ಮಂಡ್ಯ:ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬಿರ್ಸಾ ಮುಂಡಾ ಅವರ ಜನ್ಮದಿನಾಚರಣೆಯನ್ನು ನವೆಂಬರ್ 15 ರಂದು ಆಚರಿಸುತ್ತಿದ್ದು ಸ್ವಾತಂತ್ರ ಹೋರಾಟದಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಸಾಹಿತಿ ಕೆ.ಪಿ.ಮೃತ್ಯುಂಜಯ ಹೇಳಿದರು.
ಇಲ್ಲಿನ ಅರ್ಕೇಶ್ವರ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಮೈ ಭಾರತ್ ಮತ್ತು ನೆಹರು ಯುವ ಕೇಂದ್ರ, ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಅರ್ಕೇಶ್ವರ ನಗರ, ಜಾಗೃತಿ ಯುವತಿ ಹಾಗೂ ಮಹಿಳಾ ಮಂಡಳಿ ಅರ್ಕೇಶ್ವರ ನಗರದ ಇವರ ವತಿಯಿಂದ ಜನ-ಜಾತಿ ಗೌರವ ದಿವಸ್ ಕಾರ್ಯಕ್ರಮದಲ್ಲಿ ಬಿರ್ಸಾ ಮುಂಡಾ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಆದಿವಾಸಿಗಳ ಜನಾಂಗಕ್ಕಾಗಿ ತಮ್ಮ ಜೀವನವನ್ನು ಹೋರಾಟಕ್ಕೆ ಮುಡುಪಾಗಿಟ್ಟಿದ್ದ ಒರ್ವ ಸ್ವಾತಂತ್ರ್ಯ ಸೇನಾನಿಯಾಗಿದ್ದ ಇವರು ಗಿರಿಜನರ ಬದುಕನ್ನು ಹಸನಾಗಿಸಲು ನಡೆಸಿದ ಹೋರಾಟ ಆದಿವಾಸಿ ಸಮಾಜಕ್ಕೆ ದಾರಿ ದೀಪವಾಗಿದೆ ಎಂದು ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲ ಹನುಮಂತಯ್ಯ ಮಾತನಾಡಿ,ಒಬ್ಬ ಬುಡಕಟ್ಟು ಸಮುದಾಯದ ವ್ಯಕ್ತಿ ಆಗಿನ ಕಾಲದಲ್ಲೇ ದಿಟ್ಟತನವನ್ನು ತೋರಿ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡಿದ್ದರು ಇವರ ದಿಟ್ಟತನ ಹೋರಾಟಗಳು ಎಲ್ಲರಿಗೂ ಆದರ್ಶ ಪ್ರಾಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅನನ್ಯ ಹಾರ್ಟ್ಸ್ ಸಂಸ್ಥೆಯ ಅಧ್ಯಕ್ಷ ಬಿ.ಎಸ್.ಅನುಪಮಾ, ಉಪನ್ಯಾಸಕರಾದ ಜಿ.ಎನ್.ಮನು, ಎಂ.ಆರ್.ಕೃಷ್ಣೇಗೌಡ, ಸ್ವಾಮಿ, ನಾಗರಾಜು, ಚಂದ್ರು, ನೆಹರು ಯುವ ಕೇಂದ್ರದ ಹರ್ಷ ಭಾಗವಹಿಸಿದ್ದರು.