ಹಾಸನ:ನಗರದ ಭುವನಹಳ್ಳಿ ಬಳಿ ಇಂದು ನಡೆದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಆರೋಗ್ಯಕರ ಚರ್ಚೆಗೆ ಬದಲಾಗಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.
ಪ್ರತೀ ವರ್ಷದಂತೆ ಈ ಬಾರಿಯೂ ನಡೆದ ವಾರ್ಷಿಕ ಮಹಾಸಭೆಯನ್ನು ಸಂಘದ ಗೌರವಾಧ್ಯಕ್ಷ ಹಾಗೂ ಕಾ.ರ.ರ.ಸಾ.ನಿ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ದೀಪಕ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.ಸಭೆ ನಡೆಯುತ್ತಿರುವಾಗಲೇ ಎರಡು ಗುಂಪುಗಳ ನಡುವೆ ವಿವಿಧ ವಿಚಾರಗಳಿಗೆ ಮಾತಿನ ಚಕಮಕಿ ನಡೆದು ಸಭೆಯನ್ನು ಶಾಂತವಾಗಿರಿಸಲು ದೀಪಕ್ ಕುಮಾರ್ ಹರಸಾಹಸ ಪಟ್ಟರು.
ಪ್ರಮುಖವಾಗಿ ಸಂಘದ ಸದಸ್ಯ ಹಾಸನ ಬಸ್ ಡಿಪೋ ನಲ್ಲಿ ಕೆಲಸ ಮಾಡುತ್ತಿರುವ ಟಿ. ದೇವರಾಜ್ ಅವರ ಸದಸ್ಯತ್ವ ರದ್ದು ವಿಚಾರವನ್ನು ಅಧ್ಯಕ್ಷ ಹೊನ್ನೇಗೌಡ ಪ್ರಸ್ತಾಪ ಮಾಡುತ್ತಿದ್ದಂತೆ ಅದಕ್ಕೆ ಕಾರಣ ಕೇಳಿ ಟಿ. ದೇವರಾಜ್ ಹಾಗೂ ಅವರ ಬೆಂಬಲಿಗರು ಸಭೆಯ ಬಾವಿಗಿಳಿದು ಪ್ರತಿಭಟನೆಗೆ ಮುಂದಾದರು.
ಸಂಘದ ಪ್ರಧಾನ ಕಾರ್ಯದರ್ಶಿ ಜಿಟಿ ರಂಗೇಗೌಡ,ಸದಸ್ಯ ಟಿ ದೇವರಾಜ್,ಪರಮೇಶ್,ಯತಿರಾಜ್,ಸುರೇಂದ್ರ, ಅಣ್ಣೇಗೌಡ,ಕುಮಾರ್,ಸೋಮಶೇಖರ್,ಶಶಿರೇಖಾ,ಸೇರಿದಂತೆ ಹಲವಾರು ಈ ವಿಚಾರಕ್ಕೆ ಆಕ್ಷೇಪ ವ್ಯಕ್ತಪಡಿಸಿದರು,ಇದೆ ವೇಳೆ ಎರಡು ಗುಂಪುಗಳ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ನಡೆಯಿತು
ಸಾರಿಗೆ ನೌಕರರ ಗೃಹ ನಿರ್ಮಾಣ ಮಂಡಳಿ ವತಿಯಿಂದ ಸಂಘದ 6 ಜನ ಸದಸ್ಯರಿಗೆ ನೀಡಲಾಗಿರುವ ನಿವೇಶನವನ್ನು ಸಂಘದ ವಶಕ್ಕೆ ಪಡೆಯದೆ ಅಭಿವೃದ್ದಿ ಪಡಿಸಿ ಸೈಟ್ ರಿಜಿಸ್ಟ್ರರ್ ಮಾಡಲಾಗಿತ್ತು,ಇದಕ್ಕೆ ವಿರೋಧ ವ್ಯಕ್ತ ಪಡಿಸಿದ ಕಾರಣಕ್ಕೆ ಹಾಗೂ ಸಂಘದಲ್ಲಿ ನಡೆಯಲಿರುವ ಅವ್ಯವಹಾರ ಬಯಲಿಗೆ ಎಳೆದ ಕಾರಣಕ್ಕೆ ನಮ್ಮ ಮೇಲೆ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಟಿ. ದೇವರಾಜ್ ಆರೋಪಿಸಿದರು.
ಇದೆ ವೇಳೆ ಸಭೆಯಲ್ಲಿ ಸಮಗ್ರ ತಿದ್ದುಪಡಿ ವಿಚಾರ ಪ್ರಸ್ತಾಪ ವಾಗುತ್ತಿದ್ದಂತೆ ಬೈಲಾದಲ್ಲಿ ಸಮಗ್ರ ತಿದ್ದುಪಡಿ ವಿಚಾರ ಇಲ್ಲ,ಇದು ಬೈಲಾ ವಿರುದ್ಧವಾಗಿದೆ ಎಂದು ತಮ್ಮ ಆಕ್ರೋಶ ವ್ಯಕ್ತ ಪಡಿಸಿ ಸಂಘದ ಅಧ್ಯಕ್ಷ ಹೊನ್ನೇಗೌಡ ಅವರನ್ನು ಇತರ ಸದಸ್ಯರು ತೀವ್ರ ತರಾಟೆಗೆ ತೆಗೆದುಕೊಂಡರು.ಬೈಲಾದಲ್ಲಿ ಸಮಗ್ರ ತಿದ್ದುಪಡಿ ಬಗ್ಗೆ ಪ್ರಸ್ತಾಪ ಇದ್ದರೆ ಅದನ್ನು ಸಭೆಯಲ್ಲಿ ಮಂಡಿಸಲಿ ಅಲ್ಲಿಯವರೆಗೂ ಬೈಲಾ ಹೊರತುಪಡಿಸಿ ಯಾವುದೇ ತಿದ್ದುಪಡಿ ಮಾಡುವ ಹಾಗಿಲ್ಲ ಎಂದರು.
ಇದೆ ವೇಳೆ ಸಂಘದ ಗೌರವಾಧ್ಯಕ್ಷರು ಹಾಗೂ ಹಾಸನ ವಿಭಾಗೀಯ ನಿಯಂತ್ರಣಾಧಿಕಾರಿ ದೀಪಕ್ ಕುಮಾರ್ ಅದನ್ನು ಸದ್ಯಕ್ಕೆ ನಿಲ್ಲಿಸಿ ಬೈಲಾ ಹಾಗೂ ಸಹಕಾರಿ ಇಲಾಖೆಯ ನಿಯಮವನ್ನು ಮುಂದಿನ ಸಭೆಯಲ್ಲಿ ಇಟ್ಟು ನಿಯಮ ಇದ್ದಲ್ಲಿ ಬಳಿಕ ಸಭೆಯಲ್ಲಿ ಒಪ್ಪಿಗೆ ಪಡೆದು ತಿದ್ದುಪಡಿಗೆ ಅವಕಾಶ ನೀಡಲಾಗುವುದು ಅಲ್ಲಿಯವರೆಗೂ ಈ ವಿಚಾರ ಪ್ರಸ್ತಾಪ ಬೇಡ ಎಂದರು.
ಲೇಔಟ್ ಅಭಿವೃದ್ದಿ ಪಡಿಸಿಲು ಈ ಹಿಂದೆ 11 ಕೋಟಿಗೆ ಗುತ್ತಿಗೆ ನೀಡಲಾಗಿತ್ತು,ಇದೀಗ 24 ಕೋಟಿ ಖರ್ಚಾಗಿದೆ ಎಂಬುದನ್ನು ಸಭೆಯಲ್ಲಿ ಪ್ರಸ್ತಾಪ ಮಾಡಲಾಯಿತು,ಇದೇ ವಿಚಾರಕ್ಕೆ ಇದರಲ್ಲಿ ದುಂದುವೆಚ್ಚ ನಡೆದಿದೆ,ಕೂಡಲೇ ಈ ಬಗ್ಗೆ ತನಿಖೆ ನಡೆಯಬೇಕು,
ಸಂಘಕ್ಕೆ ಲೀಗಲ್ ಅಡ್ವೈಸರ್ ಆಗಿ ನೇಮಕ ಮಾಡಿಕೊಂಡಿರುವ ವಕೀಲೆ ಸುಮಾ ಎಂಬುವವರಿಗೆ ಈ ವರೆಗೆ ಸಂಘದಿಂದ 40 ಲಕ್ಷ ಹಣ ಜೊತೆಗೆ 40×50 ನಿವೇಶನ ನೀಡಲಾಗಿದೆ.ಅಲ್ಲದೆ 25 ಎಕರೆ ಜಾಗವನ್ನು ಸರ್ವೆ ಮಾಡಿಸಿದ ಕಾರಣಕ್ಕೆ 35 ಲಕ್ಷ ಖರ್ಚಾಗಿದೆ,ಅಧ್ಯಕ್ಷ ಹೊನ್ನೇಗೌಡ ಅವರು ತಮ್ಮ ಕುಟುಂಬಕ್ಕೆ 14 ಸೈಟ್ ಗಳನ್ನ ಬರೆಸಿಕೊಂಡಿದ್ದಾರೆ ಎಂದು ಕೆಲ ಸದಸ್ಯರ ವಿರುದ್ದ ಆರೋಪಗಳ ಸುರಿಮಳೆಗೈದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಮಂಜುನಾಥ್,ಕಾರ್ಯದರ್ಶಿ ರಂಗಸ್ವಾಮಿ,ಸಹಾಯಕ ಭದ್ರತಾ ನಿರೀಕ್ಷಕ ಪ್ರಸನ್ನ, ಹಾಗೂ ಸಾರಿಗೆ ಇಲಾಖೆಯ ಜಯಂತ್ ಇತರರು ಇದ್ದರು.
———————————–ಕೆ.ಜಿ ಸುರೇಶ್