ಚಿಕ್ಕಮಗಳೂರು-ಶರಣರ ಅಗ್ರ ಗಣ್ಯ ಬಳಗದಲ್ಲಿ ’ ಮಡಿವಾಳ ಮಾಚಿದೇವ’ -ಅತ್ಯಂತ ಪ್ರಕಾಶಮಾನವಾಗಿ ಕಂಡು ಬರುವರು: ಚಿಕ್ಕಮಗಳೂರು-ವಿಧಾನ ಸಭೆ ಕ್ಷೇತ್ರದ-ಶಾಸಕ ಹೆಚ್.ಡಿ. ತಮ್ಮಯ್ಯ

ಚಿಕ್ಕಮಗಳೂರು : ಶರಣರ ಅಗ್ರ ಗಣ್ಯ ಬಳಗದಲ್ಲಿ ’ ಮಡಿವಾಳ ಮಾಚಿದೇವ’ ಅತ್ಯಂತ ಪ್ರಕಾಶಮಾನವಾಗಿ ಕಂಡು ಬರುವರು ಎಂದು ಚಿಕ್ಕಮಗಳೂರು ವಿಧಾನ ಸಭೆ ಕ್ಷೇತ್ರದ ಶಾಸಕ ಹೆಚ್.ಡಿ. ತಮ್ಮಯ್ಯ  ಹೇಳಿದರು.

ಜಿಲ್ಲಾಡಳಿತದ ವತಿಯಿಂದ ಇಂದು ನಗರದ ಕುವೆಂಪು ಕಲಾಮಂದಿರದಲ್ಲಿ ಚಿಕ್ಕಮಗಳೂರು ತಾಲ್ಲೂಕಿನ ತಾಲ್ಲೂಕು ಕಛೇರಿಯ  ಉಪತಹಸೀಲ್ದಾರು ರಾಮ್ ರಾವ್ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿವ ಶರಣರು, ವಚನಕಾರರು ಸಮಾಜದ ಶಾಶ್ವತ ಆಸ್ತಿ, ಸಾಮಾಜಿಕ ಅಸಮಾನತೆ ಹೋಗಲಾಡಿಸುವ ಜೊತೆಗೆ ಜ್ಞಾನ ವಿಸ್ತರಣೆಗೆ ಅವರು ನೀಡಿದ ಕೊಡುಗೆ ಮಹತ್ತರವಾದುದು, ತಮ್ಮ ಕಾಯಕದ ಮೂಲಕ ಸಮಾಜದಲ್ಲಿರುವ ಅಧರ್ಮ, ಅಸಂಸ್ಕೃತಿಯ ಕೊಳಕನ್ನು ಹೋಗಲಾಡಿಸಿದ ಕಾಯಕ ಯೋಗಿ ಮಡಿವಾಳ ಮಾಚಿದೇವರು ಅವರ ಆದರ್ಶಗಳು ಇಂದಿನ ಸಮಾಜದ ಪ್ರತಿಯೊಬ್ಬರಿಗೂ ಸ್ಪೂರ್ತಿದಾಯಕವಾಗಿವೆ. ೧೨ನೇಯ ಶತಮಾನದಲ್ಲಿ ದುರ್ಬಲರ ಶೋಷಣೆ , ಜಾತೀಯತೆ, ಮೇಲು -ಕೀಳು, ತಾರತಮ್ಯ, ಅಸ್ಪೃಶ್ಯತೆ, ಮೂಢ ನಂಬಿಕೆಗಳ ಸೃಷ್ಟಿ , ಶಿಕ್ಷಣದಲ್ಲಿ ಅವಕಾಶ ವಂಚನೆ ಹೀಗೆ ಅನೇಕ ಸಾಮಾಜಿಕ ಅಸಮಾನತೆಯಿಂದ ಜನರು ತುಳಿತಕ್ಕೆ ಒಳಗಾಗಿದ್ದರು. ಇವುಗಳೆಲ್ಲವುಗಳಿಂದ ಮಹಿಳೆಯರು, ವೃತ್ತಿ ನಿರತ ಶ್ರಮಜೀವಿಗಳು , ಬಡವರು, ದೀನ ದಲಿತರು ನಿರಾಶೆ-ಹತಾಶೆಗೊಂಡು ಅಸಹನೀಯ ಬದುಕಿಗೆ ತುತ್ತಾಗಿದ್ದರು. ಸರ್ವರಿಗೂ ಸಮಪಾಲು – ಸಮಬಾಳು ಒದಗಿಸಲು ಬಸವ-ಮಾಚಿದೇವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡರು ಎಂದರು.


ಸಾಹಿತಿ ಸಂಗಮೇಶ್ವರ ಮಾತನಾಡಿ, ಶಿವಶರಣರು, ವಚನಕಾರರು, ಸಮಾಜದ ಶಾಶ್ವತ ಆಸ್ತಿ, ಸಾಮಾಜಿಕ ಅಸಮಾನತೆ ಹೋಗಲಾಡಿಸುವ ಜೊತೆಗೆ ಜ್ಞಾನ ವಿಸ್ತರಣೆಗೆ ಅವರು ನೀಡಿದ ಕೊಡುಗೆ ಮಹತ್ತರವಾದುದ್ದು. ಕಾಯಕ ನಿಷ್ಠೆ, ದಾಸೋಹದಂತಹ ಮೌಲ್ಯಯುತವಾದ ಕಾಣಿಕೆ ನೀಡಿದ್ದು 12ನೇ ಶತಮಾನದ ಕಾಲದಲ್ಲಿ. ಇಂತಹ ಶರಣರು ಮಹಾಪುರುಷರು ಹಾಕಿಕೊಟ್ಟ ಮಾರ್ಗದರ್ಶನ ಹಾಗೂ ಸಂದೇಶಗಳು ಇಂದಿನ ಸಮಾಜಕ್ಕೆ ಪ್ರೇರಣೆಯಾಗಿದ್ದು, ಪ್ರತಿಯೊಬ್ಬರು ಜೀವನದಲ್ಲಿ ಆಳವಡಿಸಿಕೊಂಡು ಮುನ್ನಡೆಯಬೇಕು ಎಂದರು.
ಹಿಂದುಳಿದ ವರ್ಗಗಳ ಒಕ್ಕೂಟದ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ಸಮಾಜದ ಮುಖಂಡ ಜೆ.ಕೆ. ಲೋಕೇಶಪ್ಪ ಮಾತನಾಡಿ ಮಡಿವಾಳ ಮಾಚಿದೇವರ ಜಯಂತಿಯನ್ನು ಸರ್ಕಾರದ ವತಿಯಿಂದ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಲ್ಲೂ  ಆಚರಿಸುವಂತೆ  ಮನವಿ ಮಾಡಿದ ಅವರು. ಹಿಂದುಳಿದ ವರ್ಗಗಳು ಅಭಿವೃದ್ಧಿ ಹೊಂದಿ ಸಮಾಜದ ಮುಖ್ಯ ವಾಹಿನಿಗೆ ಬರಬೇಕಾದರೆ ಆ ಸಮುದಾಯದ ಜನ ಶಿಕ್ಷಣವಂತರಾಗಬೇಕು ಒಳಪಂಗಡಗಳ ಆಂತರಿಕ ವೈರುದ್ಯಗಳನ್ನು ಬದಿಗೊತ್ತಿ ಸಂಘಟಿತರಾಗಬೇಕು ಎಂದು ಸಲಹೆ ಮಾಡಿದರು.

 ಕಾರ್ಯಕ್ರಮದಲ್ಲಿ ಜಿಲ್ಲಾ ಮಡಿವಾಳ ಸಂಘದ ಜಿಲ್ಲಾಧ್ಯಕ್ಷ ಇ.ಹೆಚ್. ಲಕ್ಷ್ಮಣ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ರಮೇಶ್,  ಮಡಿವಾಳ ಸಂಘದ ಕಾರ್ಯದರ್ಶಿ ರಾಮಚಂದ್ರ, ಜಿಲ್ಲಾ ಮಡಿವಾಳ ಸಂಘ ಉಪಾಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಮಡಿವಾಳ ಸಂಘದ ಅಧ್ಯಕ್ಷ  ಸಿ.ಎಂ. ವೇಣು, ಕರ್ನಾಟಕ ರಾಜ್ಯ ಮಡಿವಾಳ ಸಂಘದ ಉಪಾಧ್ಯಕ್ಷ ಕೆ.ಎಂ. ಬಸವರಾಜು ಮುಂತಾದವರಿದ್ದರು.

Leave a Reply

Your email address will not be published. Required fields are marked *

× How can I help you?