ಮಂಡ್ಯ.ಜೂ.11 :- ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಅಂಗವಾಗಿ ಏಕಕಾಲದಲ್ಲಿ ಗರಿಷ್ಠ ಸಂಖ್ಯೆಯ ರಂಗೋಲಿಗಳನ್ನು ಬಿಡಿಸಿ ದಾಖಲೆ ನಿರ್ಮಿಸಿದ ಮದ್ದೂರು ತಾಲ್ಲೂಕು ಅಣ್ಣೂರು ಗ್ರಾಮ ಪಂಚಾಯತ್ ಸಾಧನೆ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ಸೇರ್ಪಡೆ ಆಗಿದೆ.
ಮಹಿಳಾ ಸಶಕ್ತಿಕರಣ ಹಾಗೂ ಸ್ಥಳೀಯ ಆಡಳಿತದಲ್ಲಿ ಮಹಿಳೆಯರ ಸಕ್ರಿಯ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಸಲುವಾಗಿ 2025ರ ಏಪ್ರಿಲ್ 27ರಂದು ರಂಗೋಲಿ ರಚಿಸುವ ಚಟುವಟಿಕೆಯನ್ನು ಅಣ್ಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 03 ಗ್ರಾಮಗಳಲ್ಲಿ ಏಕಕಾಲದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಣ್ಣೂರು, ಆಳಭುಜನಹಳ್ಳಿ ಮತ್ತು ಕಾರ್ಕಳ್ಳಿ ಗ್ರಾಮಗಳಿಂದ ಒಟ್ಟು 1,544 ಮಂದಿ ಭಾಗವಹಿಸಿದ್ದರು. ಅಕ್ಕಿ ಹಿಟ್ಟು, ಅರಿಶಿನ ಪುಡಿ ಮತ್ತು ಬಣ್ಣದ ಮರಳಿನಂತಹ ನೈಸರ್ಗಿಕ ವಸ್ತುಗಳನ್ನು ಬಳಸಿಕೊಂಡು ಒಟ್ಟಾರೆ 1,418 ರಂಗೋಲಿಗಳನ್ನು ರಚಿಸಿ ಗಮನ ಸೆಳೆದಿದ್ದರು.