ಮಧುಗಿರಿ-ಪಟ್ಟಣದ ಬೆಸ್ಕಾಂ ಕಚೇರಿಯ ಆವರಣದಲ್ಲಿರುವ ಆಂಜನೇಯ ಸ್ವಾಮಿ ದೇಗುಲದ ಆವರಣದಲ್ಲಿ ಪ್ರತಿಷ್ಠಾಪಿಸಲಾಗಿರುವ 101 ಗಣಪತಿಗಳು ತಾಲೂಕಿನ ಜನರ ಮನಸೆಳೆಯುತ್ತಿವೆ.
ಶ್ರೀ ವಿದ್ಯುತ್ ಗಣಪತಿ ಸಮಿತಿಯವರು ಪ್ರತಿವರ್ಷದಂತೆ ಈ ವರ್ಷವೂ ವಿಶೇಷವಾಗಿ ಗಣಪತಿ ಉತ್ಸವವನ್ನು ಆಚರಿಸುತ್ತಿದ್ದು ಈ ಬಾರಿ 101 ಗಣಪತಿಗಳನ್ನು ಪ್ರತಿಷ್ಠಾಪಿಸಿ ಮಂಟಪಕ್ಕೆ ತಾಲೂಕಿನ ಖ್ಯಾತ ದಂಡೂರು ಬಾಗಿಲಿನ ವಿನ್ಯಾಸವನ್ನು ಮಾಡಿದ್ದು ಆಕರ್ಷಣೀಯವಾಗಿದೆ.
ದೊಡ್ಡ ಗಾತ್ರದ ವಿಘ್ನನಿವಾರಕನ ವಿಗ್ರಹದ ಜೊತೆಗೆ ಚಿಕ್ಕಗಾತ್ರದ ನೂರು ವಿಗ್ರಹಗಳನ್ನು ಒಪ್ಪವಾಗಿ ಜೋಡಿಸಿದ್ದು ಶ್ರೀ ವಿದ್ಯುತ್ ಗಣಪತಿ ಸಮಿತಿಯವರ ಕ್ರಿಯಾಶೀಲತೆಗೆ ಕೈಗನ್ನಡಿ ಹಿಡಿದಂತಾಗಿದೆ.
ಪ್ರತಿ ದಿನವೂ ಪ್ರವಾಸಿ ತಾಣಗಳಿಗೆ ಬರುವ ಹಾಗೆ ತಾಲೂಕಿನ ವಿವಿದೆಡೆಯಿಂದ ಭಕ್ತಾದಿಗಳು ಇಲ್ಲಿಗೆ ಬರುತ್ತಿದ್ದು ಗಣಪತಿಯ ಆಶೀರ್ವಾದ ಪಡೆಯುವುದರೊಂದಿಗೆ ಸೆಲ್ಫಿ,ವಿಡಿಯೋ ಗಳನ್ನೂ ಮಾಡಿಕೊಂಡು ಆನಂದಪಡುತ್ತಿದ್ದಾರೆ.
—————–ಪ್ರದೀಪ್ ಮಧುಗಿರಿ