ಕೆ.ಆರ್.ಪೇಟೆ : ಚಾಲಕನ ನಿಯಂತ್ರಣ ತಪ್ಪಿ ಕೆ.ಎಸ್.ಆರ್.ಟಿ.ಸಿ ಬಸ್ಸೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸುಮಾರು 35 ಮಂದಿಗೆ ತೀವ್ರ ಸ್ವರೂಪದ ಗಾಯಗಳಾಗಿರುವ ಘಟನೆ ತಾಲ್ಲೂಕಿನ ಹೇಮಗಿರಿ ರಸ್ತೆಯ ಕುಂದನಹಳ್ಳಿ ಗ್ರಾಮದ ಗೇಟ್ ಬಳಿ ಗುರುವಾರ ಬೆಳಿಗ್ಗೆ ಸುಮಾರು ೮ಗಂಟೆ ಸಮಯದಲ್ಲಿ ನಡೆದಿದೆ.
ಘಟನೆ ವಿವರ:
ತಾಲ್ಲೂಕಿನ ಆಲೇನಹಳ್ಳಿಯಿಂದ ಕೆ.ಆರ್.ಪೇಟೆ ತಾಲ್ಲೂಕು ಕೇಂದ್ರದ ಕಡೆಗೆ ಬರುತ್ತಿದ್ದ ಕೆ.ಆರ್.ಪೇಟೆ ಬಸ್ ಡಿಪೋಗೆ ಸೇರಿದ ಬಸ್(ಕೆ.ಎ.೧೧-ಎಫ್-೦೨೭೮) ಕುಂದನಹಳ್ಳಿ ಗೇಟ್ ಬಳಿ ಇರುವ ಕೆ.ಆರ್.ಪೇಟೆ-ಹೇಮಗಿರಿ ಮುಖ್ಯ ರಸ್ತೆಯಲ್ಲಿ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಗಾಯಾಳುಗಳು:
ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರಾದ ನಾಟನಹಳ್ಳಿ ಗ್ರಾಮದ ಪ್ರೇಕ್ಷಿತಾ, ಸುಚಿತ್ರ, ರಾಜೇಗೌಡ, ಮಲ್ಲೇನಹಳ್ಳಿಯ ನಿಂಗಮ್ಮ, ನಾರ್ಗೋನಹಳ್ಳಿಯ ಶಿವಮ್ಮ, ಶೋಭ, ಆಲೇನಹಳ್ಳಿಯ ಬಿಂದು, ಹೊನ್ನೇನಹಳ್ಳಿಯ ದೇವರಾಜು, ಬಂಡಿಹೊಳೆ ಕೀರ್ತನ, ಮಡುವಿನಕೋಡಿ ಕಿರಣ್, ಮೂಡನಹಳ್ಳಿ ಅರ್ಪಿತಾ, ಆಶಾ, ವಡ್ಡರಹಳ್ಳಿ ಅರ್ಪಿತ, ಕಾಂತಾಮಣಿ, ಚಾಲಕ ಎಂ.ಬಿ.ಕಿರಣ್, ನಿರ್ವಾಹಕ ಸೇರಿದಂತೆ ೩೫ಮಂದಿಗೆ ಗಾಯಗಳಾಗಿವೆ. ಈ ಪೈಕಿ ಪ್ರೇಕ್ಷಿತಾ, ನಿಂಗಮ್ಮ, ರಾಜೇಗೌಡ, ಬಿಂದು ಸೇರಿದಂತೆ ಆರೇಳು ಮಂದಿಗೆ ಗಂಭೀರವಾದ ಗಾಯಗಳಾಗಿವೆ. ಗಾಯಾಳುಗಳನ್ನು ತಾಲ್ಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಶಶಿಧರ್ ನೇತೃತ್ವದಲ್ಲಿ ಆಂಬುಲೆನ್ಸ್ನಲ್ಲಿ ಕೆ.ಆರ್.ಪೇಟೆ ಸರ್ಕಾರಿ ಆಸ್ಪತೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಿಕೊಡಲಾಯಿತು.

ಘಟನೆ ವಿಷಯ ತಿಳಿಯುತ್ತಿದ್ದಂತೆಯೇ ಶಾಸಕ ಹೆಚ್.ಟಿ.ಮಂಜು, ಪಾಂಡವಪುರ ಉಪವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಜಿಲ್ಲಾ ಸಾರಿಗೆ ನಿಯಂತ್ರಣಾಧಿಕಾರಿ ನಾಗರಾಜು, ಕೆ.ಆರ್.ಪೇಟೆ ಡಿಪೋ ಮ್ಯಾನೇಜರ್ ರವಿ ಸೇರಿದಂತೆ ಹಲವು ಅಧಿಕಾರಿಗಳು ಬೇಟಿ ನೀಡಿ ಗಾಯಾಳುಗಳಿಗೆ ಸಾಂತ್ವನ ಹೇಳಿದರು.
ಶಾಸಕ ಸಾಂತ್ವನ:
ಶಾಸಕ ಹೆಚ್.ಟಿ.ಮಂಜು ಗಾಯಾಳುಗಳನ್ನು ಮೈಸೂರು ಆಸ್ಪತ್ರೆಗೆ ಕಳುಹಿಸಲು ಕೊಡಲು ಸಹಕಾರ ನೀಡಿ, ಮಾತನಾಡಿ ನಮ್ಮ ತಾಲ್ಲೂಕಿಗೆ ಮೈಸೂರು, ಬೆಂಗಳೂರು ಕಡೆಗಳಲ್ಲಿ ಓಡಿಸಿದ ಹಳೆಯ ಬಸ್ಸುಗಳನ್ನು ಕೊಡಲಾಗುತ್ತಿದೆ. ಇದರಿಂದಾಗಿ ಬಸ್ಸುಗಳು ಚಲಿಸಲು ಗುಣಮಟ್ಟದ ಕಂಡೀಷನ್ ಇಲ್ಲದೆ ಇರುವ ಅಲ್ಲಲ್ಲಿ ಕೆಟ್ಟು ನಿಲ್ಲುತ್ತಿರುವುದು ಸರ್ವೇ ಸಾಮಾನ್ಯವಾಗಿ ಕಂಡು ಬರುತ್ತದೆ. ಕಂಡೀಷನ್ ಇಲ್ಲದೇ ಇರುವ ಬಸ್ಸುಗಳು ಚಾಲಕರ ನಿಯಂತ್ರಣಕ್ಕೆ ಸಿಗದೇ ಈ ರೀತಿಯ ಅಪಘಾತಗಳಾಗಲು ಕಾರಣವಾಗಿದೆ. ಹಾಗಾಗಿ ಕೂಡಲೇ ಹೊಸ ಬಸ್ಸುಗಳನ್ನು ತಾಲ್ಲೂಕಿಗೆ ನೀಡಿ, ಹಳೆಯ ಬಸ್ಸುಗಳನ್ನು ವಾಪಸ್ ಪಡೆಯಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಉಚಿತ ಚಿಕಿತ್ಸೆಗೆ ಕ್ರಮ:
ಉಪ ವಿಭಾಗಾಧಿಕಾರಿ ಶ್ರೀನಿವಾಸ್.ಕೆ.ಆರ್. ಗಾಯಾಳುಗಳನ್ನು ವೀಕ್ಷಣೆ ಮಾಡಿ ಬೆಳ್ಳಂಬೆಳಿಗ್ಗೆ ಬಸ್ ಅಪಘಾತ ನಡೆಯಬಾರದಾಗಿತ್ತು. ಆದರೆ ಆಕಸ್ಮಿಕವಾಗಿ ನಡೆದಿರುವ ಅಪಘಾತದಿಂದ ಮನಸ್ಸಿಗೆ ತುಂಬಾ ಬೇಸರವಾಗಿದೆ. ಗಾಯಾಳುಗಳಿಗೆ ಸರ್ಕಾರದ ವತಿಯಿಂದ ಉಚಿತ ಚಿಕಿತ್ಸೆ ಕೊಡಿಸಲು ಸೂಕ್ತ ಕ್ರಮ ವಹಿಸುವಂತೆ ಜಿಲ್ಲಾ ಸಾರಿಗೆ ಅಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳ ಮೂಲಕ ಸೂಚನೆ ನೀಡಲಾಗಿದೆ. ಗಾಯಾಳುಗಳಿಗೆ ಜೊತೆಗೆ ಸೂಕ್ತ ಪರಿಹಾರವನ್ನು ರಾಜ್ಯ ಸರ್ಕಾರ ಅಥವಾ ಸಾರಿಗೆ ಇಲಾಖೆಯಿಂದ ಕೊಡಿಸಲು ಸೂಕ್ತ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.
ತಹಸೀಲ್ದಾರ್‌ರಿಂದ ಗಾಯಾಳು ಬೇಟಿ: ತಾಲ್ಲೂಕು ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಮಾತನಾಡಿ ಅಪಘಾತವಾದ ಬಸ್ಸಿನಲ್ಲಿ ಸುಮಾರು 52 ಮಂದಿ ಪ್ರಯಾಣಿಸುತ್ತಿದ್ದರು. ಈ ಪೈಕಿ ಸುಮಾರು ೩೫ಮಂದಿ ಗಾಯಗಳಾಗಿದೆ. ಇದರಲ್ಲಿ 10ಕ್ಕೂ ಹೆಚ್ಚು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ 16 ಮಂದಿಗೆ ಗಂಭೀರವಾದ ಗಾಯಗಳಾಗಿದೆ. ಇವರೆಲ್ಲರಿಗೂ ಗುಣಮಟ್ಟದ ಚಿಕಿತ್ಸೆ ನೀಡಲು, ತಾಲ್ಲೂಕು ಆಡಳಿತವು ಸಾರಿಗೆ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಕ್ರಮ ವಹಿಸಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಸಾರಿಗೆ ನಿಯಂತ್ರಣಾಧಿಕಾರಿ ನಾಗರಾಜು, ಕೆ.ಆರ್.ಪೇಟೆ ಡಿಪೋ ಮ್ಯಾನೇಜರ್ ರವಿ ಕಸಬಾ ರಾಜಸ್ವ ನಿರೀಕ್ಷಕ ಜ್ಞಾನೇಶ್, ಗ್ರಾಮ ಆಡಳಿತ ಅಧಿಕಾರಿ ಜಗದೀಶ್, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್, ತಾಲ್ಲೂಕು ಕರವೇ ಸ್ವಾಭಮಾನಿ ಸೇನೆಯ ತಾಲ್ಲೂಕು ಅಧ್ಯಕ್ಷ ಸಮೀರ್, ಉಪಾಧ್ಯಕ್ಷ ಅಮ್ಜದ್ ಪಾಷಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಘಟನೆ ಕುರಿತು ಪ್ರಕರಣ ದಾಖಲಿಸಿರುವ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಆನಂದೇಗೌಡ ಅವರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಸರ್ಕಾರಿ ಉದ್ಯೋಗ ನೀಡಲು ಆಗ್ರಹ:
ಕರವೇ ಸ್ವಾಭಿಮಾನಿ ಸೇನೆಯ ತಾಲ್ಲೂಕು ಅಧ್ಯಕ್ಷ ಸಮೀರ್ ಮಾತನಾಡಿ ಅಪಘಾತದಿಂದ ಎಲ್ಲರೂ ಚನ್ನಾಗಿ ಹುಷಾರಾಗಿ ಬರಲಿ ಎಂದು ಆಶಿಸುತ್ತೇನೆ. ಗಾಯಗೊಂಡಿರುವ ವಿದ್ಯಾರ್ಥಿಗಳ ಕೈಕಾಲಿಗೆ ಹೆಚ್ಚು ಪೆಟ್ಟಗಾಗಿದೆ. ಒಂದು ವೇಳೆ ಕೈಕಾಲಿಗೆ ತೊಂದರೆಯಾಗಿ ವಿಕಲಚೇತನರಾದರೆ ಅಂತಹ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಸರ್ಕಾರಿ ಉದ್ಯೋಗ ಕಲ್ಪಿಸಬೇಕು ಎಂದು ಸರ್ಕಾರವನ್ನು ಒತ್ತಾಯ ಮಾಡಿದರು.
ಕೆ.ಆರ್.ಪೇಟೆ: ಗಾಯಾಳುಗಳನ್ನು ಪಾಂಡವಪುರ ಉಪವಿಭಾಗಾಧಿಕಾರಿ ಬೇಟಿ ಮಾಡಿ ಮಾಡಿ ವೈದ್ಯರಿಂದ ಮಾಹಿತಿ ಪಡೆದುಕೊಳ್ಳುತ್ತಿರುವುದು. ಈ ವೇಳೆ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಡಾ.ಶಶಿಧರ್ ಇತರರು ಇದ್ದರು.
- ಶ್ರೀನಿವಾಸ್ ಕೆ.ಆರ್.ಪೇಟೆ