ಕೆ.ಆರ್.ಪೇಟೆ;ಆರೋಗ್ಯಕ್ಕಿಂತ ಮಿಗಿಲಾದ ಭಾಗ್ಯ ಮತ್ತೊಂದಿಲ್ಲ ಆದ್ದರಿಂದ ನಿಯಮಿತವಾಗಿ ಆಹಾರ ಸೇವಿಸಿ ಶಿಸ್ತುಬದ್ಧವಾದ ಜೀವನ ನಡೆಸಿ ನಮ್ಮ ಅಮೂಲ್ಯವಾದ ಆರೋಗ್ಯ ಕಾಪಾಡಿಕೊಂಡು ನೂರ್ಕಾಲ ನೆಮ್ಮದಿಯ ಜೀವನ ನಡೆಸಬೇಕು ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆಯ ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಹೇಳಿದರು.
ತಾಲೂಕಿನ ಮಡುವಿನಕೊಡಿ ಗ್ರಾಮದಲ್ಲಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೇತೃತ್ವದಲ್ಲಿ ಹಮ್ಮಿಕೊ ಳ್ಳಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಒತ್ತಡದ ಜೀವನದಲ್ಲಿ ನಾವು ಕೆಲಸ ಮಾಡುವುದರಿಂದ ಹಲವು ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ.ಆದ್ದರಿಂದ ಒತ್ತಡಗಳಿಂದ ಮುಕ್ತವಾಗಿ ಶಿಸ್ತು ಬದ್ಧ ಜೀವನ ನಡೆಸಬೇಕು.ಸೊಪ್ಪು ತರಕಾರಿ,ಹಣ್ಣು ಹಂಪಲು ಸೇರಿದಂತೆ ಪೌಷ್ಟಿಕಾಂಶಗಳಿಂದ ಕೂಡಿರುವ ದೇಸಿ ಶೈಲಿಯ ಆಹಾರ ಪದಾರ್ಥಗಳನ್ನು ಸೇವಿಸಿ ಅಮೂಲ್ಯವಾದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.ಬಾಯಿ ಚಪಲಕ್ಕೆ ಒಳಗಾಗಿ ಬೇಕರಿ ಹಾಗೂ ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಪಾನಿಪುರಿ,ಗೋಬಿಮಂಚೂರಿ, ಬಜ್ಜಿ, ಪಕೋಡ ತಿಂದು ಆರೋಗ್ಯವನ್ನು ಕೆಡಿಸಿಕೊಳ್ಳಬಾರದು ಎಂದು ಕಿವಿಮಾತು ಹೇಳಿದರು.
ಇಂದಿನ ದಿನಮಾನದಲ್ಲಿ ಸಕ್ಕರೆ ಖಾಯಿಲೆ,ರಕ್ತದೋತ್ತಡ,ಕ್ಯಾನ್ಸರ್ ಹಾಗೂ ಹೃದಯಕ್ಕೆ ಸಂಬಂಧಿಸಿದ ಖಾಯಿಲೆಗಳು ಕಾಡುತ್ತಿವೆ.ನಮ್ಮ ಆರೋಗ್ಯ ನಮ್ಮ ಕೈಯ್ಯಲ್ಲಿಯೇ ಇರುವುದರಿಂದ ಶಿಸ್ತು ಬದ್ಧ ಜೀವನ ಹಾಗೂ ಆಹಾರ ಶೈಲಿಯೇ ನಮ್ಮ ಆರೋಗ್ಯದ ರಹಸ್ಯವಾಗಿದೆ ಎಂದರು.
ಮಾದೇಗೌಡ ಮೆಮೋರಿಯಲ್ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಲೋಹಿತ್, ಡಾ.ಆಶಾಲತಾ, ಡಾ. ಶಶಿಕಾಂತ್, ಡಾ. ಹೇಮಲತಾ, ಪೊಲೀಸ್ ಅಧಿಕಾರಿ ಸತೀಶ್, ಕಾವೇರಿ ಕಣ್ಣಿನ ಆಸ್ಪತ್ರೆಯ ತಜ್ಞ ವೈದ್ಯರು, ತಾಲೂಕು ಯೋಜನಾಧಿಕಾರಿ ವೀರೇಶಪ್ಪ, ಮೇಲ್ವಿಚಾರಕರಾದ ಗುಣಶ್ರೀ, ಮಡವಿನಕೊಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರೀತಿ ಬೈರನಾಯಕ್, ಉಪಾಧ್ಯಕ್ಷರಾದ ರತಿ ಮಹದೇವ್ ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು. ಆರೋಗ್ಯ ಶಿಬಿರದಲ್ಲಿ ಆರೋಗ್ಯ ತಪಾಸಣೆ ನಡೆಸಿ ಉಚಿತವಾಗಿ ಔಷಧಿಗಳನ್ನು ವಿತರಿಸಲಾಯಿತು.
—————————– ಶ್ರೀನಿವಾಸ್, ಕೆ.ಆರ್.ಪೇಟೆ.