ಮಂಡ್ಯ-ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ ಹತ್ತು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾದಿಸಲಿದ್ದಾರೆಂದು ಶಾಸಕ ಪಿ.ರವಿಕುಮಾರ್ ಗೌಡ ಗಣಿಗ ಭವಿಷ್ಯ ನುಡಿದರು.
ವಿಧಾನಸಭಾ ಕ್ಷೇತ್ರದ ಬಸರಾಳು ಹೋಬಳಿಯಿಂದ ಮುತ್ತೆಗೆರೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 10 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಚನ್ನಪಟ್ಟಣ ಕ್ಷೇತ್ರಕ್ಕೆ ಕುಮಾರಸ್ವಾಮಿಯವರ ಕೊಡುಗೆ ಶೂನ್ಯ. ಮೊನ್ನೆ ಅವರ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಬೈಕ್ ನಿಂದ ಬಿದ್ದು ಏಟು ಮಾಡಿಕೊಂಡಿದ್ದಾರೆ.ಅದಕ್ಕೆ ಕಾರಣವಾಗಿದ್ದು ರಸ್ತೆ ಗುಂಡಿ. ಆ ಗುಂಡಿಗಳ ಪಿತಾಮಹ ಕುಮಾರಸ್ವಾಮಿಯವರು.ತಾನು ಚುನಾಯಿಸುವ ಕ್ಷೇತ್ರದ ರಸ್ತೆಯನ್ನೇ ಸರಿಪಡಿಸಿಕೊಳ್ಳಲು ಆಗದ ವ್ಯಕ್ತಿಗೆ ಅಲ್ಲಿನ ಜನ ಮತ ಹಾಕುತ್ತಾರಾ ಎಂದು ಪ್ರಶ್ನಿಸಿದರು.
ಕಳೆದ 25 ವರ್ಷದಿಂದ ಇಂದು ಶಂಕುಸ್ಥಾಪನೆ ಮಾಡಿದ ರಸ್ತೆ ಕಾಮಗಾರಿ ನಡೆದಿರಲಿಲ್ಲ.ಇಂದು ಬಸರಾಳು ಗ್ರಾಮದಲ್ಲಿ 10ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭವಾಗಿದೆ. ಬಸರಾಳು ಹೋಬಳಿಗೆ 100 ಕೋಟಿ ರೂ ಅನುದಾನ ಕೊಟ್ಟಿದ್ದೇವೆ ಮತಷ್ಟು ಅಭಿವೃದ್ಧಿ ಕಾರ್ಯಕ್ರಮ ಮಾಡಲಿದ್ದೇವೆ ಎಂದರು.
ಒಬ್ಬ ಶಾಸಕನಾಗಿಯೇ ನನ್ನ ಕ್ಷೇತ್ರದ ಅಭಿವೃದ್ಧಿಗೆ ಇಷ್ಟೆಲ್ಲವನ್ನೂ ನಾನು ಮಾಡುವಾಗ ಮುಖ್ಯಮಂತ್ರಿಗಳಾಗಿದ್ದವರು ಎಷ್ಟು ಕೆಲಸ ಮಾಡಬಹುದು.ಕೇವಲ ಮತಕ್ಕಾಗಿ ಜಾತೀ ರಾಜಕಾರಣ ಮಾಡುವುದು,ಅತ್ತು ಕರೆದು ಜನರನ್ನು ಮಂಗ ಮಾಡುವ ಅವರ ಅಟಾಟೋಪಕ್ಕೆ ಈ ಬಾರಿ ಚನ್ನಪಟ್ಟಣದ ಪ್ರಭುದ್ದ ಮತದಾರರು ಬ್ರೇಕ್ ಹಾಕಲಿದ್ದಾರೆ ಎಂದು ಹೇಳಿದರು.
ನಾನು ಮತ್ತೆ ಮುಖ್ಯಮಂತ್ರಿ ಆಗುತ್ತೇನೆ ಎಂಬ ಹೆಚ್ಡಿಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕುಮಾರಣ್ಣನಿಗೆ ಹಗಲು ಗನಸು.ಕೊಟ್ಟಾಗ ಕುದುರೆ ಏರಲ್ಲ.ಬಿದ್ದಾಗ ಮತ್ತೆ ಕುದುರೆ ಹಿಡಿಯೋದಕ್ಕೆ ಓಡ್ತಾರೆ.19 ಸೀಟ್ ಇಟ್ಟುಕೊಂಡು ಸಿಎಂ ಆಗೋದಕ್ಕೆ ಸಾಧ್ಯವೇ? ಎಂದು ವ್ಯಂಗ್ಯವಾಡಿದರು.
ಸಿಎಂ ಸಿದ್ದರಾಮಯ್ಯ ಲೋಕಾಯುಕ್ತ ವಿಚಾರಣೆ ಪ್ರಶ್ನೆಗೆ,ಹಿಂದುಳಿದ ವರ್ಗಗಳ ನಾಯಕ ಎರಡನೇ ಬಾರಿ ಸಿಎಂ ಆಗಿದ್ದಾರೆ ಎಂದು ಬಿಜೆಪಿ-ಜೆಡಿಎಸ್ ಸೇರಿ ಸರ್ಕಾರ ಅಸ್ಥಿರ ಮಾಡಲು ರೂಪಿಸಿರುವ ಷಡ್ಯಂತ್ರವಷ್ಟೇ.50ಕೋಟಿ ಕೊಡುವ ಆಮೀಷ ಒಡ್ಡಿ ನಮ್ಮ ಪಕ್ಷದ ಶಾಸಕರನ್ನ ಖರೀದಿ ಮಾಡಲು ಹೋರಟಿದ್ರು.ನಮ್ಮ ಶಾಸಕರು ಯಾರು ಅವರ ಬಲೆಗೆ ಬೀಳದ ಸಂದರ್ಭದಲ್ಲಿ,ಇವರ ಸರ್ಕಾರ ಹೆಸರು ಮಾಡುತ್ತೆ ಎಂದು ಸಿಎಂ ಅವರನ್ನ ಈ ಕುತಂತ್ರದಲ್ಲಿ ಸಿಲಿಕಿಸಿದ್ದಾರೆ.ಈ ಬಗ್ಗೆ ಸಮಯ ಬಂದಾಗ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.
ವಕ್ಫ್ ವಿವಾದ ಕುರಿತು ಮಾತನಾಡಿ,ವಕ್ಫ್ ವಿವಾದ ಕಳೆದ ಬಿಜೆಪಿ ಸರ್ಕಾರದಲ್ಲಿ ಮಾಡಿರುವ ಕುತಂತ್ರವಾಗಿದೆ.ವಿಂಡ್ಸರ್ ಮ್ಯಾನರ್,ರ್ಯಾಡಿಷನ್ ಬ್ಲೂ ಹೋಟೆಲ್ ಗಳನ್ನು ಮೊದಲು ಅವರು ಬಿಡಿಸಿಕೊಳ್ಳಲಿ.ರೈತರ ತಂಟೆಗೆ ಬಂದ್ರೆ ನೇಗಿಲು ತೆಗೆದುಕೊಂಡು ಹೊಡೆಯುತ್ತಾರೆ.ನಾವು ರೈತರ ಪರ ಇದ್ದೇವೆ ಎಂದು ತಿಳಿಸಿದರು.
ಸುಮ್ಮನೆ ರೈತರ ಜೊತೆ ವಕ್ಫ್ ಬೋರ್ಡ್ ಚೆಲ್ಲಾಟವಾಡಬಾರದು.ಬಿಜೆಪಿ-ಜೆಡಿಎಸ್ ಪರವಾದ ಅಧಿಕಾರಿಗಳು ಮಾಡಿರುವ ಷಡ್ಯಂತ್ರ ಇದು ಆ ಅಧಿಕಾರಿಗಳನ್ನು ಗುರುತಿಸಿ ತನಿಖೆಗೆ ಒಳಪಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಕಂಬದಹಳ್ಳಿ ಪುಟ್ಟಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಪ್ಪಾಜಿಗೌಡ, ಬಸರಾಳು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜವರಯ್ಯ, ಕಾಂಗ್ರೆಸ್ ಮುಖಂಡರುಗಳಾದ ರವಿ ಬೋಜೇಗೌಡ, ಶಂಕರ್, ರಾಜು,ಪ್ರದೀಪ್ ಸೇರಿದಂತೆ ಇತರರು ಉಪಸ್ಥಿತರಿದ್ದರು.