ಕೆ.ಆರ್.ಪೇಟೆ-ಸಾರ್ವಜನಿಕ ರಸ್ತೆ ಬಂದ್ ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು – ಗ್ರಾಮಸ್ಥರಿಂದ ಪೊಲೀಸರಿಗೆ ದೂರು

ಕೆ.ಆರ್.ಪೇಟೆ, ಮೇ 15: ತಾಲ್ಲೂಕಿನ ಸಿಂಧುಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿನಾಯಕನಕೊಪ್ಪಲು ಗ್ರಾಮದಲ್ಲಿ ಕೆಲವು ನಿವೇಶನಧಾರಕರು ಸರಕಾರಿ ಹಕ್ಕುಪತ್ರದ ಸೀಮೆ ಮೀರಿ ಹೆಚ್ಚುವರಿ ಭೂಮಿ ಕಬಳಿಸಿ ಶೆಡ್ ನಿರ್ಮಾಣ ಮಾಡಿರುವುದಲ್ಲದೇ, ಸಾರ್ವಜನಿಕ ರಸ್ತೆಯ ಮೇಲೆ ಟ್ರಾಕ್ಟರ್, ಟ್ರೆಲರ್ ನಿಲ್ಲಿಸಿ ಸಾರ್ವಜನಿಕರಿಗೆ ತೀವ್ರ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.‌

ಗ್ರಾಮದ ಅಣ್ಣೇಗೌಡನ ಮಗ ಸುಂದ್ರೇಶ್, ಶ್ರೀನಿವಾಸಗೌಡ ಮತ್ತು ಶಮಂತ್ ಎನ್ನುವವರು ಕಳೆದ ಎರಡು ವಾರಗಳಿಂದ ಗ್ರಾಮದಲ್ಲಿ ಪ್ರಮುಖ ಸಾರ್ವಜನಿಕ ರಸ್ತೆಯನ್ನು ಟ್ರಾಕ್ಟರ್ ಹಾಗೂ ಟ್ರೆಲರ್ ನಿಲ್ಲಿಸುವ ಮೂಲಕ ತಡೆಯುತ್ತಿದ್ದಾರೆ. ಅವರು ರಸ್ತೆಯ ದಾರಿಯಲ್ಲಿ ಮಣ್ಣು ಸುರಿದು ಮನೆಗಳಿಂದ ವಾಹನಗಳನ್ನು ಹೊರತೆಗೆದುಕೊಳ್ಳುವ ಸಾಧ್ಯತೆ ಇಲ್ಲದಂತೆ road ಬಂದ್ ಮಾಡಿದ್ದು, ಇದರಿಂದ ಕುಡಿಯುವ ನೀರಿಗಾಗಿ ಮನೆಯಿಂದ ಹೊರ ಹೋಗುವುದೂ ಕಷ್ಟವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಈ ದುಂಡಾ ವರ್ತನೆಗೆ ಸಂಬಂಧಿಸಿ ಶೆಟ್ಟಿನಾಯಕನಕೊಪ್ಪಲು ನಿವಾಸಿಗಳಾದ ಚಂದ್ರೇಗೌಡ, ಮಂಜೇಗೌಡ, ಎಸ್.ಎಂ. ಸಾಗರ್, ಲೋಕೇಶ್, ಶ್ರೀಕಾಂತ್ ಸೇರಿದಂತೆ ಹಲವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಕೆ.ಆರ್.ಪೇಟೆ ಪಟ್ಟಣ ಪೋಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ. ಸಾರ್ವಜನಿಕರ ಹಕ್ಕು ಹಿಂಸಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.

– ಶ್ರೀನಿವಾಸ್‌ ಆರ್.

Leave a Reply

Your email address will not be published. Required fields are marked *