘದ ಅಭಿವೃದ್ಧಿಯ ದೃಷ್ಟಿಯಿಂದ ಪಕ್ಷಾತೀತವಾಗಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಲು ಸಹಕಾರ ನೀಡಿದ ಎಲ್ಲಾ ಪಕ್ಷದ ಮುಖಂಡರು ಹಾಗೂ ನಿರ್ದೇಶಕರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸಂಘದ ಅಧ್ಯಕ್ಷರಾದವರಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ.ಎಲ್ಲಾ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವಂತೆ ಸಲಹೆ ನೀಡಿದರು. ಸಂಘಕ್ಕೆ ಹೆಚ್ಚೆಚ್ಚು ಷೇರುದಾರರನ್ನು ಸೇರಿಸಿಕೊಂಡು ವಾಣಿಜ್ಯ ಬ್ಯಾಂಕುಗಳಿಗಿಂತ ಹೆಚ್ಚು ಕಾರ್ಯನಿರ್ವಹಿಸಬೇಕು. ಸಂಘಕ್ಕೆ ಷೇರುದಾರರು, ರೈತರು, ಮಹಿಳೆಯರು ಜೀವಾಳವಾಗಿರುವುದರಿಂದ ರೈತರಿಗೆ ಸಮಯಕ್ಕೆ ಸಾಲ ವಿತರಣೆ ಮಾಡಿ ನಂತರ ಸಾಲ ಮರುಪಾವತಿಯನ್ನು ಸಕಾಲಕ್ಕೆ ಮಾಡಬೇಕು. ಸಂಘವು ಉಳಿದರೆ ನಾವುಗಳು ಉಳಿದಂತೆ.ನಾವುಗಳು ಚೆನ್ನಾಗಿದ್ದರೆ ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬೆಟ್ಟದ ಹೊಸೂರು ಪ್ರಕಾಶ್ ಮಾತನಾಡಿ ನನ್ನನ್ನು ಅವಿರೋಧವಾಗಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಸಹಕಾರ ನೀಡಿದ ಪಕ್ಷಾತೀತವಾಗಿ ಅಂದರೆ ಜೆಡಿಎಸ್,ಬಿಜೆಪಿ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರು ಹಾಗೂ ನನ್ನ ಸಹೋದ್ಯೋಗಿಗಳಿಗೆ ತುಂಬು ಹೃದಯದ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ನಾನು ಚುನಾವಣಾ ಸಂದರ್ಭದಲ್ಲಿ ಜೆಡಿಎಸ್ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿದು ಆಯ್ಕೆಯಾಗಿದ್ದೆ.ಆದರೆ ನೂತನ ಅಡಳಿತ ಮಂಡಳಿಯ ಅಧ್ಯಕ್ಷ ಚುನಾವಣೆಯಲ್ಲಿ ಎಲ್ಲಾ ಪಕ್ಷದ ಮುಖಂಡರ ಸಹಕಾರದಿಂದ ಅಧ್ಯಕ್ಷ ಸ್ಥಾನದ ಚುಕ್ಕಾಣಿ ಹಿಡಿದಿದ್ದೇನೆ.

ನನ್ನ ಮೇಲೆ ನಂಬಿಕೆ ಇಟ್ಟು ಹೆಚ್ಚಿನ ಜವಾಬ್ದಾರಿ ನೀಡಿರುವ ತಮಗೆಲ್ಲರಿಗೂ ಅಭಾರಿಯಾಗಿದ್ದೇನೆ.ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ಯಾವುದೇ ಚ್ಯುತಿ ಬಾರದಂತೆ ನನ್ನ ಅಧಿಕಾರದ ಅವಧಿಯಲ್ಲಿ ಕಾಯಾ ವಾಚಾ ಮನಸ್ಸಿನಿಂದ ಕೆಲಸವನ್ನು ಪಕ್ಷಾತೀತವಾಗಿ ಪ್ರಾಮಾಣಿಕವಾಗಿ ದುಡಿಯುತ್ತೇನೆ ಎಂದು ಭರವಸೆ ನೀಡುತ್ತೇನೆ.ಎಲ್ಲರ ವಿಶ್ವಾಸಕ್ಕೆ ಪಾತ್ರರಾಗಿ ಸಂಘದ ಶ್ರೇಯೋಭಿದ್ದಿಗೆ ಹಗಲಿರುಳು ದುಡಿಯುತ್ತೇನೆ ಎಂದು ಸಂಘದ ನೂತನ ಅಧ್ಯಕ್ಷ ಪ್ರಕಾಶ್ ತಿಳಿಸಿದರು.
ಈ ಸಂದರ್ಭದಲ್ಲಿ ಬೂಕನಕೆರೆ ಗ್ರಾಮ ಪಂಚಾಯತಿ ಅಧ್ಯಕ್ಷ ಶ್ಯಾಂಪ್ರಸಾದ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಣ್ಣೇನಹಳ್ಳಿ ಧನಂಜಯ, ಗ್ರಾ.ಪಂ.ಸದಸ್ಯ ರವಿಕುಮಾರ್, ಸಂಘದ ನೂತನ ಉಪಾಧ್ಯಕ್ಷೆ ಗಾಯತ್ರಿಶಿವಣ್ಣ, ಸಂಘದ ನಿರ್ದೇಶಕರಾದ ಜ್ಞಾನೇಂದ್ರಪ್ಪ, ಮನು, ಮಹೇಶ್ ಅಡಿಕೆ ಸ್ವಾಮಿಗೌಡ, ಕುಮಾರ್, ಉಮೇಶ್, ಸಂದೀಪ್, ಕಾಳಮ್ಮಗೋವಿಂದಯ್ಯ, ಲಕ್ಷ್ಮಮ್ಮ, ಶೃತಿಹರೀಶ್, ರಾಜೇಶ್ ನಾಯ್ಕ, ಶೀಳನೆರೆ ರಾಘು,ಬಂಕ್ ಮಂಜು,ಜೆಸಿಬಿ ರಾಜೇಶ್, ಮಿಲ್ ರಾಜೇಶ್,ಸ್ವಾಮಿಗೌಡ ಇತರರು ಅಭಿನಂದಿಸಿದರು.
- ಶ್ರೀನಿವಾಸ ಆರ್.