ಎಚ್.ಡಿ.ಕೋಟೆ: ಮಾದಿಗ ಜನಾಂಗಕ್ಕೆ ಒಳ ಮೀಸಲಾತಿಗೆ ಆಗ್ರಹಿಸಿ ತಾಲೂಕಿನ ಮಾದಿಗ ಸಂಘಟನೆಯ ಪದಾಧಿಕಾರಿಗಳು ಬೇಕೇ ಬೇಕು ನ್ಯಾಯ ಬೇಕು, ಜಾರಿಯಾಗಲಿ ಜಾರಿಯಾಗಲಿ ಮೀಸಲಾತಿ ಜಾರಿಯಾಗಲಿ ಎಂಬ ಘೋಷಣೆಗಳನ್ನು ಕೂಗುವ ಮೂಲಕ ಸಭೆಯನ್ನು ನಡೆಸಿದರು.
ಡಾ.ಬಾಬು ಜಗಜೀವರಾಂ ವಿಚಾರ ವೇದಿಕೆ ಮಾಜಿ ಅಧ್ಯಕ್ಷ ಪಿ ನಾಗರಾಜು ಮಾತನಾಡಿ, ಸದಾಶಿವ ಆಯೋಗದ ವರದಿ ಜಾರಿಗೆ ಮಾದಿಗ ಸಮುದಾಯ ಸುಮಾರು 35 ವರ್ಷಗಳಿಂದ ನಿರಂತರವಾಗಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ಮಾಡುತ್ತಿದ್ದು, ರಾಜ್ಯದಲ್ಲಿ 42 ಲಕ್ಷ ಇರುವ ಮಾದಿಗ ಸಮುದಾಯಕ್ಕೆ ಸಾಮಾಜಿಕ ನ್ಯಾಯವನ್ನು ಒದಗಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದರು.
ಕಳೆದ ಎರಡು ಬಾರಿಯಿಂದಲೂ ಮಾದಿಗ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ನ್ಯಾಯಯುತ ಬೇಡಿಕೆಯಾದ ಸದಾಶಿವ ಆಯೋಗ ವರದಿಯನ್ನು ಜಾರಿ ಮಾಡಬೇಕು ಎಂದು ಒತ್ತಾಯಿಸಿ ಮಾ.21 ರಂದು ಬೆಂಗಳೂರಿನ ಫ್ರೀಡಂಪಾರ್ಕ್ ನಲ್ಲಿ ನಡೆಯುವ ಹೋರಾಟಕ್ಕೆ ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನ ಮಾದಿಗ ಸಮುದಾಯದ ಜನರು ಬೆಂಬಲ ನೀಡಿ ಕಾರ್ಯಕ್ರಮಕ್ಕೆ ತಪ್ಪದೆ ಬರಬೇಕು ಎಂದು ಕರೆ ನೀಡಿದರು.

ಹಿರಿಯ ಮುಖಂಡ ಕೃಷ್ಣಾಪುರ ಶಿವಯ್ಯ ಮಾತನಾಡಿ, ಮಾದಿಗ ಸಮುದಾಯದ ಲಕ್ಷಾಂತರ ಜನರು ಹರಿಹರದಿಂದ ಬೆಂಗಳೂರಿನ ಫ್ರೀಡಂಪಾರ್ಕ್ ಗೆ ಪಾದೆಯಾತ್ರೆಯ ಮೂಲಕ ಒಳ ಮೀಸಲಾತಿ ಹೋರಾಟಕ್ಕೆ ಭಾಗವಹಿಸುತ್ತಿದ್ದು, ಮಾ.21ರಂದು ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕುಗಳಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಾತೀತವಾಗಿ ಭಾಗವಹಿಸಿ ಹೋರಾಟಕ್ಕೆ ಬೆಂಬಲವನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.
ಸಭೆಯಲ್ಲಿ ಡಾಕ್ಟರ್ ಬಾಬು ಜಗಜೀವನ್ ವಿಚಾರ ವೇದಿಕೆ ಮಾಜಿ ಅಧ್ಯಕ್ಷ ಪಿ.ನಾಗರಾಜು, ಹೀರಳ್ಳಿ ಪ್ರಕಾಶ್, ಕೃಷ್ಣಾಪುರ ಶಿವಯ್ಯ, ಬೂದನೂರು ವೆಂಕಟೇಶ್, ಕುರ್ಣೇಗಾಲ ಬೆಟ್ಟಸ್ವಾಮಿ, ಎಡತೊರೆ ನಾಗರಾಜ್, ಎಡತೊರೆ ಚೆಲುವರಾಜು. ಬೂದನೂರು ಮಹಾದೇವ, ಮಾತಂಗ ಜನಜಾಗೃತಿ ವೇದಿಕೆ ಅಧ್ಯಕ್ಷ ಬೂದನೂರು ರವೀಶ್, ಉಪಾಧ್ಯಕ್ಷ ಗಿರಿಪ್ರಸಾದ್, ಕಾಳಪ್ಪಾಜಿ ಸಿ. ಸುಭಾಷ್, ಚನ್ನಪ್ಪ, ಸೋಮಣ್ಣ, ಚೇತನ್, ಸಿದ್ದರಾಜು, ಮಂಜು, ಧರ್ಮ ಸೇರಿದಂತೆ ಮತ್ತಿತರರಿದ್ದರು.
- ಶಿವು, ಕೋಟೆ