ತುಮಕೂರು: ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಪಿ. ಆರ್. ಕುರಂದವಾಡ ಅವರು ವಲಯ ಅಧಿಕಾರಿಗಳು, ನೈರುತ್ಯ ರೈಲ್ವೆ ಇಲಾಖೆ ಬೆಂಗಳೂರು, ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ಶಾಸಕ ಜಿ.ಬಿ. ಜ್ಯೋತಿ ಗಣೇಶ್ ಹಾಗೂ ಜಿಲ್ಲಾಧಿಕಾರಿಯವರಿಗೆ ಜಿಲ್ಲೆಯ ರೈಲ್ವೆಯಲ್ಲಿನ ಕುಂದು ಕೊರತೆಗಳನ್ನು ಶೀಘ್ರವಾಗಿ ಪರಿಹರಿಸುವಂತೆ ಹಾಗೂ ಬೇಡಿಕೆಗಳನ್ನು ಈಡೇರಿಸುವಂತೆ ಪತ್ರ ಬರೆದಿದ್ದಾರೆ.
ಈ ಪತ್ರದಲ್ಲಿ ತುಮಕೂರು ರೈಲ್ವೆ ನಿಲ್ದಾಣಕ್ಕೆ ಡಾ. ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಹೆಸರನ್ನು ಇಡುವಂತೆ ಮನವಿ ಮಾಡಲಾಗಿದೆ. ತುಮಕೂರಿನಿಂದ ಬೆಂಗಳೂರಿಗೆ ಪ್ರತಿನಿತ್ಯ ಉದ್ಯೋಗ ವ್ಯಾಪಾರ ವ್ಯವಹಾರದ ನಿಮಿತ್ತ ಒಂದು ಲಕ್ಷಕ್ಕೂ ಅಧಿಕ ಜನರು ಸಂಚರಿಸುತ್ತಿದ್ದು ಅವರಿಗೆ ಅನುಕೂಲವಾಗುವಂತೆ ಗಂಟೆಗೆ ಒಂದರಂತೆ ಓಡಿಸುವುದು ಹಾಗೂ ತುಮಕೂರು ರೈಲ್ವೆ ನಿಲ್ದಾಣಕ್ಕೆ ಸೂಕ್ತವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಿ ಕೊಡುವುದು.
ಯಶವಂತಪುರ ಮತ್ತು ಅರಸೀಕೆರೆ ನಡುವೆ ಸ್ವಯಂ ಚಾಲಿತ ಸಿಗ್ನಲ್ ಕಾಮಗಾರಿ ಆದಷ್ಟು ಬೇಗ ಪೂರ್ಣಗೊಳಿಸುವುದು. ತುಮಕೂರು ರೈಲ್ವೆ ನಿಲ್ದಾಣದಲ್ಲಿ ವಯೋವೃದ್ದರಿಗೆ ಹಾಗೂ ಅಂಗವಿಕಲರಿಗೆ ಅನುಕೂಲವಾಗುವಂತೆ ಪೋರ್ಟರ್ ಹಾಗೂ ಟ್ರಾಲಿ ಒದಗಿಸುವುದು. ತುಮಕೂರಿನಿಂದ ತಿಪಟೂರಿಗೆ ಬೆಳಿಗ್ಗೆ 10 ರಿಂದ ರಾತ್ರಿ 9 ಗಂಟೆವರೆಗೂ ಹೆಚ್ಚಿನ ರೈಲ್ವೆ ಸಂಚಾರದ ವ್ಯವಸ್ಥೆಯನ್ನು ಕಲ್ಪಿಸಬೇಕು. ಕೆಎಸ್ಆರ್ ಬೆಂಗಳೂರಿನಿಂದ ಸಂಜೆ 4.30ಕ್ಕೆ ತುಮಕೂರು ಮಾರ್ಗವಾಗಿ ಅರಸೀಕೆರೆಗೆ ಹೋಗುತ್ತಿದ್ದ ರೈಲನ್ನು ಮತ್ತೆ ಪ್ರಾರಂಭಿಸಬೇಕೆಂದು ಮನವಿ ಮಾಡಲಾಗಿದೆ.

ಯಲಹಂಕದಿಂದ ಯಶವಂತಪುರ ಕಡೆಗೆ ಸಂಜೆ 7 ಗಂಟೆಗೆ ರೈಲ್ವೆ ಸಂಚಾರ ವ್ಯವಸ್ಥೆಯನ್ನು ಕಲ್ಪಿಸುವುದರಿಂದ ತುಮಕೂರು, ಅರಸೀಕೆರೆ ಕಡೆ ಹೋಗುವ ಪ್ರಯಾಣಿಕರಿಗೆ ಯಲಹಂಕದಿಂದ ಹೋಗಲು ಅನುಕೂಲವಾಗುತ್ತದೆ. ಅರಸೀಕೆರೆ ಪ್ಯಾಸೆಂಜರ್ ರೈಲು ಸಮಯವನ್ನು ಬದಲಿಸುವಂತೆ, ಬೆಳಿಗ್ಗೆ 8ಕ್ಕೆ ತುಮಕೂರಿನಿಂದ ಯಶವಂತಪುರಕ್ಕೆ ಸಂಚರಿಸುವ ಮೆಮೋ ರೈಲನ್ನು ಮೆಜೆಸ್ಟಿಕ್ ವರೆಗೆ ವಿಸ್ತರಿಸಿ ಅಥವಾ ಕೋಲಾರ ರೈಲನ್ನು ತುಮಕೂರು ಮೆಮೋ ರೈಲಿಗೆ ಲಿಂಕ್ ಮಾಡಿದರೆ ಮೆಜೆಸ್ಟಿಕ್ ನಿಲ್ದಾಣ ತಲುಪಲು ಅನುಕೂಲವಾಗುತ್ತದೆ.
ಯಶವಂತಪುರದಿಂದ ತುಮಕೂರುವರೆಗೆ ಸಂಚರಿಸುತ್ತಿರುವ ಮೆಮೋ 5: 40 ಗಂಟೆಗೆ ಬಿಡುವ ರೈಲನ್ನು ತಿಪಟೂರು ವರೆಗೆ ಸಂಚರಿಸಲು ಅನುಕೂಲತೆ ಮಾಡಿಕೊಡಬೇಕು. ಪ್ರಸ್ತುತ ಸಂಜೆ 6.40ಕ್ಕೆ ತುಮಕೂರಿನಿಂದ ಶಿವಮೊಗ್ಗ ನಡುವೆ ಸಂಚರಿಸುವ ರೈಲಿಗೆ ಲಿಂಕ್ ಅಥವಾ ಮೆಮೋ ರೈಲನ್ನು ತುಮಕೂರಿನಿಂದ ಅರಸೀಕೆರೆ ವರೆಗೆ ಬಿಟ್ಟರೆ ಬೆಂಗಳೂರು, ಯಶವಂತಪುರ, ನಿಡವಂದ, ದಾಬಸ್ ಪೇಟೆ, ಹಿರೇಹಳ್ಳಿ ಕೈಗಾರಿಕಾ ಪ್ರದೇಶಗಳಿಗೆ ದಿನ ನಿತ್ಯ ಸಾಕಷ್ಟು ಜನರು ಈ ಭಾಗದ ಗ್ರಾಮೀಣ ಪ್ರದೇಶಗಳಿಗೆ ಓಡಾಡುವವರಿಗೆ ಅನುಕೂಲವಾಗುತ್ತದೆ. ಸಂಜೆ 5.40ಕ್ಕೆ ಯಶವಂತಪುರದಿಂದ ತುಮಕೂರಿಗೆ ಸಂಚರಿಸುವ ಮೆಮೋ ರೈಲನ್ನು 5.40ರ ಬದಲು 6 ಗಂಟೆ 10 ನಿಮಿಷಕ್ಕೆ ಬದಲಾಯಿಸಿ ಕೊಡಬೇಕು ಎಂದು ಮನವಿ ಮಾಡಿದ್ದಾರೆ.