ಬೇಲೂರು;ಚಟಚಟ್ಟಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅತ್ಯಂತ ಕ್ರಿಯಾಶೀಲತೆಯಿಂದ ಕಾರ್ಯ ನಿರ್ವಹಿಸುತ್ತಿದ್ದು ಅಧ್ಯಕ್ಷರು ಹಾಗು ಪದಾಧಿಕಾರಿಗಳು ಸಂಘದ ಶ್ರೇಯೋಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದು ಹೆಚ್.ಡಿ.ಸಿ.ಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಹಾಲಿ ನಿರ್ದೇಶಕ ಎಂ.ಎ.ನಾಗರಾಜ್ ಮೆಚ್ಚುಗೆ ವ್ಯಕ್ತ ಪಡಿಸಿದರು.
ತಾಲ್ಲೂಕಿನ ಹಳೇಬೀಡು ಹೋಬಳಿ ಚಟಚಟ್ಟಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವಸದಸ್ಯರ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಡಳಿತ ಮಂಡಳಿಗಳು ಬದ್ಧತೆಯಿಂದ ಕೆಲಸ ಮಾಡಿದರೆ ಸಂಘ ಸಂಸ್ಥೆಗಳು ಹೇಗೆ ಅಭಿವೃದ್ಧಿ ಆಗಬಹುದು ಎಂದು ಈ ಪ್ರಾಥಮಿಕ ಸಂಘದ ಶ್ರೇಯೋಭಿವೃದ್ಧಿಯನ್ನು ನೋಡಿ ನಾವು ಕಲಿಯಬಹುದು.ಶೇಕಡಾ ನೂರಕ್ಕೆ ನೂರರಷ್ಟು ಸಾಲದ ಮರುಪಾವತಿಯನ್ನು ಹೊಂದಿದೆ ಎಂಬುದನ್ನು ಕೇಳಿ ಆಶ್ಚರ್ಯವಾಯಿತು.ಸಾಲವನ್ನು ತೆಗೆದುಕೊಂಡವರು ಸಹ ಅದನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡುತ್ತಿದ್ದು ಈ ಸಂದರ್ಭದಲ್ಲಿ ಅವರಿಗೂ ಒಂದು ಧನ್ಯವಾದ ಹೇಳಬೇಕಾಗುತ್ತದೆ.
ಇದು ನಮ್ಮ ಏಳ್ಗೆಗಾಗಿ ಇರುವ ಬ್ಯಾಂಕಿಂಗ್ ವ್ಯವಸ್ಥೆ ಇದನ್ನು ಉಳಿಸಿಕೊಂಡರೆ ನಮ್ಮ ಬೆಳವಣಿಗೆಗೂ ಸಹಕಾರವಾಗುತ್ತೆ ಅನ್ನುವ ಪ್ರಜ್ಞಾವಂತಿಕೆ ಸಾಲಗಾರರಲ್ಲಿ ಇದ್ದಾಗ ಮಾತ್ರ ಇಂತಹ ಆಶ್ಚರ್ಯಗಳನ್ನು ನಾವು ಕಾಣಲು ಸಾಧ್ಯ ಎಂದರು.
ಸಂಘ ಸದ್ಯ 1015 ಷೇರುದಾರರನ್ನು ಹೊಂದುವ ಮೂಲಕ ಸುಮಾರು 747 ರೈತರಿಗೆ ರೂ 6.27 ಕೋಟಿ ಬೆಳೆ ಸಾಲ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.ವ್ಯಾಪಾರ ಮತ್ತು ಹೈನುಗಾರಿಕೆ ಉತ್ತೇಜನದ ಹಿನ್ನಲೆಯಲ್ಲಿ ಕೂಡ ಸಾಲಸೌಲಭ್ಯ ಸೇರಿದಂತೆ ಸಂಘ ಬಲವರ್ಧನೆಗೆ ಆಡಳಿತ ಮಂಡಳಿ ಶ್ರಮಿಸುತ್ತಿದೆ.ವಿಶೇಷವಾಗಿ ಇಲ್ಲಿನ ಅಧಿಕಾರಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಚಟಚಟ್ಟಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಿ.ಎನ್.ನಂಜುಂಡಪ್ಪ ಮಾತನಾಡಿ,ಚಟಚಟ್ಟಹಳ್ಳಿ ಸೋಸೈಟಿ ದ್ಯಾವಪ್ಪನಹಳ್ಳಿ,ಲಿಂಗಪ್ಪನಕೊಪ್ಪಲು,ನಂಜಾಪುರ,ಕೋಡಿಕೊಪ್ಪಲು,ಮತಿಘಟ್ಟ,ಕೆಂಪಗೌಡನಹಳ್ಳಿ, ಹೊಸೂರು,ನಾಗರಾಜಪುರ,ಕರಿಕಟ್ಟೆಹಳ್ಳಿ ಹಾಗೂ ಮಾಯಗೊಂಡನಹಳ್ಳಿ ಸೇರಿದಂತೆ ಒಟ್ಟು 11ಗ್ರಾಮಗಳ ವ್ಯಾಪ್ತಿಯಲ್ಲಿ ಷೇರುದಾರರನ್ನು ಹೊಂದಿದೆ.ಶೇ 100 ರಷ್ಟು ಮರುಪಾವತಿ ಕೂಡ ನಡೆಸಲಾಗಿದೆ.ಈಗಾಗಲೇ ರೂ 1 ಕೋಟಿಗೂ ಹೆಚ್ಚು ಠೇವಣಿಯಿದ್ದು,ರೈತರು ಯಾವುದೇ ಆತಂಕವಿಲ್ಲದೆ ಇಲ್ಲಿಯೇ ಠೇವಣಿಯನ್ನು ಇಡಬೇಕು ಎಂದು ಮನವಿ ಮಾಡಿದರು.
ಸಂಘದ ಮೇಲ್ವಾಚಾರಕ ದಿನೇಶಕುಮಾರ್ ಮಾತನಾಡಿ, ತಾಲ್ಲೂಕಿನ ಒಟ್ಟು ಸೋಸೈಟಿಗಳ ಪೈಕಿ ಚಟಚಟ್ಟಹಳ್ಳಿ ಸಂಘ ಕೂಡ ರೂ 27.84 ಕೋಟಿ ರೂ ವಹಿವಾಟು ನಡೆಸಿದೆ.ವ್ಯಾಪಾರದಿಂದ ರೂ 2,25 ಲಕ್ಷ ಮತ್ತು ನಿವ್ವಳ ಲಾಭವನ್ನು ರೂ 2.56ಲಕ್ಷ ಗಳಿಸಿದೆ. ಇದಕ್ಕೆ ಕಾರಣ ಇಲ್ಲಿನ ಆಡಳಿತ ಮಂಡಳಿಯ ಇಚ್ಚಾಶಕ್ತಿ ಹಾಗೂ ವಿಶೇಷವಾಗಿ ಮುಖ್ಯ ಕಾರ್ಯನಿರ್ವಾಹಾಧಿಕಾರಿ ರವಿಕುಮಾರ್ ಕಾರ್ಯಕ್ಷಮತೆ.ಮುಂದಿನ ದಿನದಲ್ಲಿ ಹೊಸ ಸಾಲ ಸೇರಿದಂತೆ ವಿನೂತನ ಯೋಜನೆಗಳನ್ನು ಸಂಘ ರೂಪಿಸಲಿ ಹಾಗೂ ಬೇಲೂರಿನಲ್ಲಿ ಸಹಕಾರಿ ಕ್ಷೇತ್ರ ಬೆಳೆಯಲು ಎಂ.ಎ.ನಾಗರಾಜು ಅವರು ಕೆಲಸ ಅನನ್ಯವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್,ಸಂಘದ ಉಪಾಧ್ಯಕ್ಷೆ ಚನ್ನಮ್ಮ, ನಿರ್ದೇಶಕರಾದ ಎಂ.ವಿರೂಪಾಕ್ಷ, ಪುಟ್ಟಸ್ವಾಮಿಗೌಡ,ಜಯಣ್ಣ, ದೊಡ್ಡೇಗೌಡ,ಸಿದ್ದಬಸವನಾಯಕ,ತೀರ್ಥೆಶ್,ಜಗದೀಶ್, ವಸಂತಮ್ಮ ಸೇರಿದಂತೆ ಇನ್ನು ಮುಂತಾದವರು ಹಾಜರಿದ್ದರು.
—————–ರವಿಕುಮಾರ್